ಬೆಂಗಳೂರು(ಜು.16): ಕರ್ನಾಟಕ ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತಂದಿರುವ ಸರ್ಕಾರ, ಒಬ್ಬ ವ್ಯಕ್ತಿಯು ಹೊಂದಿರಬಹುದಾದ ಅಥವಾ ಖರೀದಿಸಬಹುದಾದ ಭೂಮಿಯ ಪ್ರಮಾಣವನ್ನು ದ್ವಿಗುಣಗೊಳಿಸಿದೆ. ಅದರಂತೆ ಒಬ್ಬ ವ್ಯಕ್ತಿ 108 ಎಕರೆ (20 ಯೂನಿಟ್‌) ಒಣ ಭೂಮಿ ಅಥವಾ 26 ಎಕರೆ ಎ- ದರ್ಜೆ ನೀರಾವರಿ ಭೂಮಿ ಹೊಂದಲು ಅವಕಾಶ ಕಲ್ಪಿಸಲಾಗಿದೆ.

ಇನ್ನು, ಐದು ಸದಸ್ಯರಿರುವ ಕುಟುಂಬವು 20 ಯೂನಿಟ್‌ ಜೊತೆಗೆ ಪ್ರತಿ ಸದಸ್ಯರು ಹೆಚ್ಚುವರಿಯಾಗಿ ತಲಾ 4 ಯೂನಿಟ್‌ ಜಮೀನು ಹೊಂದಲು ಅವಕಾಶ ಕಲ್ಪಿಸಿದ್ದು, ಒಟ್ಟು 40 ಯೂನಿಟ್‌ (216 ಎಕರೆ ಒಣ ಭೂಮಿ) ಹೊಂದಬಹುದು. ನೀರಾವರಿ ಸೌಲಭ್ಯ ಹೊಂದಿರುವ ಎ-ದರ್ಜೆ ಭೂಮಿಯಾದರೆ ಒಂದು ಕುಟುಂಬ 52 ಎಕರೆ ಹೊಂದಬಹುದು. ಇದಕ್ಕಾಗಿ ನಾಲ್ಕು ರೀತಿಯ ಭೂಮಿಗಳನ್ನು ವರ್ಗೀಕರಣ ಮಾಡಿದ್ದು, ಯೂನಿಟ್‌ಗಳ ಮಾನದಂಡದಲ್ಲಿ ಎಷ್ಟುಭೂಮಿ ಹೊಂದಬಹುದು ಎಂಬ ಬಗ್ಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ ಪ್ರಸಾದ್‌ ಅವರು ಮಾಹಿತಿ ನೀಡಿದ್ದಾರೆ.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಕೈಬಿಡಲು ಆಗ್ರಹ

ಈ ಮೊದಲು ಕುಟುಂಬವಿಲ್ಲದ ಒಬ್ಬ ವ್ಯಕ್ತಿ 10 ಯೂನಿಟ್‌ವರೆಗೆ ಭೂಮಿ ಹೊಂದಿರಲು ಅವಕಾಶವಿತ್ತು. ಕುಟುಂಬವಿದ್ದು, 5ಕ್ಕಿಂತ ಹೆಚ್ಚು ಸದಸ್ಯರಿದ್ದರೆ 10 ಯೂನಿಟ್‌ ಜೊತೆಗೆ ಪ್ರತಿಯೊಬ್ಬರಿಗೆ 2 ಯೂನಿಟ್‌ನಂತೆ ಹೆಚ್ಚುವರಿ ಜಮೀನು ಹೊಂದಬಹುದು. ಆದರೆ ಒಟ್ಟಾರೆ ಜಮೀನು 20 ಯೂನಿಟ್‌ ಮೀರಬಾರದು ಎಂದಿತ್ತು. ಇದೀಗ ಒಬ್ಬ ವ್ಯಕ್ತಿ ಹೊಂದಿರಬಹುದಾದ ಜಮೀನನ್ನು 20 ಯೂನಿಟ್‌ಗೆ ಹೆಚ್ಚಳ ಮಾಡಲಾಗಿದೆ. ಕುಟುಂಬದ ಸದಸ್ಯರಿದ್ದರೆ 20 ಯೂನಿಟ್‌ ಜೊತೆಗೆ ಪ್ರತಿಯೊಬ್ಬ ಸದಸ್ಯರಿಗೆ ತಲಾ 4 ಯೂನಿಟ್‌ನಂತೆ ಹೆಚ್ಚುವರಿ ಜಮೀನು ಖರೀದಿಸಬಹುದು. ಆದರೆ ಒಟ್ಟು ಜಮೀನು 40 ಯೂನಿಟ್‌ ಮೀರಬಾರದು ಎಂದು ತಿಳಿಸಲಾಗಿದೆ.

ನಾಲ್ಕು ರೀತಿಯ ಜಮೀನು ವರ್ಗೀಕರಣ:

ರಾಜ್ಯದಲ್ಲಿ ಕೃಷಿ ಜಮೀನನ್ನು ನಾಲ್ಕು ರೀತಿಯಲ್ಲಿ ವರ್ಗೀಕರಿಸಲಾಗಿದೆ. ಯಾವುದೇ ಭೂಮಿ ಶಾಶ್ವತ ನೀರಾವರಿ ಹೊಂದಿದ್ದು, ಉದಾ: ಸರ್ಕಾರಿ ಕಾಲುವೆ, ಕೆರೆ ನೀರಿನಲ್ಲಿ ವರ್ಷದಲ್ಲಿ ಎರಡು ಬಾರಿ ಭತ್ತ ಅಥವಾ ಒಂದು ಕಬ್ಬು ಬೆಳೆ ಪಡೆಯುತ್ತಿದ್ದರೆ ಅದನ್ನು ಎ-ದರ್ಜೆ ಭೂಮಿ ಎಂದು ವರ್ಗೀಕರಿಸಲಾಗಿದೆ.

ಗಣಿ ಮಾಲೀಕರಿಂದ ಲಂಚ ಪಡೆದಿಲ್ಲ: ದೇವರ ಮುಂದೆ ಸಿಎಂ ಪುತ್ರ ವಿಜಯೇಂದ್ರ ಪ್ರಮಾಣ

ವರ್ಷಕ್ಕೆ ಒಂದು ಬಾರಿ ಮಾತ್ರ ಭತ್ತ ಬೆಳೆಯಲು ಸಾಧ್ಯವಾಗುವಷ್ಟುಸರ್ಕಾರಿ ಮೂಲದ ಶಾಶ್ವತ ನೀರಾವರಿ ಇದ್ದರೆ ಅದನ್ನು ಬಿ-ದರ್ಜೆ ಜಮೀನು ಎಂದು ಗುರುತಿಸಲಾಗಿದೆ. ಎ ದರ್ಜೆ ಹಾಗೂ ಬಿ-ದರ್ಜೆ ವರ್ಗಕ್ಕೆ ಬಾರದ ಸರ್ಕಾರಿ ನೀರಾವರಿ ಯೋಜನೆಯ ವ್ಯಾಪ್ತಿಗೆ ಬರುವ ಜಮೀನುಗಳನ್ನು ಸಿ-ದರ್ಜೆ ಎಂದು ಪರಿಗಣಿಸಲಾಗಿದೆ. ಉಳಿದಂತೆ ಯಾವುದೇ ನೀರಾವರಿ ಮೂಲವಿಲ್ಲದ ಒಣ ಭೂಮಿಯನ್ನು ಡಿ-ದರ್ಜೆ ಭೂಮಿ ಎಂದು ಕರೆಯಲಾಗುತ್ತದೆ.

ಯೂನಿಟ್‌ಗೆ ಎಷ್ಟುಎಕರೆ:

ನೀರಾವರಿ ಲಭ್ಯತೆ, ಜಮೀನಿನ ಮೌಲ್ಯ, ಫಲವತ್ತತೆ ಆಧಾರದಲ್ಲಿ ಮಾಡುವ ಜಮೀನು ವರ್ಗೀಕರಣದ ಮೇಲೆ ಪ್ರತಿ ಯೂನಿಟ್‌ಗೂ ಜಮೀನಿನ ವಿಸ್ತೀರ್ಣ ಬದಲಾಗುತ್ತದೆ. ಎ ದರ್ಜೆಯ ಜಮೀನು ಪ್ರತಿ ಯೂನಿಟ್‌ಗೆ 1.3 ಎಕರೆ, ಬಿ ದರ್ಜೆಯ ಜಮೀನು 2 ಎಕರೆಯಿಂದ 2.5 ಎಕರೆ, ಸಿ ದರ್ಜೆಯ ಜಮೀನು 3 ಎಕರೆಗೆ ಒಂದು ಯುನಿಟ್‌, ಡಿ ದರ್ಜೆಯ ಜಮೀನು ಪ್ರತಿ ಯೂನಿಟ್‌ಗೆ 5.4 ಎಕರೆ ಎಂದು ಪರಿಗಣಿಸಲಾಗಿದೆ.

5 ಸದಸ್ಯರ ಕುಟುಂಬ ಹೊಂದಬಹುದಾದ ಗರಿಷ್ಠ ಜಮೀನು

ಎ- ವರ್ಗದ ಜಮೀನು - 52 ಎಕರೆ

ಬಿ ವರ್ಗದ ಜಮೀನು - 80 ಎಕರೆ

ಸಿ ವರ್ಗದ ಜಮೀನು - 120 ಎಕರೆ

ಡಿ ವರ್ಗದ ಜಮೀನು - 216 ಎಕರೆ

ಯಾರು ಬೇಕಿದ್ದರೂ ಕೃಷಿ ಭೂಮಿ ಖರೀ​ದಿ​ಸ​ಬ​ಹು​ದು: ಸುಗ್ರೀವಾಜ್ಞೆಗೆ ರಾಜ್ಯಪಾಲ ಅಂಕಿತ!

ವ್ಯಕ್ತಿಯೊಬ್ಬ ಹೊಂದಬಹುದಾದ ಗರಿಷ್ಠ ಜಮೀನು

ಎ ವರ್ಗದ ಜಮೀನು - 26 ಎಕರೆ

ಬಿ ವರ್ಗದ ಜಮೀನು - 40 ಎಕರೆ

ಸಿ ವರ್ಗದ ಜಮೀನು - 60 ಎಕರೆ

ಡಿ ವರ್ಗದ ಜಮೀನು - 108 ಎಕರೆ

ಭೂ ಸುಧಾರಣಾ ಕಾಯಿದೆ ತಿದ್ದುಪಡಿಯಿಂದ ಒಬ್ಬ ವ್ಯಕ್ತಿ ಹೊಂದಿರಬಹುದಾದ ಗರಿಷ್ಠ ಜಮೀನು (ಒಣಭೂಮಿ) ಪ್ರಮಾಣ 54 ಎಕರೆಯಿಂದ 108 ಎಕರೆಗೆ ಹೆಚ್ಚಳವಾಗಿದೆ. ಇದೇ ರೀತಿ ಜಮೀನು ವರ್ಗೀಕರಣದ ಆಧಾರದ ಮೇಲೆ ವ್ಯಕ್ತಿ ಅಥವಾ ಕುಟುಂಬ ಹೊಂದಬಹುದಾದ ಜಮೀನಿನ ಪ್ರಮಾಣದ ಮಿತಿ ಹೆಚ್ಚಾಗಿದೆ.

- ಎನ್‌. ಮಂಜುನಾಥಪ್ರಸಾದ್‌, ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ

432 ಎಕರೆ ಗೇಣಿಗೆ ಅವಕಾಶ

ಭೂ ಮಾಲಿಕರಿಂದ ಗೇಣಿ ಪಡೆದು ಉಳುಮೆ ಮಾಡಲು ಇದ್ದ 40 ಯೂನಿಟ್‌ಗಳ ಮಿತಿಯನ್ನು 80 ಯೂನಿಟ್‌ಗೆ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಗೇಣಿದಾರ (ಬಾಡಿಗೆದಾರ) ಭೂ ಮಾಲಿಕರಿಂದ ಬರೋಬ್ಬರಿ 432 ಎಕರೆ ಒಣ ಭೂಮಿಯನ್ನು ಗುತ್ತಿಗೆಗೆ ಪಡೆಯಲು ಅವಕಾಶವಿದೆ. ಈ ಮೊದಲು ಇದರ ಮಿತಿ 216 ಎಕರೆ ಇತ್ತು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.