ಬೆಂಗಳೂರು(ಜ.09): ರಾಜ್ಯದಲ್ಲಿನ ಎಲ್ಲಾ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಎಂಜಿನಿಯರಿಂಗ್‌ ಸೀಟುಗಳಿಗೆ ಮುಂದಿನ ವರ್ಷದಿಂದ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದ್ದು, ಇದಕ್ಕೆ ಬಹುತೇಕ ವಿಶ್ವವಿದ್ಯಾಲಯಗಳು ಒಪ್ಪಿಗೆ ನೀಡಿವೆ ಎಂದು ತಿಳಿದು ಬಂದಿದೆ.

ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಖಾಸಗಿ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳ ಜೊತೆ ಶುಕ್ರವಾರ ಮೊದಲ ಸುತ್ತಿನ ಸಭೆ ನಡೆದಿದ್ದು, ರಾಜ್ಯದ ಎಲ್ಲಾ ಖಾಸಗಿ ವಿವಿಗಳ ಕುಲಪತಿಗಳು ಭಾಗವಹಿಸಿ ಸರ್ಕಾರದ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದ್ದಾರೆ.

 

ಈ ಸಂಬಂಧ ಕೆಲವೇ ದಿನಗಳಲ್ಲಿ ಇನ್ನೊಂದು ಸುತ್ತಿನ ಸಭೆ ನಡೆಸಿ ಅಂತಿಮವಾಗಿ ನಿರ್ಧಾರ ಪ್ರಕಟಿಸುವ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಪ್ರಸ್ತುತ ರಾಜ್ಯದಲ್ಲಿ 10 ವಿವಿಗಳು ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಒತ್ತಡ ಹಾಗೂ ಆರ್ಥಿಕ ಹೊರೆಯಾಗುತ್ತಿದೆ. ಇದನ್ನು ತಪ್ಪಿಸಲು ಸರ್ಕಾರಿ ಸೀಟುಗಳಿಗೆ ನಡೆಯುವ ಸಿಇಟಿ ಮತ್ತು ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳು ನಡೆಸುವ ಕಾಮೆಡ್‌ಕೆ ಮಾದರಿಯಲ್ಲಿ ಎಲ್ಲಾ ಖಾಸಗಿ ವಿವಿಗಳ ಸೀಟುಗಳ ಪ್ರವೇಶಕ್ಕೆ ಒಂದೇ ಪ್ರವೇಶ ಪರೀಕ್ಷೆ ನಡೆಸಲು ಸರ್ಕಾರದ ಪ್ರವೇಶ ಮೇಲ್ವಿಚಾರಣಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆ ನಿಟ್ಟಿನಲ್ಲಿ ಕ್ರಮ ವಹಿಸಲು ಸರ್ಕಾರ ಹೊರಟಿದೆ.

ಸದ್ಯ, ಸಿಇಟಿ ಮತ್ತು ಕಾಮೆಡ್‌-ಕೆ ಪರೀಕ್ಷೆಗಳ ಜೊತೆಗೆ ಕರ್ನಾಟಕ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ವೃತ್ತಿಪರ ಕಾಲೇಜುಗಳ ಸಂಸ್ಥೆ (ಕೆಆರ್‌ಎಲ್‌ಎಂಪಿಸಿಎ) ಹಾಗೂ ಅಲ್ಪಸಂಖ್ಯಾತ ವೃತ್ತಿಪರ ಕಾಲೇಜುಗಳ ಸಂಸ್ಥೆ (ಎಎಂಪಿಸಿಕೆ)ಯು ಪ್ರತ್ಯೇಕ ಸಿಇಟಿ ನಡೆಸುತ್ತಿದೆ. ಅಲ್ಲದೆ, ಖಾಸಗಿ ಕೋಟಾದ ಸೀಟುಗಳಿಗಾಗಿ ಖಾಸಗಿ ವಿಶ್ವವಿದ್ಯಾಲಯಗಳೂ ಪ್ರವೇಶ ಪರೀಕ್ಷೆ ನಡೆಸುತ್ತಿವೆ.