ಬಂಡೀಪುರ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ.
ಗುಂಡ್ಲುಪೇಟೆ: ಬಂಡೀಪುರ ಅರಣ್ಯದ ಗೋಪಾಲಸ್ವಾಮಿ ಬೆಟ್ಟದ ವಲಯದಲ್ಲಿ ಬೆಂಕಿ ಬಿದ್ದು ಸುಮಾರು 15 ಸಾವಿರ ಎಕರೆ ಅರಣ್ಯ ನಾಶವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಗುರುವಾರ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಕಳ್ಳೀಪುರ ಗ್ರಾಮದ ಅರುಣ್ ಕುಮಾರ್ ಬಂಧಿತ ಆರೋಪಿಯಾಗಿದ್ದಾನೆ. ಗೋಪಾಲಸ್ವಾಮಿ ಬೆಟ್ಟವಲಯ ಅರಣ್ಯಾಧಿಕಾರಿ ಪುಟ್ಟಸ್ವಾಮಿ ಆರೋಪಿ ಅರುಣ್ ಕುಮಾರ್‌ನನ್ನು ಬಂಧಿಸಿ ಗುಂಡ್ಲುಪೇಟೆ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಬಂಧಿತನ ವಿಚಾರಣೆ ನಡೆಯುತ್ತಿದೆ. ಬೆಂಕಿ ಹಚ್ಚಲು ಕಾರಣ ಏನು ಎಂದು ಹಲವಾರು ರೀತಿಯಲ್ಲಿ ಆರೋಪಿಯನ್ನು ಅರಣ್ಯಾಧಿಕಾರಿ ಪುಟ್ಟಸ್ವಾಮಿ ವಿಚಾರಣೆ ನಡೆಸಿದ್ದಾರೆ. ಆದರೆ, ಆತ ತುಟಿ ಬಿಚ್ಚಿಲ್ಲ ಎಂದು ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.
ಬೆಂಕಿ ಹಚ್ಚಿದ ಸಂಬಂಧ ಬಂಧಿತ ಆರೋಪಿ ಅರುಣ್ ಕುಮಾರ್ ಮತ್ತೆ ತನಿಖಾಧಿಕಾರಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದರೆ ಬೆಂಕಿ ಹಚ್ಚಲು ಹೇಳಿದವರ ಮತ್ತಷ್ಟುಮಂದಿಯ ಹೆಸರು ಬಯಲಾಗುವ ಸಾಧ್ಯತೆ ಹೆಚ್ಚಿದೆ. ಈ ಕುರಿತು ಗೋಪಾಲಸ್ವಾಮಿ ಬೆಟ್ಟದ ಅರಣ್ಯಾಧಿಕಾರಿ ಪುಟ್ಟಸ್ವಾಮಿ ಮಾತನಾಡಿ, ಈ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಮೊಬೈಲ್ ಹಾಗೂ ಅನುಮಾನಿತರ ಮೊಬೈಲ್‌ಗಳನ್ನು ಸಿಡಿಆರ್ ಹಾಕಿಸಲು ಪೊಲೀಸರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
