Asianet Suvarna News Asianet Suvarna News

ರಾಜ್ಯದಲ್ಲಿ ವೃದ್ಧರ ಪಿಂಚಣಿ ಸೇವೆ ಸ್ಥಗಿತಕ್ಕೆ : ಏನಿದು ಅವಾಂತರ?

ರಾಜ್ಯದಲ್ಲಿ ಹಲವು ವೃದ್ಧರಿಗೆ ಪಿಂಚಣಿ ಸ್ಥಗಿತಗೊಂಡಿದ್ದು ಇದರಿಂದ ಸರ್ಕಾರದ ವಿರುದ್ಧ ಸ್ಪೀಕರ್ ಗರಂ ಆಗಿದ್ದಾರೆ. 

Old people did not get pension from 6 month  Speaker Slams Karnataka Govt snr
Author
Bengaluru, First Published Dec 8, 2020, 7:27 AM IST

ವಿಧಾನಸಭೆ (ಡಿ.08):  ರಾಜ್ಯದಲ್ಲಿ ಲಕ್ಷಾಂತರ ಫಲಾನುಭವಿಗಳಿಗೆ ಕಳೆದ ಆರು ತಿಂಗಳಿಂದ ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ಸಾಮಾಜಿಕ ಪಿಂಚಣಿಗಳು ಸ್ಥಗಿತಗೊಂಡಿವೆ. ಇದು ವ್ಯವಸ್ಥೆಯ ಲೋಪವನ್ನು ಎತ್ತಿ ತೋರಿಸುತ್ತದೆ ಎಂದು ಖುದ್ದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಿಡಿ ಕಾರಿದ್ದಾರೆ. 

ವಿಶ್ವೇಶ್ವರ ಹೆಗಡೆ ಕಾಗೇರಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್‌ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರಿಂದ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಉತ್ತರಿಸಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಪಿಂಚಣಿ ವಿಳಂಬದ ಬಗ್ಗೆ ತಕ್ಷಣ ಪರಿಶೀಲಿಸಿ ಹಣ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. 

60 ವರ್ಷ ಮೇಲ್ಪಟ್ಟವರಿಗೆ ಇಲ್ಲಿದೆ ಗುಡ್ ನ್ಯೂಸ್

ಸೋಮವಾರ ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆ ಅಡಿ ಮಾತನಾಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ಕಳೆದ ಆರು ತಿಂಗಳಿಂದ ವೃದ್ಧಾಪ್ಯ ವೇತನ ಸೇರಿದಂತೆ ಸಾಮಾಜಿಕ ಪಿಂಚಣಿಗಳು ಪಾವತಿಯಾಗುತ್ತಿಲ್ಲ. ಹಿರಿಯ ನಾಗರಿಕರು ಹಣ ಸಿಗದೆ ಪರದಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಂದಾಯ ಸಚಿವರ ಪರ ಉತ್ತರ ನೀಡಿದ ವಸತಿ ಸಚಿವ ವಿ. ಸೋಮಣ್ಣ, ತಾಂತ್ರಿಕ ಕಾರಣಗಳು ಹಾಗೂ ಫಲಾನುಭವಿಯ ವಿವರಗಳಲ್ಲಿನ ತಿದ್ದುಪಡಿಗಾಗಿ 7.50 ಲಕ್ಷ ಮಂದಿಯ ಪಿಂಚಣಿ ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ಬಹುತೇಕ ಸಮಸ್ಯೆ ನಿವಾರಣೆಯಾಗಿದ್ದು, ಉಳಿದ 3.02 ಲಕ್ಷ ಮಂದಿಗೂ ಪರಿಶೀಲನೆ ನಡೆಸಿ ಕೂಡಲೇ ಹಣ ಬಿಡುಗಡೆ ಮಾಡಲಾಗುವುದು ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಡವರಿಗೆ ಕೊಡುವ ಪಿಂಚಣಿ ಲಕ್ಷಾಂತರ ಮಂದಿಗೆ ಹೋಗುತ್ತಿಲ್ಲ ಎಂದರೆ ಅಧಿಕಾರಿಗಳು ಸೂಕ್ತವಾಗಿ ಅಧಿಕಾರ ನಡೆಸುತ್ತಿಲ್ಲ ಎಂದು ಅರ್ಥ. ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ಇಂತಹ ಪ್ರಕರಣಗಳು ವ್ಯವಸ್ಥೆಯ ದೌರ್ಬಲ್ಯವನ್ನು ತೋರಿಸುತ್ತವೆ. ಬಡವರಿಗೆ ಅನ್ಯಾಯವಾಗುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ವೃದ್ಧಾಪ್ಯ ವೇತನ, ಅಂಗವಿಕಲರ ಪಿಂಚಣಿ, ವಿಧವಾ ವೇತನದ ಹಣ 7-8 ತಿಂಗಳಿಂದ ಪಾವತಿಯಾಗಿಲ್ಲ. ಕೊರೋನಾ ಕಾಲದಲ್ಲಿ ಹಣವಿಲ್ಲದೆ ಪರದಾಡುತ್ತಿದ್ದ ಹಿರಿಯ ನಾಗರೀಕರಿಗೆ ತುರ್ತು ಬಳಕೆಗೆ ಈ ಹಣ ನೆರವಾಗುತ್ತಿತ್ತು. ಸರ್ಕಾರದ ಬಳಿ ಪಿಂಚಣಿ ಕೊಡಲೂ ಹಣವಿಲ್ಲ ಎಂದು ಒಪ್ಪಿಕೊಳ್ಳಿ. ಇಲ್ಲದಿದ್ದರೆ ಕೂಡಲೇ ಹಣ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಪಿಂಚಣಿ ವಿಳಂಬವಾಗಿರುವುದು ನಿಮ್ಮ ಮೂಲಕ ಈಗಷ್ಟೇ ಗಮನಕ್ಕೆ ಬಂದಿದೆ. ನೀವು ಗಮನಕ್ಕೆ ತಂದಿರುವ ಅಂಶಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ತಕ್ಷಣ ಪರಿಶೀಲಿಸಿ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Follow Us:
Download App:
  • android
  • ios