ಬೆಂಗಳೂರು, (ಆ.03) : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಕೊರೋನಾ ವೈರಸ್ ಸೋಂಕು ತಗುಲಿದ್ದು, ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಅಲ್ಲದೇ ಗೃಹ ಕಚೇರಿ ಕೃಷ್ಣಾದ ಸಿಬ್ಬಂದಿಗೂ ಪರೀಕ್ಷೆ ಮಾಡಲಾಗುತ್ತಿದ್ದು, 6 ಜನರಿಗೆ ಸೋಂಕು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಗೃಹ ಕಚೇರಿ ಕೃಷ್ಣಾಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. 

ಸಿಎಂಗೆ ಕೊರೋನಾ: ಯಾರನ್ನೆಲ್ಲಾ ಭೇಟಿಯಾಗಿದ್ರು, ಯಾರೆಲ್ಲಾ ಕ್ವಾರಂಟೈನ್ ಆದ್ರು...?

ಆದ್ರೆ, ವಿಧಾನಸೌಧದ 3ನೇ ಮಹಡಿಯಲ್ಲಿರುವ ಯಡಿಯೂರಪ್ಪ ಕಚೇರಿ ಹೊರತುಪಡಿಸಿ, ಇನ್ನುಳಿದ ಸಿಎಂ ಸಚಿವಾಲಯ ಮತ್ತು ಇತರೆ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಣೆ ಮಾಡುತ್ತಿವೆ.

ಮುಖ್ಯಮಂತ್ರಿ ಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರವಿಕುಮಾರ್ , ಆಪ್ತ ಕಾರ್ಯದರ್ಶಿ ರಾಚಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳ ಕಚೇರಿಗಳು ಓಪನ್ ಆಗಿವೆ.

ಕೊರೋನಾ ಪರಿಸ್ಥಿತಿಯ ಆರಂಭದಿಂದಲೂ ಯಡಿಯೂರಪ್ಪ ಗೃಹ ಕಚೇರಿಯಿಂದ ಕೆಲಸ ನಿರ್ವಹಣೆ ಮಾಡುತ್ತಿದ್ದರು. ಸಭೆ, ಪತ್ರಿಕಾಗೋಷ್ಠಿಗಳಿಗೆ ಮಾತ್ರ ವಿಧಾನಸೌಧಕ್ಕೆ ಹೋಗುತ್ತಿದ್ದರು. ಆದ್ದರಿಂದ, ವಿಧಾನಸೌಧದ ಕಚೇರಿ ಎಂದಿನಂತೆ ಕಾರ್ಯ ನಿರ್ವಹಣೆ ಮಾಡಲಿದೆ.

ಸಂಪರ್ಕಕ್ಕೆ ಬಂದಿರುವ ಅಧಿಕಾರಿಗಳಿಗೆ ಟೆಸ್ಟ್
ಹೌದು..ಈಗಾಗಲೇ ಸಿಎಂ ಬಿಎಸ್‌ ಯಡಿಯೂರಪ್ಪ ಅವರ ಗೃಹ ಕಚೇರಿಯ ಸಿಬ್ಬಂದಿಗಳಿಗೆ ಟೆಸ್ಟ್ ಮಾಡಲಾಗಿದ್ದು, ಈ ಪೈಕಿ 6 ಜನರಿಗೆ ಪಾಸಿಟಿವ್ ದೃಢಪಟ್ಟಿದೆ. ಅದೇ ರೀತಿ ಸಿಎಂ ಸಂಪರ್ಕಕ್ಕೆ ಬಂದಿರುವ ಅಧಿಕಾರಿಗಳಿಗೆ ಇಂದು (ಸೋಮವಾರ) ಕೋರೋನಾ ಟೆಸ್ಟ್ ಮಾಡಲಾಗುತ್ತಿದ್ದು, ಟೆಸ್ಟ್ ರಿಪೋರ್ಟ್ ಬರುವ ತನಕ ಅಧಿಕಾರಿಗಳು. ಕ್ವಾರಂಟೈನ್‌ನಲ್ಲಿರಲಿದ್ದಾರೆ.