ರೈಲು ದುರಂತಕ್ಕೆ ಮಸೀದಿ ಕಾರಣ ಸುಳ್ಳು ಸುದ್ದಿ; ತುಮಕೂರು ಬಿಜೆಪಿ ಮುಖಂಡೆಗೆ ಒಡಿಶಾ ಪೊಲೀಸರ ತಲಾಶ
ಒಡಿಶಾ ಭೀಕರ ರೈಲು ದುರಂತಕ್ಕೆ ಪಕ್ಕದಲ್ಲಿನ ಮಸೀದಿ ಕಾರಣವೆಂದು ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ತುಮಕೂರು ಮೂಲದ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಎಸ್ ಮೇಲೆ ಕ್ರಮ ಕೈಗೊಳ್ಳಲು ಒಡಿಶಾ ಪೊಲೀಸರು ಮುಂದಾಗಿದ್ದಾರೆ.

ಬೆಂಗಳೂರು (ಜೂ.5): ಒಡಿಶಾ ಭೀಕರ ರೈಲು ದುರಂತಕ್ಕೆ ಪಕ್ಕದಲ್ಲಿನ ಮಸೀದಿ ಕಾರಣವೆಂದು ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ತುಮಕೂರು ಮೂಲದ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಎಸ್ ಮೇಲೆ ಕ್ರಮ ಕೈಗೊಳ್ಳಲು ಒಡಿಶಾ ಪೊಲೀಸರು ಮುಂದಾಗಿದ್ದಾರೆ.
ರೈಲು ದುರಂತಕ್ಕೆ ಇಂಟರ್‌ಲಾಕಿಂಗ್ ಪ್ರಕ್ರಿಯೆಯಲ್ಲಾಗಿರುವ ಲೋಪವೇ ಕಾರಣವೆಂದು ಸ್ವತಃ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟಪಡಿಸಿದ್ದರು. ಆದ್ರೂ ಎಸ್ ಶಕುಂತಲಾ ಒಡಿಶಾ ದುರಂತಕ್ಕೆ ಪಕ್ಕದಲ್ಲಿರುವ ಮಸೀದಿ ಕಾರಣ ಎಂದು ಬಿಂಬಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಅವರ ಪೋಸ್ಟ್ ವೈರಲ್ ಆಗಿ. ಅದು ಒಡಿಶಾ ಪೊಲೀಸರ ಗಮನಕ್ಕೆ ಬಂದಿದೆ. ಟ್ವೀಟರ್ ಮೂಲಕ ಎಚ್ಚರಿಕೆ ನೀಡಿದ್ದ ಒಡಿಶಾ ಪೊಲೀಸರು. ಕರ್ನಾಟಕ ಪೊಲೀಸರ ಮೂಲಕ ಮಹಿಳೆಯ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ಘಟನೆ ಸ್ಥಳದಲ್ಲಿರುವುದು ಮಸೀದಿಯಲ್ಲ, ಇಸ್ಕಾನ್ ಮಂದಿರ:
ಒಡಿಶಾ ರೈಲು ದುರಂತಕ್ಕೆ ಮಸೀದಿಯೇ ಕಾರಣವೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಕೋಮುದ್ವೇಷಕ್ಕೆ ಕಾರಣವಾಗಿತ್ತು. ಅನೇಕರು ದುರಂತಕ್ಕೆ ಮಸೀದಿಯೇ ಕಾರಣವೆಂದು ಆಕ್ರೋಶವ್ಯಕ್ತಪಡಿಸಿದ್ದರು. ಆದರೆ ವಾಸ್ತವದಲ್ಲಿ ಅಲ್ಲಿ ಮಸೀದಿಯೇ ಇಲ್ಲ. ಅಲ್ಲಿರೋದು ಹಿಂದೂ ದೇಗುಲ, ಇಸ್ಕಾನ್ ದೇವಸ್ಥಾನ ಎನ್ನಲಾಗಿದೆ. ಫೋಟೊಶಾಪ್ ಮೂಲಕ ಮಸೀದಿ ಕ್ರಿಯೆಟ್ ಮಾಡಿ ಹರಿಬಿಡಲಾಗಿದೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿದ ಒಡಿಶಾ ಪೊಲೀಸರು ಮಹಿಳೆಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಸುಳ್ಳು ಸುದ್ದಿ ಹರಡದಂತೆ ಒಡಿಶಾ ಪೊಲೀಸರು ಮೊದಲೇ ಟ್ವೀಟರ್ ಮೂಲಕ ಎಚ್ಚರಿಕೆ ನೀಡಿದ್ದರು. ಅದಾಗ್ಯೂ ಹಲವರು ಸುಳ್ಳು ಸುದ್ದಿ ಹರಿಬಿಟ್ಟಿದ್ದರು. ಸುಳ್ಳು ಸುದ್ದಿಗಳನ್ನು ನೆಟ್ಟಿಗರು ಸ್ಕ್ರಿನ್ ಶಾಟ್ ಮಾಡಿ ಒಡಿಶಾ ಪೊಲೀಸ್ ಟ್ವೀಟರ್ ಮೆನ್ಷನ್ ಮಾಡಿ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಅಂತೆಯೇ ಇದೀಗ ಸುಳ್ಳು ಸುದ್ದಿ ಹರಿಬಿಟ್ಟ ಆರೋಪದ ಮೇಲೆ ಶಕುಂತಲಾ ಎಸ್ ಸಂಕಷ್ಟ ಎದುರಾಗಿದೆ.
ರೈಲು ದುರಂತಕ್ಕೆ ಕೋಮು ಬಣ್ಣ: ಪೊಲೀಸರಿಂದ ಕಠಿಣ ಕ್ರಮದ ಎಚ್ಚರಿಕೆ
ಭುವನೇಶ್ವರ: 288 ಜನರು ಮೃತಪಟ್ಟ ಒಡಿಶಾದ ಬಾಲಸೋರ್‌ನಲ್ಲಿ ನಡೆದ ತ್ರಿವಳಿ ರೈಲು ಅಪಘಾತಕ್ಕೆ ಕೋಮು ದೃಷ್ಟಿಕೋನ ನೀಡುವ ವದಂತಿಗಳನ್ನು ಹರಡುವುದನ್ನು ನಿಲ್ಲಿಸುವಂತೆ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಯಾವುದೇ ವದಂತಿ ಹಬ್ಬಿಸುವವರ ವಿರುದ್ಧ ಕಠಿಮ ಕಾನೂನು ಕ್ರಮ ಕೈಗೊಳ್ಳುವುದಾಗಿ ಒಡಿಶಾ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಒಡಿಶಾ ಪೊಲೀಸ್, ‘ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳು ಬಾಲಾಸೋರ್‌ನಲ್ಲಿ ಸಂಭವಿಸಿದ ರೈಲು ಅಪಘಾತಕ್ಕೆ ಕೋಮು ಬಣ್ಣ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇದು ಅತ್ಯಂತ ದುರದೃಷ್ಟಕರ. ಸುಳ್ಳು ಮತ್ತು ದುರುದ್ದೇಶಪೂರ್ವಕ ಪೋಸ್ಟ್ ಪ್ರಸಾರ ಮಾಡುವುದನ್ನು ತಡೆಯಲು ಸಂಬಂಧಪಟ್ಟಎಲ್ಲರಿಗೂ ನಾವು ಮನವಿ ಮಾಡುತ್ತೇವೆ. ಹೀಗೆ ವದಂತಿ ಸೃಷ್ಟಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದಿದ್ದಾರೆ.
ಟ್ವೀಟರ್‌ನಲ್ಲಿ ಕೆಲವರು, ‘ದುರಂತ ಸ್ಥಳದ ಬಳಿ ಮಸೀದಿ ಇದೆ ಎಂದು ಕಟ್ಟಡವೊಂದನ್ನು ಗುರುತಿಸಿ, ಕೃತ್ಯದ ಹಿಂದೆ ನಿರ್ದಿಷ್ಟಕೋಮಿನ ಜನ ಇದ್ದಾರೆ’ ಎಂದು ದೂರಿದ್ದರು. ಆದರೆ ಬಳಿಕ ಅದು ಮಸೀದಿ ಅಲ್ಲ, ಕೃಷ್ಣ ಮಂದಿರ ಎಂದು ಗೊತ್ತಾಗಿತ್ತು