Asianet Suvarna News Asianet Suvarna News

Srila Prabhupada: ಕೃಷ್ಣಪ್ರಜ್ಞೆಯ ರಾಯಭಾರಿ ಭಕ್ತಿವೇದಾಂತ ಶ್ರೀಲ ಪ್ರಭುಪಾದರು!

ಷ್ಣಪ್ರಜ್ಞೆಯ ಪ್ರತಿಪಾದನೆ ಕೇವಲ ಒಂದು ಆಂದೋಲನವಲ್ಲ, ಅದು ಭಾರತ ಜಗತ್ತಿಗೆ ನೀಡಿದ ಅತ್ಯುನ್ನತ ಪರಿಹಾರ. ಅನೇಕ ಕಾರಣಗಳಿಂದ ವಿಘಟಿತವಾಗಿರುವ, ಪರಸ್ಪರ ಶತ್ರುತ್ವದ ಭಾವವೇ ತುಂಬಿರುವ ಈ ಜಗತ್ತನ್ನು ಒಂದಾಗಿಸುವ ಆಂದೋಲನ. ಭಕ್ತಿವೇದಾಂತ ಪ್ರಭುಪಾದರು ಹರೇ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇಹರೇ ಮಂತ್ರದ ಮೂಲಕ ಇದಕ್ಕೊಂದು ದಾರಿ ತೋರಿಸಿದರು.

oday is the 127th birthday of Srila Prabhupada, the founder of ISKCON rav
Author
First Published Sep 8, 2023, 7:03 AM IST

-ಡಾ.ರೋಣಾಕ್ಷ ಶಿರ್ಲಾಲು

ಭಾರತವು ಜಗತ್ತಿಗೆ ನೀಡಿದ ಅಕ್ಷಯ ನಿಧಿ ಎಂದರೆ ಅಧ್ಯಾತ್ಮಿಕತೆ. ಸಾವಿರಾರು ವರ್ಷಗಳ ಕಾಲ ಈ ನೆಲದ ಭೌತಿಕ ಸಂಪತ್ತನ್ನು ಪರಕೀಯರು ಕೊಳ್ಳೆಹೊಡೆದರೂ, ಯಾರಿಂದಲೂ ದೋಚಲಾಗದೆ ಉಳಿದ ಸಂಪತ್ತೇ ಈ ನೆಲದಲ್ಲಿ ಹುಟ್ಟಿದ ಅಧ್ಯಾತ್ಮಿಕ ಜ್ಞಾನ. ಬೇರೆ ಬೇರೆ ಕಾಲಘಟ್ಟದಲ್ಲಿ ಹುಟ್ಟಿಬಂದ ಸಂತರು, ಸಾಧಕರು ಈ ಜ್ಞಾನವನ್ನೇ ಮೊಗೆಮೊಗೆದು ಜಗತ್ತಿಗೆ ಉಣಿಸಿದರು. ಅಧ್ಯಾತ್ಮವೇ ಈ ನೆಲದ ಗುರುತು, ಜೀವಾಳ. ಇಲ್ಲಿನ ಸಂಸ್ಕೃತಿಯ ತಳಹದಿ. ಇಲ್ಲಿನ ಸಾಧಕರು ಜಗತ್ತಿನ ಸಂಕಟಗಳನ್ನು ಪರಿಹರಿಸುವ ದಿಶೆಯಲ್ಲಿ ಬೆಳಕು ತೋರಿದರು. ಲೌಕಿಕತೆಯ ಮೋಹಪಾಶದಲ್ಲಿ ಜಗತ್ತು ಮುಳುಗಿದ್ದಾಗ, ಮನುಕುಲವನ್ನು ಅದರಿಂದ ಮೇಲೆತ್ತಿ ಮುನ್ನಡೆಯುವಂತೆ ಮಾಡಬಹುದಾದ ದಾರಿ ಯಾವುದು ಎಂದು ಜಿಜ್ಞಾಸೆ ಹುಟ್ಟಿದ ಕಾಲಕ್ಕೆ ಭಾರತದ ಓರ್ವ ವಯೋವೃದ್ಧರು ಹಡಗು ಹತ್ತಿ ಅಪರಿಚಿತ ಅಮೆರಿಕದ ನೆಲದಲ್ಲಿ ಇಳಿದರು. ಅವರ ಕೈಯಲ್ಲಿದ್ದುದು ಬಿಡಿಗಾಸು ಮಾತ್ರ. ಅದು ಗುರುತು ಪರಿಚಯದ ದೇಶವಲ್ಲ. ಜನರೂ ಪರಿಚಿತರಲ್ಲ. ಆದರೆ ಅವರ ಕಣ್ಮುಂದೆ ಒಂದು ದೊಡ್ಡ ಕನಸಿತ್ತು. ಅದು ನಿದ್ದೆಯಲ್ಲಿ ಬಿದ್ದ ಕನಸಲ್ಲ, ನಿದ್ದೆ ಕಳೆವ ಕನಸಾಗಿತ್ತು. ದಣಿವಾಗದ ಆ ‘ವಯೋವೃದ್ಧ’ ಮುಂದೆ ಮಾಡಿದ್ದು ಮಾತ್ರ ಪವಾಡವನ್ನೇ.

ಯಾವ ದೇಶದಲ್ಲಿ ಕೃಷ್ಣನೆನ್ನುವ ಹೆಸರೂ ಅಪರಿಚಿತವಾಗಿತ್ತೋ ಆ ನೆಲದಲ್ಲಿ ಅವರು ಕೃಷ್ಣಪ್ರಜ್ಞೆಯನ್ನು ಬಿತ್ತಲು ಕಾರ್ಯಾರಂಭ ಮಾಡುತ್ತಾರೆ. ಆ ದೇಶದ ಮಹಾನಗರದಲ್ಲಿ ಸುಂದರವಾದ ಕೃಷ್ಣ ಮಂದಿರ ತಲೆ ಎತ್ತಿ ನಿಲ್ಲುವಂತೆ ಮಾಡುತ್ತಾರೆ. ಜನ ಬೀದಿ ಬೀದಿಗಳಲ್ಲಿ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇಹರೇ, ಹರೇ ರಾಮ ಹರೇ ರಾಮ, ರಾಮ ರಾಮ ಹರೇಹರೇ ಎನ್ನುವ ಮಂತ್ರ ಘೋಷದೊಂದಿಗೆ ರಥೋತ್ಸವವನ್ನೇ ನಡೆಸುತ್ತಾರೆ! ಇಂತಹ ಪರಿವರ್ತನೆಯ ಹಿಂದಿನ ಪ್ರೇರಕ ಶಕ್ತಿಯೇ ಭಕ್ತಿ ವೇದಾಂತ ಶ್ರೀಲ ಪ್ರಭುಪಾದರು. ಅವರು ಕಟ್ಟಿದ ಸಂಸ್ಥೆಯೇ ಇಸ್ಕಾನ್‌. ಪ್ರಭುಪಾದರು ಭಕ್ತಿ ತತ್ವದಿಂದಲೇ ಭೌಗೋಳಿಕ, ಜನಾಂಗೀಯ, ಮತೀಯ ಗಡಿಗಳನ್ನು ಮೀರಿ ಜಗತ್ತನ್ನು ಗೆದ್ದು ದಿಗ್ವಿಜಯಿಯಾದರು. ಸ್ವಾಮಿ ವಿವೇಕಾನಂದರು ಧರ್ಮ ಸಮ್ಮೇಳನದಲ್ಲಿ ನಿಂತು ಮೊಳಗಿಸಿದ ಸಿಂಹವಾಣಿ ಜಗತ್ತಿನ ಜನರ ಗಮನವನ್ನು ಸೆಳೆದಂತೆ, ಪ್ರಭುಪಾದರು ಪ್ರಚುರಪಡಿಸಿದ ‘ಹರೇ ಕೃಷ್ಣ ಹರೇ ರಾಮ’ ಎನ್ನುವ ಭಕ್ತಿ ಮಂತ್ರ ಲೌಕಿಕದಲ್ಲಿ ಮುಳುಗಿದ್ದ ಜಗತ್ತನ್ನು ಎಚ್ಚರಿಸಿತು ಎಂದರೆ ಅತಿಶಯೋಕ್ತಿಯಲ್ಲ.

ಅಭಯಚರಣ ಎಂಬ ಅಧ್ಯಾತ್ಮದ ಒಲವಿನ ಸಾಮಾನ್ಯ ವ್ಯಕ್ತಿಯೊಬ್ಬ ಲೌಖಿಕ ಜಗತ್ತಿನಲ್ಲಿ ಎದುರಿಸುವ ಸವಾಲುಗಳಿಂದ ಕಂಗೆಡದೆ, ತನ್ನ ಗುರುಗಳ ಆಸೆಯನ್ನು ಪೂರೈಸುವುದಕ್ಕಾಗಿ, ದೇಶಗಳಲ್ಲಿ ಕೃಷ್ಣ ಪ್ರಜ್ಞೆಯನ್ನು ಜಾಗೃತಗೊಳಿಸಲು ಅಮೆರಿಕ ತಲುಪಿದರು. ಪ್ರಭುಪಾದರಾಗಿ ಮುಂದಿನ ಹನ್ನೆರಡು ವರ್ಷಗಳಲ್ಲಿ ಇಡೀ ಜಗತ್ತೇ ಬೆರಗಾಗಿ ನೋಡುವಂತೆ, ಜಗತ್ತಿನ ಮಹಾ ನಗರಗಳಲ್ಲಿ 108 ಕೃಷ್ಣನ ಸುಂದರ ದೇವಾಲಯಗಳನ್ನು ಕಟ್ಟಿನಿಲ್ಲಿಸಿದ್ದು ಮಾತ್ರವಲ್ಲದೆ, ಅಲ್ಲಿನ ಮಹಾ ಬೀದಿಗಳಲ್ಲಿ ‘ಹರೇ ಕೃಷ್ಣ ಹರೇ ರಾಮ’ ಮಂತ್ರವನ್ನು ಜೀವನದ ಮಂತ್ರವಾಗಿ ಸ್ವೀಕರಿಸಿದ ಯುವಕ ಯುವತಿಯರು ಭಕ್ತಿರಸದಲ್ಲಿ ತನ್ಮಯರಾಗಿ ಹಾಡುವಂತೆ ಮಾಡಿದ್ದು ಪವಾಡವೇ ಎನ್ನಬೇಕು. ಅಭಯಚರಣರು ಪ್ರಭುಪಾದರಾದ ಬೆಳವಣಿಗೆಯೇ ಭಕ್ತಿಯ ತತ್ವದ ಅತ್ಯಂತ ಶ್ರೇಷ್ಠವಾದ ರೂಪಕ. ಓರ್ವ ಸಾಮಾನ್ಯ ವ್ಯಕ್ತಿ ಭಕ್ತಿತತ್ವದಿಂದಲೇ ಮಹಾನ್‌ ಸಾಧಕರಾಗಿ, ಸಂತರಾಗಿ ಜಗದ ಮುಂದೆ ನಿಂತದ್ದು ಸಾರ್ವಕಾಲಿಕ ಶ್ರೇಷ್ಠ ನಿದರ್ಶನ.

ಭೋಗಿಗಳ ಅಮೆರಿಕದಲ್ಲಿ ಯೋಗಿ

ಭಾರತವೆನ್ನುವ ಪುಣ್ಯಭೂಮಿಯಿಂದ ಪ್ರಭುಪಾದರು ಅಧ್ಯಾತ್ಮದ ಸಂದೇಶವನ್ನು ಹೊತ್ತುಕೊಂಡು ಪಶ್ಚಿಮದ ನೆಲಕ್ಕೆ ಕಾಲಿಟ್ಟಾಗ, ಆ ದೇಶಗಳು ಭೋಗದ ಉನ್ಮಾದದಲ್ಲಿ ಮುಳುಗಿ ಅಧ್ಯಾತ್ಮಿಕ ಬರಗಾಲದಿಂದ ತತ್ತರಿಸಿ ಹೋಗಿದ್ದವು. ಪ್ರಭುಪಾದರ ಪ್ರವೇಶ ಬಿಸಿಲ ನಾಡಿಗೆ ಮಳೆಯ ಸಿಂಚನವಾದಂತಾಯಿತು. ಅಧ್ಯಾತ್ಮಿಕವಾಗಿ ಬರಡು ನೆಲವಾಗಿದ್ದ ಅಮೆರಿಕದಲ್ಲಿ ಭಕ್ತಿಯೋಗದ ಸಂದೇಶದೊಂದಿಗೆ ಸಂಘಟಕರಾಗಿ, ಪ್ರವಚನಕಾರರಾಗಿ, ಭಕ್ತಿತತ್ವದ ಪ್ರಸಾರಕರಾಗಿ ಈ ಕುಶಲಿಯಾದ ಸಾಧಕ ಮಾಡಿದ ಕಾರ್ಯಕ್ಕೆ ಬೆಲೆ ಕಟ್ಟಲಾಗದು. ಭಾಗವತ, ಭಗವದ್ಗೀತೆಯಂಥ ಶ್ರೇಷ್ಠ ಜ್ಞಾನಭಂಢಾರವನ್ನು ಇಂಗ್ಲಿಷ್‌ ಭಾಷೆಗೆ ಅನುವಾದಿಸಿ, ಪ್ರಾಚೀನ ಭಾರತದ ಜ್ಞಾನದ ಕೀಲಿಯನ್ನು ಜಗತ್ತಿನ ಜನರಿಗೆ ತೆರೆದು ಕೊಟ್ಟು ಮಹಾಸಾಧಕರಾದರು. 

ಕೃಷ್ಣನ ಭಕ್ತರಿಗೆ ಗುಡ್ ನ್ಯೂಸ್, ಇಸ್ಕಾನ್ ಟೆಂಪಲ್ ಓಪನ್: ಇಲ್ಲಿದೆ ರೂಲ್ಸ್, ಟೈಮಿಂಗ್ಸ್

ಅಮೆರಿಕದ ಮಣ್ಣಿಗೆ ಕಾಲಿಟ್ಟಾಗ ಈ ತಪಸ್ವಿಗೆ 69ರ ಹರೆಯ. ಸಾಮಾನ್ಯಾರ್ಥದಲ್ಲಿ ಇದು ಜೀವನದ ಸಂಧ್ಯಾಕಾಲ. ಆದರೆ ಪ್ರಭುಪಾದರು ಆಗತಾನೇ ಚಿಗುರೊಡೆದ ತಾರುಣ್ಯದ ಹುರುಪಿನ ಯೌವ್ವನಿಗನಂತೆ ಹಿಡಿದ ಕಾರ್ಯವನ್ನು ಸಾಧಿಸಿದ್ದು ಅವರ ಕಾರ್ಯನಿಷ್ಠೆಗೆ ಹಿಡಿದ ಕನ್ನಡಿಯಾಗಿದೆ. ಬರಿಗೈಯ ಈ ಸಾಧಕನನ್ನು ಕೈಹಿಡಿದದ್ದು ಕೃಷ್ಣಭಕ್ತಿಯೆಂಬ ಅಕ್ಷಯನಿಧಿಯೊಂದೇ. ಪರಕೀಯ ನಾಡಿನಲ್ಲಿ ಅನ್ಯಮತೀಯರ, ಅನ್ಯಭಾಷಿಕರ ನಡುವೆ ವೇದಾಂತದ ಸಂದೇಶವೊಂದೇ ಅವರ ಸಂಪತ್ತಾಗಿತ್ತು. ಪ್ರಭುಪಾದರು ಅಮೆರಿಕಕ್ಕೆ ಕಾಲಿಟ್ಟಾಗ ಅಲ್ಲಿ ಜೀವನ ಮೌಲ್ಯಗಳು ಮಣ್ಣುಗೂಡಿ, ಮಾನವೀಯತೆ ಮರೆಯಾಗಿ, ವ್ಯಗ್ರತೆಯೇ ಉಗ್ರವಾಗಿ ಪ್ರಕಟವಾಗುತ್ತಿದ್ದ ಕಾಲವಿತ್ತು. ಸುಖವನ್ನು ಅರಸಿ ಹೊರಟ ಅಮೆರಿಕದ ಯುವಕ ಯುವತಿಯರು ಮಾದಕವಸ್ತುಗಳ ದಾಸರಾಗಿ, ಲೈಂಗಿಕ ಸ್ವಚ್ಛಂದತೆಯನ್ನೇ ಸುಖವೆಂದು ಭಾವಿಸಿದ್ದಾಗ, ಈ ತರುಣ ವೃಂದ ಪಡೆದದ್ದು ಸುಖದ ಭ್ರಾಂತಿಯೇ ಹೊರತು ನಿಜವಾದ ಸುಖವನ್ನಲ್ಲ ಎಂದು ತೋರಿಸುತ್ತಾ, ವ್ಯಸನಗಳ ದಾಸರಾದವರಿಗೆ ಕೃಷ್ಣ ಪ್ರಜ್ಞೆಯೇ ನಿಜ ಬಿಡುಗಡೆಯ ದಾರಿ ಎಂದು ತೋರಿಸಿಕೊಟ್ಟವರು ಪ್ರಭುಪಾದರು. ಅವರು ಜಗದೋದ್ಧಾರಕನಾಗಬೇಕು ಎನ್ನುವ ಹಂಬಲದ ಹಿಂದೆ ಬಿದ್ದವರಲ್ಲ, ಆದರೆ ನಶೆಯಲ್ಲಿ ಮುಳುಗಿದ್ದವರಿಗೆ ಜಗದೋದ್ಧಾರಕನ ಸಂದೇಶವನ್ನು ತಲುಪಿಸಿದರು. ವ್ಯಸನದ ಮದೋನ್ಮತ್ತತೆಯಲ್ಲಿ ಮುಳುಗಿದ್ದವರನ್ನು ಭಕ್ತಿಯ ದಾರಿಗೆ ಪರಿವರ್ತಿಸಿದ್ದು ಒಂದು ಕ್ರಾಂತಿಯೇ ಹೌದು. ಆದರೆ ಇದು ಪ್ರತೀಕಾರದ ಮಾದರಿಯದ್ದಲ್ಲ, ಪ್ರೀತಿಯ ಮಾದರಿಯದು.

ವ್ಯಸನಿಗಳ ಬದುಕು ಬದಲಿಸಿದರು

ಪಶ್ಚಿಮದ ನೆಲದ ಭೋಗ ಪರಂಪರೆಗೆ ಉತ್ತರವಾಗಿ ಸನಾತನ ಸಂಸ್ಕೃತಿಯ ತ್ಯಾಗ ಪರಂಪರೆಯನ್ನು ಪ್ರಭುಪಾದರು ಮುಂದಿಟ್ಟರು. ವ್ಯಾಪಾರಿ ಪ್ರಜ್ಞೆಯಲ್ಲಿ ಜಗತ್ತು ಮುಳುಗಿದ್ದಾಗ, ಕೃಷ್ಣ ಪ್ರಜ್ಞೆಯ ಸಂದೇಶವನ್ನು ನೀಡಿದರು. ದಾರಿತಪ್ಪಿದ ಕತ್ತಲ ಲೋಕದ ಬದುಕಿಗೆ ದೇವ ಮಂದಿರಗಳು ಕ್ರಿಯಾಶೀಲ ಪರಿಹಾರವಾಗುವಂತೆ ಮಾಡಿದರು. ಇವರ ಪ್ರಭಾವದಿಂದ ಅನೇಕರು ಶಿಷ್ಯತ್ವ ಪಡೆದರು. ಕೃಷ್ಣಪ್ರಜ್ಞೆಯನ್ನು ಹಿಂಬಾಲಿಸಿದವರ ಕಾಮ ಕೇಂದ್ರಿತ ಬದುಕು - ಕೃಷ್ಣ ಕೇಂದ್ರಿತವಾಗಿ ಬದಲಾಯಿತು. ಆಳವಾದ ಕೃಷ್ಣ ಪ್ರಜ್ಞೆ ಹುಚ್ಚು ಕಾಮಕ್ಕೆ, ವ್ಯಸನಕ್ಕೆ ಸರಳವಾದ ಪರಿಹಾರವಾಗಬಹುದೆನ್ನುವ ಪವಾಡವನ್ನೇ ಮಾಡಿತೋರಿಸಿದರು. ಭಾಗವತ, ಭಗವದ್ಗೀತೆಗಳ ತಿರುಳ ಬೆಳಕು ಪ್ರಾಪಂಚಿಕತೆಯ ವ್ಯಸನಗ್ರಸ್ತರ ಬದುಕಿನ ಅಂಧಕಾರವನ್ನು ಕಳೆಯಿತು. ಭಾರತವು ಪ್ರತಿಪಾದಿಸುತ್ತಾ ಬಂದ ವಿಶ್ವ ಕುಟುಂಬದ, ವಿಶ್ವ ಪ್ರಜ್ಞೆಯ ಸಂದೇಶದ ಸಾರ್ಥಕ ಪ್ರತಿಪಾದನೆಗೆ ಶ್ರೀಲ ಪ್ರಭುಪಾದರು ರಾಯಭಾರಿಯಾದರು. ಅವರ ಕಾರ್ಯವನ್ನು ಜಗತ್ತು ಬೆರಗು ಕಣ್ಣುಗಳಿಂದ ನೋಡುವಂತಾಯಿತು. ಮಾನವ ಪ್ರೀತಿ, ವಾತ್ಸಲ್ಯದ ಮೂರ್ತಿ ಪ್ರಭುಪಾದರು ಭಕ್ತಿಗೆ ರಾಷ್ಟ್ರಗಳ ಗಡಿ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟರು. ಭಾರತ ಪಶ್ಚಿಮದಿಂದ ಏನನ್ನಾದರೂ ಪಡೆದುಕೊಳ್ಳಬಹುದೆನ್ನುವ ಕಾಲಕ್ಕೆ ಪಶ್ಚಿಮ ಕಳೆದುಕೊಂಡಿದ್ದ ನೈತಿಕ ಮೌಲ್ಯ, ಮಾನವೀಯತೆ, ಶಾಂತಿಯ ದಾರಿದೀಪವನ್ನು ಭಾರತ ಪ್ರಭುಪಾದರ ಮೂಲಕ ತೋರಿಸಿತು. ಯುರೋಪಿನ ಜನರಿಗೆ ಭಾರತವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಬೇಕಾದ ಗ್ರಂಥಗಳು ಲಭ್ಯವಾಗಬೇಕು ಎಂದೇ ಇಂಗ್ಲಿಷ್‌ ಭಾಷೆಯಲ್ಲಿ ಹಲವಾರು ಗ್ರಂಥಗಳ ರಚನೆಯನ್ನು ಮಾಡುತ್ತಾರೆ. ಭಾಗವತ, ಭಗವದ್ಗೀತೆಗಳ ಅನುವಾದ, ವ್ಯಾಖ್ಯಾನವನ್ನು ಹಲವು ಸಂಪುಟಗಳಲ್ಲಿ ಪ್ರಕಟಿಸುತ್ತಾರೆ. ಗ್ರಂಥ ಪ್ರಕಟಣೆ ಮಾತ್ರವಲ್ಲ, ಜಗತ್ತಿನಾದ್ಯಂತ ಕೃತಿಗಳು ಮಾರಾಟಕ್ಕೆ ಲಭ್ಯವಾಗುವಂತೆ ಮಾಡುತ್ತಾರೆ.

ಕೃಷ್ಣಪ್ರಜ್ಞೆಯೆಂಬ ಆಧ್ಯಾತ್ಮಿಕ ಪರಿಹಾರ

ಕೃಷ್ಣಪ್ರಜ್ಞೆಯ ಪ್ರತಿಪಾದನೆ ಕೇವಲ ಒಂದು ಆಂದೋಲನವಲ್ಲ, ಅದು ಭಾರತ ಜಗತ್ತಿಗೆ ನೀಡಿದ ಅತ್ಯುನ್ನತ ಪರಿಹಾರ. ಅನೇಕ ಕಾರಣಗಳಿಂದ ವಿಘಟಿತವಾಗಿರುವ, ಪರಸ್ಪರ ಶತ್ರುತ್ವದ ಭಾವವೇ ತುಂಬಿರುವ ಈ ಜಗತ್ತನ್ನು ಒಂದಾಗಿಸುವ ಆಂದೋಲನ. ಸಹಕಾರ, ಭ್ರಾತೃತ್ವ, ಮಾನವೀಯತೆಯ ದೀವಟಿಗೆಯನ್ನು ಬೆಳಗಿಸಿ ಇಡೀ ವಿಶ್ವವನ್ನೇ ಒಂದು ಕುಟುಂಬವಾಗಿ ಜೋಡಿಸುವ ‘ವಸುಧೈವ ಕುಟುಂಬಕಂ’ ಚಿಂತನೆಗೆ ಮೂರ್ತರೂಪ ನೀಡಿದ ಆಂದೋಲನ ವಿಶ್ವದ ಐಕ್ಯತೆಯನ್ನು ಸಾಧಿಸುವ ದಾರಿಯಾಯಿತು. 

ಇಸ್ಕಾನ್‌ನಿಂದ ಅಮೋಘ್ ಲೀಲಾ ದಾಸ್ ನಿಷೇಧ? ಯಾರು ಈ 'ಹರೇ ಕೃಷ್ಣ ಬ್ರಹ್ಮಚಾರಿ'?

ಪ್ರಭುಪಾದರ ಜೀವನವೇ ಒಂದು ತಪಸ್ಸು. 70ನೇ ವಯಸ್ಸಿಗೆ ಆರಂಭವಾದ ಯಾತ್ರೆಯಲ್ಲಿ ಮುಂದಿನ ಒಂದು ದಶಕ ಸುವರ್ಣ ಪುಟಗಳಲ್ಲಿ ದಾಖಲಿಸಬೇಕಾದ ಕಾಲಘಟ್ಟ. 108 ಕೃಷ್ಣ ಮಂದಿರಗಳು ತಲೆ ಎತ್ತಿನಿಂತಿದ್ದು ಮಾತ್ರವಲ್ಲ, ಜಗದ ಮಹಾನಗರಗಳ ಮಹಾಬೀದಿಗಳಲ್ಲಿ ಕೃಷ್ಣನ ರಥೋತ್ಸವಗಳು ನಡೆಯುವಂತಾಯಿತು. ಇಂಥ ಸಾಧಕರ ಕಾಯವಳಿಯಬಹುದು, ಆದರೆ ಅವರು ಬೋಧನೆ, ಸಂದೇಶ, ಕೃತಿಗಳ ಮೂಲಕ ಸಾವಿಲ್ಲದ ಬದುಕು ಪಡೆದ ಚಿರಂಜೀವಿಯಾದರು. ಹೀಗಾಗಿ ಇಂದಿಗೂ ಜಗತ್ತಿನಾದ್ಯಂತ ಭಾರತದ ಅಧ್ಯಾತ್ಮದ ಧ್ವನಿ ಅನುರಣಿಸುವಂತಾಯಿತು. ಪರಿಶುದ್ಧವಾದ ದೈವಭಕ್ತಿಯು ಸೀಮಾತೀತವಾಗಿ ಬೆಳೆಯಲು ಅಂದು ಪ್ರಭುಪಾದರು ಬಿತ್ತಿದ ಬೀಜವೊಂದು ಬೆಳೆದು ವೃಕ್ಷವಾಗಿ, ಸಾಧಕರಿಗೆ ನೆರಳಾಗಿ, ಸೇವೆಗೆ ಪಥವಾಗಿ, ಸರಳತೆಯೇ ಹಿತವಾಗಿ ಬದುಕುವ ಲಕ್ಷಾಂತರ ಜನರ ಬಾಳಿಗೆ ಬೆಳಕಾಗಿದೆ. ಈ ಬೆಳಕು ನಮ್ಮ ಸುತ್ತಲೂ ಕವಿದ ಅಜ್ಞಾನದ, ಅಂಧಕಾರದ ಪೊರೆಯನ್ನು ಹರಿದು ದಾರಿತೋರುವಂತಾಗಲಿ.

Follow Us:
Download App:
  • android
  • ios