ಇನ್ಮುಂದೆ ಸರ್ಕಾರದಿಂದ ಆನ್‌ಲೈನ್‌ನಲ್ಲಿ ಮನೆ ಮನೆಗೆ ಮೀನು
‘ಮತ್ಸ್ಯ ಸಂಪದ’ ಯೋಜನೆ, ಆ್ಯಪ್ ಮತ್ತು ಕಾರ್ಯಾಗಾರಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ . ಇದರಲ್ಲಿ ಮನೆ ಮನೆಗೆ ಮೀನುಗಳನ್ನು ಆನ್ ಲೈನ್ ಮೂಲಕ ತರಿಸಿಕೊಳ್ಳಬಹುದಾಗಿದೆ
ಬೆಂಗಳೂರು (ನ.20) : ಆನ್‌ಲೈನ್ ಮೂಲಕ ಮನೆ ಬಾಗಿಲಿಗೆ ತಾಜಾ ಮೀನು ಒದಗಿಸುವ ಯೋಜನೆಯಾದ ‘ಮತ್ಸ್ಯ ಸಂಪದ’ ಯೋಜನೆಗೆ ನ.21ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ ಎಂದು ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ವಿಶ್ವ ಮೀನುಗಾರಿಕೆ ದಿನಾಚರಣೆ ಅಂಗವಾಗಿ ನ.21ರಂದು ವಿಧಾನಸೌಧದಲ್ಲಿ ‘ಮತ್ಸ್ಯ ಸಂಪದ’ ಯೋಜನೆ, ಆ್ಯಪ್ ಮತ್ತು ಕಾರ್ಯಾಗಾರಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದರು. ಆರಂಭಿಕ ಹಂತದಲ್ಲಿ ಬೆಂಗಳೂರಿನಲ್ಲಿ ಮಾತ್ರ ಜಾರಿಗೊಳಿಸಲಾಗುತ್ತಿದ್ದು, ಕರಾವಳಿ ಪ್ರದೇಶ ಹೊರತುಪಡಿಸಿ ನಂತರ ರಾಜ್ಯಾದ್ಯಂತ ಜಾರಿಗೊಳಿಸುವ ಉದ್ದೇಶವಿದೆ.
ಕರಾವಳಿ ಜಿಲ್ಲೆಗಳ ಹಳ್ಳಿಗಳಲ್ಲಿ ಮಹಿಳೆಯರು ತಲೆ ಮೇಲೆ ಮೀನುಗಳನ್ನು ಹೊತ್ತು ಮಾರಾಟ ಮಾಡುತ್ತಿದ್ದಾರೆ. ಅಲ್ಲಿಯೂ ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಿದರೆ, ಅವರಿಗೆ ತೊಂದರೆ ನೀಡಿದಂತಾಗುತ್ತದೆ ಎಂಬ ಉದ್ದೇಶದಿಂದ ಕರಾವಳಿಯಲ್ಲಿ ಜಾರಿಗೊಳಿಸುತ್ತಿಲ್ಲ ಎಂದು ಹೇಳಿದರು.
ಮಲ್ಪೆ ಮೀನುಗಾರರ ಬಲೆಗೆ ಬಿದ್ದ 750 ಕೆ.ಜಿ ತೂಕದ ಮೀನು, ಇದರ ತೂಕ ಅಬ್ಬಬ್ಬಾ.
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮುಂದಿನ ಐದು ವರ್ಷಗಳಿಗೆ ರಾಜ್ಯದಲ್ಲಿ ಸುಮಾರು 4115 ಕೋಟಿ ರು. ಕ್ರಿಯಾ ಯೋಜನೆ ಸಲ್ಲಿಸಲಾಗಿದೆ. ಈ ಯೋಜನೆಗಳ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ ಇನ್ನೂ 5 ಹೊಸ ಮೀನುಗಾರಿಕೆ ಕಾಲೇಜು : ಮಂಗಳೂರು ಮೀನುಗಾರಿಕೆ ಕಾಲೇಜನ್ನು ಮೀನುಗಾರಿಕೆ ವಿಶ್ವವಿದ್ಯಾಲಯವನ್ನಾಗಿ ಮಾಡಲು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾಪ ಸಲ್ಲಿಸಲಾಗಿದೆ. ಇದರ ಜತೆಗೆ ಅಂಕೋಲಾ, ಶಿವಮೊಗ್ಗ, ಉಡುಪಿ, ಕಾರವಾರ ಹಾಗೂ ಮೈಸೂರಿನಲ್ಲಿ ಐದು ಹೊಸ ಮೀನುಗಾರಿಕಾ ಕಾಲೇಜು ಆರಂಭಿಸಲಾಗುವುದು ಎಂದು ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀನುಗಾರಿಕೆ ಕಾಲೇಜು ಜೊತೆಗೆ ಇನ್ನಿತರೆ 10 ಕಡೆ ಡಿಪ್ಲೊಮಾ ತರಗತಿಗಳನ್ನು ಪ್ರಾರಂಭಿಸುವ ಗುರಿ ಹೊಂದಲಾಗಿದೆ ಎಂದರು.
ಹೆಸರುಘಟ್ಟದಲ್ಲಿರುವ ಮೀನುಗಾರಿಕೆ ಸಾಕಾಣಿಕೆ ಕೇಂದ್ರದಲ್ಲಿ ಒಂದು ಕೋಟಿ ರು. ವೆಚ್ಚದಲ್ಲಿ ಮೀನು ಕ್ವಾರೈಂಟೈನ್ ಕೇಂದ್ರ ಸ್ಥಾಪಿಸಲಾಗುತ್ತಿದೆ. ಇಲ್ಲಿ ವಿದೇಶದ ಬಣ್ಣದ ಮೀನು ಸಾಕಾಣಿಕೆ ಮಾಡಲಾಗುತ್ತದೆ. ವಿದೇಶದಿಂದ ಆಮದಾದ ಮೀನನ್ನು ಒಂದು ವಾರ ಪ್ರತ್ಯೇಕವಾಗಿಟ್ಟು ರೋಗ ಮುಕ್ತವೆಂದು ನಿರ್ಧರಿಸಿದ ನಂತರ ಸಾಕಾಣಿಕೆ ಮಾಡಲಾಗುತ್ತದೆ. ಈ ವ್ಯವಸ್ಥೆ ಚೆನ್ನೈನಲ್ಲಿ ಮಾತ್ರ ಇತ್ತು. ಈಗ ನಮ್ಮ ರಾಜ್ಯಕ್ಕೂ ವಿಸ್ತರಣೆಯಾಗಿದೆ ಎಂದು ತಿಳಿಸಿದರು.
ಒಳನಾಡು ಮೀನುಗಾರಿಕೆಯಲ್ಲಿ ರಾಜ್ಯವು ದೇಶದಲ್ಲಿ 9ನೇ ಸ್ಥಾನದಲ್ಲಿದೆ. ಸಮುದ್ರ ಕಿನಾರೆ ಮೀನುಗಾರಿಕೆಯಲ್ಲಿ 4ನೇ ಸ್ಥಾನದಲ್ಲಿದ್ದು, ಪ್ರಥಮ ಸ್ಥಾನ ಪಡೆಯುವುದು ನಮ್ಮ ಗುರಿಯಾಗಿದ್ದು, ಆತ್ಮ-ನಿರ್ಭರ ಯೋಜನೆಯಡಿ ಸುಮಾರು 10 ಸಾವಿರ ಯುವಕರಿಗೆ ಮೀನುಗಾರಿಕೆ ಇಲಾಖೆಯಿಂದ ರಾಜ್ಯದ ವಿವಿಧೆಡೆ ಉದ್ಯೋಗ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.