Asianet Suvarna News Asianet Suvarna News

ಉಪಚುನಾವಣೆ: ನಾಮಪತ್ರ ಸಲ್ಲಿಕೆಗೆ ಇಂದು ಕಡೆ ದಿನ

ಉಪ ಚುನಾವಣೆ: ಬಹುತೇಕ ಅಭ್ಯರ್ಥಿಗಳಿಂದ ಇಂದು ನಾಮಪತ್ರ | ರೋಷನ್‌ ಬೇಗ್‌ ಪಕ್ಷೇತರರಾಗಿ ಸ್ಪರ್ಧಿಸ್ತಾರೋ, ಇಲ್ವೋ? ಸಸ್ಪೆನ್ಸ್‌ | ನ. 19 ಮಂಗಳವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಗುರುವಾರ ನಾಮಪತ್ರಗಳನ್ನು ವಾಪಸ್‌ ಪಡೆಯಲು ಕೊನೆಯ ದಿನ

November 18 deadline to submit nomination for By Election
Author
Bengaluru, First Published Nov 18, 2019, 8:13 AM IST

ಬೆಂಗಳೂರು (ನ. 18):  ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅಳಿವು ಉಳಿವು ನಿರ್ಧರಿಸಲಿರುವ ಹದಿನೈದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿದ್ದು, ಬಹುತೇಕ ಅಭ್ಯರ್ಥಿಗಳು ಸೋಮವಾರವೇ ನಾಮಪತ್ರ ಸಲ್ಲಿಸಲಿದ್ದಾರೆ.

ಸುಪ್ರೀಂಕೋರ್ಟ್‌ನಿಂದ ಅನರ್ಹ ಶಾಸಕರ ಸ್ಪರ್ಧೆಗೆ ಹಸಿರು ನಿಶಾನೆ ಸಿಕ್ಕ ಬೆನ್ನಲ್ಲೇ ಉಪಚುನಾವಣೆಯ ಅಖಾಡ ರಂಗು ಪಡೆದುಕೊಂಡಿದ್ದು, ರಾಣಿಬೆನ್ನೂರಿನ ಆರ್‌.ಶಂಕರ್‌ ಹೊರತುಪಡಿಸಿ ಇನ್ನುಳಿದ ಎಲ್ಲ ಚುನಾವಣೆ ನಡೆಯುವ ಇತರ ಎಲ್ಲ ಕ್ಷೇತ್ರಗಳ ಅನರ್ಹ ಶಾಸಕರೂ ಸ್ಪರ್ಧಿಸುತ್ತಿದ್ದಾರೆ. ರೋಷನ್‌ ಬೇಗ್‌ ಅವರೊಬ್ಬರಿಗೆ ಮಾತ್ರ ಬಿಜೆಪಿ ಟಿಕೆಟ್‌ ನಿರಾಕರಿಸಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ.

'ಬಂಡಾಯದ ಬಾವುಟ, ಬಿಜೆಪಿಯಿಂದ ಶರತ್ ಬಚ್ಚೇಗೌಡ ಉಚ್ಛಾಟನೆ'

ಮಂಗಳವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಗುರುವಾರ ನಾಮಪತ್ರಗಳನ್ನು ವಾಪಸ್‌ ಪಡೆಯಲು ಕೊನೆಯ ದಿನವಾಗಿದ್ದು, ಶುಕ್ರವಾರದಿಂದ ಎಲ್ಲ ಹದಿನೈದು ಕ್ಷೇತ್ರಗಳಲ್ಲೂ ಬಿರುಸಿನ ಪ್ರಚಾರ ಆರಂಭವಾಗಲಿದೆ. ಸೋಮವಾರ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಮೆರವಣಿಗೆ ಭರ್ಜರಿಯಾಗಿ ನಡೆಯಲಿದ್ದು, ಬಿರುಸಿನ ಚಟುವಟಿಕೆ ನಡೆಯಲಿವೆ.

ಬಿಎಸ್‌ವೈ ವರ್ಸಸ್‌ ಸಿದ್ದರಾಮಯ್ಯ:

ಈ ಉಪಚುನಾವಣೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಡುವಿನ ಹಣಾಹಣಿಯ ಕಣವಾಗುವಂತೆ ಕಾಣುತ್ತಿದೆ. ಈ ಹದಿನೈದು ಕ್ಷೇತ್ರಗಳ ಪೈಕಿ ಬಿಜೆಪಿ ಕನಿಷ್ಠ ಏಳರಲ್ಲಿ ಗೆದ್ದರೆ ಸರ್ಕಾರಕ್ಕೆ ಯಾವುದೇ ಅಪಾಯ ಎದುರಾಗುವುದಿಲ್ಲ. ಅದಕ್ಕಿಂತ ಕಡಮೆ ಸ್ಥಾನಗಳನ್ನು ಗೆದ್ದಲ್ಲಿ ಅಪಾಯದ ತೀವ್ರತೆ ಹೆಚ್ಚಾಗಿರಲಿದೆ.

ಈ ಕಾರಣಕ್ಕಾಗಿಯೇ ತಮ್ಮ ಸರ್ಕಾರವನ್ನು ಉಳಿಸಿಕೊಂಡು ಬಲಗೊಳಿಸುವ ಉದ್ದೇಶ ಹೊಂದಿರುವ ಯಡಿಯೂರಪ್ಪ ಅವರು ಶತಾಯಗತಾಯ ಹದಿನೈದು ಕ್ಷೇತ್ರಗಳ ಪೈಕಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲುವ ತಂತ್ರ ರೂಪಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಅವರು ಹೆಚ್ಚಿನ ಕ್ಷೇತ್ರಗಳಲ್ಲಿ ತಮ್ಮ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲುವಂತೆ ಮಾಡುವ ಮೂಲಕ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರತಿತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ.

ಬಿಜೆಪಿ ಅಭ್ಯರ್ಥಿಗಳಿಗೆ ಯಡಿಯೂರಪ್ಪ ಅವರೇ ಪ್ರಮುಖ ಪ್ರಚಾರಕರಾದರೆ, ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಸಿದ್ದರಾಮಯ್ಯ ಅವರೇ ಪ್ರಮುಖ ಪ್ರಚಾರಕರು. ಈ ಎರಡು ಕ್ಷೇತ್ರಗಳ ನಡುವೆ ಜೆಡಿಎಸ್‌ ಕೂಡ ತಾನು ಕಳೆದುಕೊಂಡ ಮೂರು ಕ್ಷೇತ್ರಗಳನ್ನು ವಾಪಸ್‌ ಪಡೆಯಲು ಹರಸಾಹಸ ನಡೆಸಿದೆ.

Follow Us:
Download App:
  • android
  • ios