ವಿಧಾನಸಭೆ [ಮಾ.03]: ಪುರಸಭೆ ಹಾಗೂ ನಗರಪಾಲಿಕೆ ಚುನಾವಣೆಯಲ್ಲಿ ‘ನೋಟಾ’ ಆಯ್ಕೆ ಜಾರಿ, ಜಲ್ಲಿ ಕ್ರಷರ್‌ಗಳಂತಹ ಸಣ್ಣ ಖನಿಜಗಳ ಕೈಗಾರಿಕೆಗಳಿಗೆ ಮಂಜೂರು ಮಾಡಿರುವ ಭೂಮಿ ಮಾರಾಟ ನಿಯಮ ಸಡಿಲ, ರೇಸ್‌ಕೋರ್ಸ್‌ಗಳ ದಂಡ ಪರಿಷ್ಕರಣೆ, ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆ ಸೇರಿದಂತೆ ಎಂಟು ವಿಧೇಯಕಗಳನ್ನು ಸೋಮವಾರ ವಿಧಾನಸಭೆಯಲ್ಲಿ ಮಂಡನೆ ಮಾಡಲಾಯಿತು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಸದಸ್ಯತ್ವ ರದ್ದುಗೊಳಿಸಬೇಕು ಎಂಬ ಕಾಂಗ್ರೆಸ್‌ ಸದಸ್ಯರ ಒತ್ತಾಯದ ಗದ್ದಲದ ನಡುವೆಯೇ ಎಂಟು ವಿಧೇಯಕಗಳನ್ನು ಮಂಡನೆ ಮಾಡಲಾಯಿತು.

ಮೊದಲಿಗೆ ಈಗಾಗಲೇ ವಿಧಾನಸಭೆ, ಲೋಕಸಭೆಯಲ್ಲಿ ಜಾರಿಯಲ್ಲಿರುವ ‘ನೋಟಾ’ (ನನ್‌ ಆಫ್‌ ದಿ ಎಬೌ) ಆಯ್ಕೆಯನ್ನು ಪುರಸಭೆ ಹಾಗೂ ನಗರ ಪಾಲಿಕೆ ಚುನಾವಣೆಯಲ್ಲೂ ಜಾರಿಗೊಳಿಸುವ ಸಂಬಂಧ ಕರ್ನಾಟಕ ಪೌರಸಭೆ ಮತ್ತು ಕೆಲವು ಇತರ ಕಾನೂನು ತಿದ್ದುಪಡಿ ವಿಧೇಯಕ-2020 ಮಂಡನೆ ಮಾಡಲಾಯಿತು. ವಿಧೇಯಕದಲ್ಲಿ ಪುರಸಭೆ ಹಾಗೂ ನಗರಪಾಲಿಕೆಗಳ ಕೌನ್ಸಿಲರ್‌ಗಳ ಆಯ್ಕೆಯ ಚುನಾವಣೆಯಲ್ಲೂ ನೋಟಾ ಆಯ್ಕೆ ನೀಡಬೇಕು. ಇದಕ್ಕೆ ಸಂಬಂಧಿಸಿದ ಸಿದ್ಧತೆಗಳನ್ನು ಮಾಡಿಕೊಳ್ಳಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.

ರೇಸ್‌ಕೋರ್ಸ್‌ ದಂಡ ಪರಿಷ್ಕರಣೆ:

ರೇಸ್‌ಕೋರ್ಸ್‌ಗಳಿಗೆ ಪರವಾನಗಿ ನೀಡುವ ವಿಧೇಯಕಕ್ಕೆ ತಿದ್ದುಪಡಿ ತಂದು ರೇಸ್‌ಕೋರ್ಸ್‌ಗಳಿಗೆ ಅನುಮತಿ ನೀಡುವ ವೇಳೆ ಸರ್ಕಾರದ ಬದಲಿಗೆ ಸರ್ಕಾರವು ಅಧಿಕೃತಗೊಳಿಸಿದ ಅಧಿಕಾರಿ ಎಂದು ಬದಲಿಸಲಾಗುವುದು. ಅಲ್ಲದೆ, ಸರ್ಕಾರದ ಪರವಾನಗಿ ಪಡೆಯದೆ ರೇಸ್‌ಗಳಲ್ಲಿ ಭಾಗವಹಿಸಿದ ಕುದುರೆಗಳ ಮಾಲೀಕರಿಗೆ 500 ರು.ಗಳಿದ್ದ ದಂಡದ ಮೊತ್ತವನ್ನು 50 ಸಾವಿರ ರು.ಗಳಿಗೆ ಪರಿಷ್ಕರಣೆ ಮಾಡಲಾಗಿದೆ. ಜತೆಗೆ, ಸರ್ಕಾರದ ಪರವಾನಗಿ ಇಲ್ಲದೆ ರೇಸ್‌ಗಳನ್ನು ಆಯೋಜಿಸುವ ಆಯೋಜಕರಿಗೆ 1 ಸಾವಿರ ರು.ಗಳಿದ್ದ ದಂಡ 1 ಲಕ್ಷ ರು. ಮಾಡಲು ರೇಸ್‌ಕೋರ್ಸ್‌ಗಳ ಪರವಾನಗಿ ನೀಡುವ ವಿಧೇಯಕ್ಕೆ ತಿದ್ದುಪಡಿ ತರಲು ವಿಧೇಯಕ ಮಂಡಿಸಲಾಗಿದೆ.

ಜತೆಗೆ, ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ವಿಧೇಯಕ - 2020 ಮೂಲಕ ಗ್ರಾಮೀಣ ಭಾಗದಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಮಂಜೂರು ಮಾಡಿರುವ ನಿವೇಶನವನ್ನು ಯಾವುದೇ ಸಾರ್ವಜನಿಕ ಉಪಯೋಗಕ್ಕಾಗಿ ಬಳಸಿಕೊಳ್ಳಲು ಭೂಬಳಕೆ ಪರಿವರ್ತನೆ ಮಾಡಿಕೊಳ್ಳಲು ನಿಯಮ ಸಡಿಲಗೊಳಿಸಲು ಮಂಡನೆ ಮಾಡಲಾಗಿದೆ.

ಬಿಜೆಪಿ ಜೊತೆ ಕಾಂಗ್ರೆಸ್‌ ಮೈತ್ರಿ : ಭರ್ಜರಿ ಜಯ..

ಕರ್ನಾಟಕ ಬಹಿರಂಗ ಸ್ಥಳಗಳ ವಿರೂಪಗೊಳಿಸುವುದನ್ನು ಪ್ರತಿಬಂಧಿಸುವ ಕಾಯಿದೆಯನ್ನು ಕರ್ನಾಟಕ ನಗರ ಪಾಲಿಕೆ ಪ್ರದೇಶ, ನಗರಾಭಿವೃದ್ಧಿ ಪ್ರಾಧಿಕಾರ, ಸ್ಥಳೀಯ ಯೋಜನಾ ಪ್ರಾಧಿಕಾರದ ವ್ಯಾಪ್ತಿಗೂ ವಿಸ್ತರಿಸಲು 1981ರ ಕಾಯಿದೆಗೆ ತಿದ್ದುಪಡಿ ತರುವುದು ಹಾಗೂ ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಗೆ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕವನ್ನೂ ಮಂಡಿಸಿದ್ದು, ಮುಂದೆ ಚರ್ಚೆ ನಡೆದು ವಿಧೇಯಕಗಳಿಗೆ ಒಪ್ಪಿಗೆ ಅಥವಾ ತಿರಸ್ಕಾರ ಮಾಡುವ ಸಾಧ್ಯತೆ ಇದೆ.

ಭೂಮಿ ಮಾರಾಟ ನಿಯಮ ಸಡಿಲ:

ರಾಜ್ಯ ಸರ್ಕಾರವು ಏಕಗವಾಕ್ಷಿ ವ್ಯವಸ್ಥೆ ಅಥವಾ ಇನ್ನಾವುದೇ ಸಮಿತಿಯಿಂದ ಸಣ್ಣ ಖನಿಜಗಳ ಗಣಿಗಾರಿಕೆಗೆ ಮಂಜೂರು ಮಾಡಿರುವ ಜಮೀನನ್ನು ಮಾರಾಟ ಮಾಡಲು ನಿಯಮ ಸಡಿಲಗೊಳಿಸುವ ಸಲುವಾಗಿ ‘ಕರ್ನಾಟಕ ಭೂ ಸುಧಾರಣಾ ಅಧಿನಿಯಮ -1961’ಕ್ಕೆ ತಿದ್ದುಪಡಿ ತರಲು ವಿಧೇಯಕ ಮಂಡನೆ ಮಾಡಲಾಗಿದೆ. ಜಲ್ಲಿ ಕ್ರಷರ್‌ ಘಟಕಗಳಂತಹ ಸಣ್ಣ ಖನಿಜಗಳ ಗಣಿಗಾರಿಕೆಗೆ ಸರ್ಕಾರ ಮಂಜೂರು ಮಾಡಿರುವ 40 ಎಕರೆಗಿಂತ ಕಡಿಮೆ ವ್ಯಾಪ್ತಿಯ ಜಮೀನು ಮಾರಾಟ ಮಾಡಲು ಕಠಿಣ ನಿಯಮಗಳು ಇತ್ತು. ಇದನ್ನು ಸಡಿಲಗೊಳಿಸಿ ಏಳು ವರ್ಷಗಳ ಬಳಿಕ ಅಂತಹದ್ದೇ ಕಂಪೆನಿಗೆ ಮಾರಾಟ ಮಾಡಲು ಅವಕಾಶ ನೀಡಲು ಕರ್ನಾಟಕ ಭೂ ಸುಧಾರಣಾ ಅಧಿನಿಯಮ -1961ಕ್ಕೆ ತಿದ್ದುಪಡಿ ತರುವ ವಿಧೇಯಕವನ್ನು ಸೋಮವಾರ ಮಂಡನೆ ಮಾಡಲಾಗಿದೆ.