ಆರ್‌ಎಸ್‌ಎಸ್ ನಿಷೇಧಿಸುವುದಾಗಿ ಹೇಳಿಲ್ಲ: ಸಿಎಂ ಸಿದ್ದರಾಮಯ್ಯ
ಶಾಂತಿ, ಸೌಹಾರ್ದತೆಗೆ ಧಕ್ಕೆ ತರುವ ಯಾವುದೇ ಸಂಘಟನೆಗಳ ವಿರುದ್ಧ ಕ್ರಮ, ನೆಹರೂ ಪುಣ್ಯತಿಥಿ ಪ್ರಯುಕ್ತ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಿಎಂ ಸಿದ್ದರಾಮಯ್ಯ ಹೇಳಿಕೆ
ಬೆಂಗಳೂರು(ಮೇ.28): ಸಮಾಜದಲ್ಲಿ ಶಾಂತಿ, ಸೌಹಾರ್ದತೆಗೆ ಧಕ್ಕೆ ತರುವ ಯಾವುದೇ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹಾಗಂತ ಆರ್‌ಎಸ್‌ಎಸ್ ನಿಷೇಧಿಸುವ ಕುರಿತು ಸರ್ಕಾರ ಹೇಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ 59ನೇ ಪುಣ್ಯತಿಥಿಯ ಪ್ರಯುಕ್ತ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಶಾಂತಿ, ಸಾಮರಸ್ಯ ಕದಡುವಂತಹ ಕೆಲಸ ಮಾಡುವ ಯಾವುದೇ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದೇವೆಯೇ ಹೊರತು ಆರ್‌ಎಸ್‌ಎಸ್ ನಿಷೇಧ ಮಾಡುತ್ತೇವೆ ಎಂದು ಎಲ್ಲಿ ಹೇಳಿದ್ದೇವೆ? ಸರ್ಕಾರ ಆ ಬಗ್ಗೆ ಹೇಳಿಕೆ ನೀಡಿಲ್ಲ ಎಂದರು.
ಆರ್‌ಎಸ್‌ಎಸ್ ನಿಷೇಧಕ್ಕೆ ಕೈ ಹಾಕಿದರೆ ಕಾಂಗ್ರೆಸ್ ಇರಲ್ಲ: ಪ್ರಿಯಾಂಕ್ ವಿರುದ್ಧ ನಳಿನ್ ವಾಗ್ದಾಳಿ
ದೇಶದ ಪ್ರಥಮ ಪ್ರಧಾನಿಯಾದ ಜವಾಹರಲಾಲ್ ನೆಹರೂ ಅವರು ಮಹಾನ್ ಪ್ರಜಾಪ್ರಭುತ್ವವಾದಿ. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಮೊದಲನೇ ಪ್ರಧಾನಿಯಾಗಿ 17 ವರ್ಷಗಳ ಕಾಲ ಸ್ವತಂತ್ರ ಭಾರತವನ್ನು ಆಧುನಿಕಗೊಳಿಸಲು ಪ್ರಮುಖ ಪಾತ್ರ ವಹಿಸಿದ್ದರು. ಅದಕ್ಕಾಗಿಯೇ ಆಧುನಿಕ ಭಾರತದ ನಿರ್ಮಾತೃ ಎಂದು ಕರೆಯುತ್ತೇವೆ. ಬ್ರಿಟಿಷರು ಲೂಟಿ ಮಾಡಿ ಬಿಟ್ಟು ಹೋಗಿದ್ದ ದೇಶವನ್ನು ಪ್ರಧಾನಿಗಳಾಗಿ ಅನೇಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮಾಡಿದರು. ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆಗೊಂಡಿದ್ದರೆ, ಸಾರ್ವಭೌಮತ್ವ ಉಳಿದಿದ್ದರೆ ಅದಕ್ಕೆ ಜವಾಹರಲಾಲ್ ನೆಹರೂ ಅವರು ಕಾರಣ. ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದು ದೇಶದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದರು ಎಂದು ಹೇಳಿದರು.
ನೆಹರೂ ಅವರು ಹಾಕಿದ ಅಡಿಪಾಯದ ಮೇಲೆಯೇ ಅಭಿವೃದ್ಧಿ ಕಾರ್ಯವನ್ನು ಮುಂದುವರಿಸುವ ಕೆಲಸವನ್ನು ಮಾಡುತ್ತೇವೆ. ಈ ದೇಶಕ್ಕೆ ಪ್ರಜಾಪ್ರಭುತ್ವ, ಅಭಿವೃದ್ಧಿ, ಆಧುನಿಕತೆಯ ಅಡಿಪಾಯ ಹಾಕಿದವರು ನೆಹರೂ. ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಷ್‌ಚಂದ್ರ ಬೋಸ್, ವಲ್ಲಭಭಾಯಿ ಪಟೇಲ್, ಜವಾಹರ್‌ಲಾಲ್ ನೆಹರೂ, ಚಂದ್ರಶೇಖರ್ ಆಜಾದ್, ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಮಹಾತ್ಮಗಾಂಧಿ ಅವರೊಂದಿಗೆ ಅಪಾರವಾಗಿ ತೊಡಗಿಸಿಕೊಂಡಿದ್ದರು. ನೆಹರೂ ಅವರು ಸುಮಾರು ಒಂಭತ್ತು ವರ್ಷಗಳ ಕಾಲ ಜೈಲು ವಾಸವನ್ನೂ ಅನುಭವಿಸಿದ್ದರು. ದೇಶದ ಸ್ವಾತಂತ್ರ್ಯ, ಅಭಿವೃದ್ಧಿಗಾಗಿ ಅಪಾರ ತ್ಯಾಗ, ಬಲಿದಾನಗಳನ್ನು ಮಾಡಿದ ಕುಟುಂಬ ಅವರದ್ದು ಎಂದು ತಿಳಿಸಿದರು.
ಈಗ ಟೀಕೆಗಳನ್ನು ಮಾಡುತ್ತಾರೆ. ಆದರೆ, ಅವರು ದೇಶಕ್ಕಾಗಿ ಮಾಡಿದ ತ್ಯಾಗ, ಬಲಿದಾನಗಳನ್ನು ನಾವು ಸ್ಮರಿಸಬೇಕು. ಅದು ನಮ್ಮೆಲ್ಲರಿಗೂ ಸ್ಫೂರ್ತಿ. ಮಹಾನ್ ವ್ಯಕ್ತಿಯ ಪುಣ್ಯ ಸ್ಮರಣೆಯಂದು ಅವರನ್ನು ಸ್ಮರಿಸುತ್ತಿದ್ದೇವೆ ಎಂದರು.