ಬೆಂಗಳೂರು (ಅ.28): ವಾರದ ಹಿಂದೆಯೇ ರಾಜ್ಯದಲ್ಲಿ ಪ್ರವೇಶವಾಗಬೇಕಿದ್ದ ಹಿಂಗಾರು ಮಳೆ ತಡವಾಗಿ ಬುಧವಾರದಿಂದ (ಅ.28) ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಸಿ. ಎಸ್‌. ಪಾಟೀಲ್‌ ಹೇಳಿದ್ದಾರೆ. ರಾಜ್ಯದಲ್ಲಿ ಅ. 15ರ ನಂತರ (ಅ.20ರ ಆಸುಪಾಸು) ಮುಂಗಾರು ಅಂತ್ಯವಾಗಿ ಹಿಂಗಾರು ಮಳೆ ಆರಂಭವಾಗಬಹುದು ಎಂದು ಮೊದಲು ಹೇಳಲಾಗಿತ್ತು.

 ಆದರೆ ಹವಾಮಾನದಲ್ಲಿ ಉಂಟಾದ ನಿರಂತರ ಬದಲಾವಣೆಗಳಿಂದ ಹಿಂಗಾರು ಮಳೆಯ ಪ್ರವೇಶ ವಿಳಂಬವಾಯಿತು. ಮುಂಗಾರು ಅ.24ರವರೆಗೂ ಮುಂದುವರಿಯುವ ಮೂಲಕ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿಸಿತು. ಇದೀಗ ದಕ್ಷಿಣ ಒಳನಾಡಿನ ವ್ಯಾಪ್ತಿಯಲ್ಲೇ ಹೆಚ್ಚು ಪ್ರಭಾವ ಬೀರುವ ಹಿಂಗಾರು ಮಳೆ ಅ. 28ರಿಂದ ಆರಂಭವಾಗುವುದು ಬಹುತೇಕ ಖಚಿತವಾಗಿದೆ.

ಪ್ರವಾಹ ತಪ್ಪಿಸಲು ಮಳೆ ನೀರು ಸಂಗ್ರಹ ಗುಂಡಿ ನಿರ್ಮಾಣ: ಡಿಸಿಎಂ ಅಶ್ವತ್ಥನಾರಾಯಣ ..

ಆರಂಭವಾದ 2-3 ದಿನದ ನಂತರ ಹಿಂಗಾರು ತೀವ್ರಗೊಳ್ಳಲಿದೆ. ನ.1ರ ಹೊತ್ತಿಗೆ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಬೀಳಲಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ತುಸು ಹೆಚ್ಚಿರಲಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಅಲ್ಲಲ್ಲಿ ಸಾಧಾರಣ ಮಳೆ (2-7 ಸೆಂ.ಮೀ ನಷ್ಟು) ಸಂಭವವಿದೆ. ಇದಕ್ಕೆ ಪೂರಕವೆಂಬಂತೆ ಬಂಗಾಳಕೊಲ್ಲಿಯಲ್ಲಿ ಸಮುದ್ರಮಟ್ಟದಲ್ಲಿ ಮೇಲೈ ಸುಳಿಗಾಳಿ (ಸ್ಟ್ರಫ್‌) ಮುಂದುವರಿದಿದೆ ಎಂದು ಸಿ.ಎಸ್‌.ಪಾಟೀಲ್‌ ಮಾಹಿತಿ ನೀಡಿದ್ದಾರೆ.