ಪ್ರವಾಹ ತಪ್ಪಿಸಲು ಮಳೆ ನೀರು ಸಂಗ್ರಹ ಗುಂಡಿ ನಿರ್ಮಾಣ: ಡಿಸಿಎಂ ಅಶ್ವತ್ಥನಾರಾಯಣ
ಬೆಂಗಳೂರು(ಅ.22): ನಗರದಲ್ಲಿ ಮಳೆ ಬಂದಾಗ ಉಂಟಾಗುವ ಪ್ರವಾಹ ತಪ್ಪಿಸಲು ಅಲ್ಲಲ್ಲಿ ಮಳೆ ನೀರು ಸಂಗ್ರಹ ಗುಂಡಿ ನಿರ್ಮಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಮಂಗಳವಾರ ಸುರಿದ ಧಾರಾಕಾರ ಮಳೆಗೆ ರಾಜಕಾಲುವೆ ತಡೆಗೋಡೆ ಕುಸಿದ ದತ್ತಾ ಲೇಔಟ್‌ಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾಲುವೆ ಅಭಿವೃದ್ಧಿ ಪಡಿಸಿದರೂ ಮಳೆ ಬಂದ ಸಂದರ್ಭದಲ್ಲಿ ಉಕ್ಕಿ ತಗ್ಗುಪ್ರದೇಶಗಳಿಗೆ ನೀರು ಹರಿದು ಪ್ರವಾಹ ಪರಿಸ್ಥಿತಿ ಉಂಟಾಗಲಿದೆ. ಹಾಗಾಗಿ, ಮಳೆ ಬಂದಾಗ ರಾಜಕಾಲುವೆಗಳಿಗೆ ಮಳೆ ನೀರು ನೇರವಾಗಿ ಹರಿದು ಬರದಂತೆ ಅಲ್ಲಲ್ಲಿ ಮಳೆ ನೀರು ಸಂಗ್ರಹ ಹೊಂಡಗಳನ್ನು ನಿರ್ಮಿಸಬೇಕಾಗಿದೆ ಎಂದರು.
ನಗರದಲ್ಲಿ 842 ಕಿ.ಮೀ. ರಾಜಕಾಲುವೆ ಇದ್ದು, ಈಗಾಗಲೇ 400 ಕಿ.ಮೀ ಉದ್ದದ ರಾಜಕಾಲುವೆ ಅಭಿವೃದ್ಧಿಗೊಳಿಸಲಾಗಿದೆ. ಇನ್ನು 400 ಕಿ.ಮೀ ರಾಜಕಾಲುವೆ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು. ರಾಜಕಾಲುವೆ ಒತ್ತುವರಿ ಮಾಡಿಕೊಡಿದ್ದ 1,100 ಕಟ್ಟಡ ತೆರವುಗೊಳಿಸಲಾಗಿದೆ. ಇನ್ನು 700 ಕಟ್ಟಡ ತೆರವುಗೊಳಿಸಬೇಕಾಗಿದ್ದು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಒತ್ತುವರಿ ತೆರವಿಗೆ ಹೈಕೋರ್ಟ್ ತಡೆ ನೀಡಿದೆ. ನವೆಂಬರ್ ಬಳಿಕ ಒತ್ತುವರಿ ತೆರವು ಆರಂಭಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್, ಮಳೆ ಬಂದಾಗ ಪ್ರವಾಹ ಉಂಟಾಗುವ ಸ್ಥಳಗಳನ್ನು ದುರಸ್ಥಿ ಮಾಡಿ ಸರಿಪಡಿಸಲಾಗುತ್ತಿದೆ. ಇಷ್ಟೊಂದು ಮಳೆ ಬಂದರೂ ಕೆಲವೇ ಸ್ಥಳದಲ್ಲಿ ಸಮಸ್ಯೆ ಉಂಟಾಗಿದೆ ಎಂದು ತಿಳಿಸಿದರು.
ರಾಜಕಾಲುವೆ ತಡೆಗೋಡೆ ಕುಸಿದು ಅಪಾಯದ ಅಂಚಿನಲ್ಲಿರುವ ದತ್ತಾಲೇಔಟ್‌ನ ಎರಡು ಕಟ್ಟಡದಲ್ಲಿ ವಾಸವಿದ್ದ ಎಂಟು ಕುಟುಂಬ ಸದಸ್ಯರನ್ನು ಬಿಬಿಎಂಪಿಯ ಸರ್ವೀಸ್ ಅಪಾಟ್ಮೆಂಟ್‌ಗೆ ಸ್ಥಳಾಂತರ ಮಾಡಲಾಗಿದೆ. ತಡೆಗೋಡೆ ಕಾಮಗಾರಿ ಪೂರ್ಣಗೊಂಡ ನಂತರ ಅವರನ್ನು ವಾಪಾಸ್ ಅವರ ಮನೆಗಳಿಗೆ ಸ್ಥಳಾಂತರ ಮಾಡಲಾಗಿದೆ.