ಬೆಂಗಳೂರು(ಆ.29): ನಗರದಲ್ಲಿ ಖಾಸಗಿ ಆಸ್ಪತ್ರೆಗಳ ಎಡವಟ್ಟು ಮುಂದುವರೆದಿದ್ದು, ಖಾಸಗಿ ಆಸ್ಪತ್ರೆಯೊಂದು ಕೊರೋನೇತರ ರೋಗಿಯನ್ನು ಕೊರೋನಾ ಸೋಂಕಿತರ ವಾರ್ಡ್‌ಗೆ ಶಿಫ್ಟ್‌ ಮಾಡಿದ ಅವಾಂತರ ಸೃಷ್ಟಿಸಿರುವ ಘಟನೆ ಬೆಳಕಿಗೆ ಬಂದಿದೆ.

ಹೃದಯ ಸಂಬಂಧಿ ಸಮಸ್ಯೆಗೆ ತುತ್ತಾಗಿದ್ದ ರಾಜಾಜಿನಗರದ 60 ವರ್ಷದ ಯಶೋಧಮ್ಮ ಅವರನ್ನು ಕುಟುಂಬದ ಸದಸ್ಯರು ಗುರುವಾರ ಮಧ್ಯಾಹ್ನದ ನಗರದ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರ ಸಲಹೆ ಮೇರೆಗೆ ಗುರುವಾರ ರಾತ್ರಿ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

ಕರ್ನಾಟಕದ 30 ಜಿಲ್ಲೆಗಳಲ್ಲೂ ಕೊರೋನಾ: ಇಲ್ಲಿದೆ ಶುಕ್ರವಾರದ ಜಿಲ್ಲಾವಾರು ಸಂಖ್ಯೆ

ಬಳಿಕ ಆಸ್ಪತ್ರೆ ಸಿಬ್ಬಂದಿ ಯಶೋಧಮ್ಮ ಅವರನ್ನು ತುರ್ತು ನಿಗಾ ಘಟಕದಿಂದ ಕೊರೋನಾ ಸೋಂಕಿತರ ವಾರ್ಡಿಗೆ ಕರೆತಂದಿದ್ದಾರೆ. ಪಕ್ಕದ ಹಾಸಿಗೆಯಲ್ಲಿ ಕೊರೋನಾ ಸೋಂಕಿತರು ಇರುವ ವಿಚಾರ ತಿಳಿದು ಯಶೋಧಮ್ಮ ಅವರ ಕುಟುಂಬದ ಸದಸ್ಯರು ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

24 ತಾಸಲ್ಲಿ 2721 ಹೊಸ ಪ್ರಕರಣಗಳು ಪತ್ತೆ

ರಾಜಧಾನಿಯಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 24 ತಾಸಿನಲ್ಲಿ 2,721 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,21,449ಕ್ಕೆ ಏರಿಕೆಯಾಗಿದೆ.
ಕೊಂಚ ಸಮಾಧಾನ ಸಂಗತಿಯೆಂದರೆ, ಶುಕ್ರವಾರ ಒಂದೇ ದಿನ 2,148 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ಮೂಲಕ ಈವರೆಗೆ ಸೋಂಕಿನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 83,041ಕ್ಕೆ ಏರಿಕೆಯಾಗಿದೆ. ಈ ನಡುವೆ ನಗರದಲ್ಲಿ ಇನ್ನೂ 36,521 ಮಂದಿ ಸೋಂಕಿತರು ವಿವಿಧ ಆಸ್ಪತ್ರೆಗಳು, ಕೋವಿಡ್‌ ಆರೈಕೆ ಕೇಂದ್ರಗಳು ಹಾಗೂ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 312 ಮಂದಿ ಸೋಂಕಿತರಿಗೆ ವಿವಿಧ ಆಸ್ಪತ್ರೆಗಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

41 ಮಂದಿ ಬಲಿ: 

ಶುಕ್ರವಾರ 16 ಮಹಿಳೆಯರು 25 ಮಂದಿ ಪುರುಷರು ಸೇರಿ ಒಟ್ಟು 41 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ನಗರದಲ್ಲಿ ಈವರೆಗೆ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ 1,886ಕ್ಕೆ ಏರಿಕೆಯಾಗಿದೆ.