‘ರಾಜ್ಯದಲ್ಲಿ ಪ್ರಸ್ತುತ ಮಳೆ ಕೊರತೆ ಉಂಟಾಗಿದೆ. ಹೀಗಾಗಿ ತಮಿಳುನಾಡಿಗೆ ಬಿಡುಗಡೆ ಮಾಡಬೇಕಿದ್ದ 9.19 ಟಿಎಂಸಿ ನೀರನ್ನು ಪೂರ್ಣ ಪ್ರಮಾಣದಲ್ಲಿ ಬಿಡಲು ಸಾಧ್ಯವಿಲ್ಲ. ನೀರಿನ ಲಭ್ಯತೆ ನೋಡಿಕೊಂಡು ಬಿಡುವುದಾಗಿ ಮನವರಿಕೆ ಮಾಡಿಕೊಟ್ಟಿದ್ದೇವೆ: ರಾಕೇಶ್ ಸಿಂಗ್
ಬೆಂಗಳೂರು(ಜೂ.17): ತಮಿಳುನಾಡು ಸೇರಿದಂತೆ ಕಾವೇರಿ ನದಿ ಪಾತ್ರದ ರಾಜ್ಯಗಳಿಗೆ ಪ್ರಸಕ್ತ ತಿಂಗಳಲ್ಲಿ 9.19 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು (ಸಿಡಬ್ಲ್ಯುಎಂಎ) ರಾಜ್ಯಕ್ಕೆ ಆದೇಶಿಸಿದೆ. ಆದರೆ ಮಳೆಯ ಕೊರತೆ ಹಿನ್ನೆಲೆಯಲ್ಲಿ ಅಷ್ಟುಪ್ರಮಾಣದ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಮನವರಿಕೆ ಮಾಡುವ ಪ್ರಯತ್ನ ಮಾಡಿದೆ. ಶುಕ್ರವಾರ ವಿಡಿಯೋ ಸಂವಾದದ ಮೂಲಕ ನಡೆದ ಸಿಡಬ್ಲ್ಯುಎಂಎ ಸಭೆಯಲ್ಲಿ ಪ್ರಾಧಿಕಾರದ ಪ್ರತಿನಿಧಿಗಳು ಹಾಗೂ ಕರ್ನಾಟಕ, ತಮಿಳುನಾಡು, ಪುದುಚೆರಿ, ಕೇರಳ ಪ್ರತಿನಿಧಿಗಳು ಭಾಗವಹಿಸಿದ್ದರು.
ರಾಜ್ಯದ ಪರವಾಗಿ ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಹಾಗೂ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದಂತೆ ಪ್ರತಿ ವರ್ಷದ ಜೂನ್ ತಿಂಗಳಲ್ಲಿ ಬಿಳಿಗುಂಡ್ಲು ಮೂಲಕ ತಮಿಳುನಾಡಿಗೆ 9.19 ಟಿಎಂಸಿ ನೀರು ಬಿಡಬೇಕು. ಆದರೆ, ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದೆ. ಶೇ.68 ರಷ್ಟು ಮಳೆ ಕೊರತೆಯಾಗಿರುವುದರಿಂದ ರಾಜ್ಯದಲ್ಲಿ ಕುಡಿಯುವ ನೀರಿನ ಬಳಕೆಗೂ ನೀರು ಇಲ್ಲದಂತಾಗುವ ಪರಿಸ್ಥಿತಿ ಎದುರಾಗಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮುಂದೆ ತಮಿಳು ನಾಯಕನಿಗೆ ಪ್ರಧಾನಿ ಹುದ್ದೆ: ಅಮಿತ್ ಶಾ
ಲಭ್ಯತೆ ನೋಡಿಕೊಂಡು ಬಿಡುಗಡೆ- ಸಿಂಗ್:
ಈ ಬಗ್ಗೆ ‘ಕನ್ನಡಪ್ರಭ’ದ ಜತೆ ಮಾತನಾಡಿದ ರಾಕೇಶ್ ಸಿಂಗ್ ಅವರು, ‘ರಾಜ್ಯದಲ್ಲಿ ಪ್ರಸ್ತುತ ಮಳೆ ಕೊರತೆ ಉಂಟಾಗಿದೆ. ಹೀಗಾಗಿ ತಮಿಳುನಾಡಿಗೆ ಬಿಡುಗಡೆ ಮಾಡಬೇಕಿದ್ದ 9.19 ಟಿಎಂಸಿ ನೀರನ್ನು ಪೂರ್ಣ ಪ್ರಮಾಣದಲ್ಲಿ ಬಿಡಲು ಸಾಧ್ಯವಿಲ್ಲ. ನೀರಿನ ಲಭ್ಯತೆ ನೋಡಿಕೊಂಡು ಬಿಡುವುದಾಗಿ ಮನವರಿಕೆ ಮಾಡಿಕೊಟ್ಟಿದ್ದೇವೆ. ಎಷ್ಟು ಬಿಡುತ್ತೇವೆ ಎಂಬಿತ್ಯಾದಿ ಯಾವುದೇ ಭರವಸೆಗಳನ್ನು ನಾವು ಕೊಟ್ಟಿಲ್ಲ. ಪರಿಸ್ಥಿತಿಗೆ ತಕ್ಕಂತೆ ಕ್ರಮ ಕೈಗೊಳ್ಳುವುದಾಗಿ ಮನವರಿಕೆ ಮಾಡಿಕೊಟ್ಟಿದ್ದೇವೆ’ ಎಂದು ಸ್ಪಷ್ಟಪಡಿಸಿದರು.
