ಸರ್ಚ್ ವಾರೆಂಟ್ ಜಾರಿಗೆ ಮುನ್ನ ಸಮನ್ಸ್ ಅಗತ್ಯವಿಲ್ಲ: ಹೈಕೋರ್ಟ್
ಸರ್ಚ್ ವಾರೆಂಟ್ ರದ್ದು ಕೋರಿದ್ದ ಎಸ್‌ಡಿಪಿಐ ಅರ್ಜಿ ವಜಾ| ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ತಮ್ಮ ಪಕ್ಷದ ಕಚೇರಿಯನ್ನು ಶೋಧ ನಡೆಸಲು ವಾರೆಂಟ್ ಜಾರಿ| ವಿಚಾರಣಾ ನ್ಯಾಯಾಲಯ ಹೊರಡಿಸಿದ ಆದೇಶದಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯವಿಲ್ಲ|
ಬೆಂಗಳೂರು(ಜ.21): ಅಪರಾಧ ಪ್ರಕರಣಗಳ ಸಂಬಂಧ ಎಲ್ಲಾ ಸಂದರ್ಭದಲ್ಲೂ ಶೋಧನಾ ವಾರೆಂಟ್ (ಸರ್ಚ್ ವಾರೆಂಟ್) ಜಾರಿಗೊಳಿಸುವ ಮುನ್ನ ಸಮನ್ಸ್ ನೀಡುವ ಅವಶ್ಯಕತೆ ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ತಮ್ಮ ಪಕ್ಷದ ಕಚೇರಿಯನ್ನು ಶೋಧ ನಡೆಸಲು ವಾರೆಂಟ್ ಜಾರಿ ಮಾಡಿದ್ದ ನಗರದ 44ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದ್ ರಾಜ್ ಅವರು, ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 93(1)(ಎ) ಪ್ರಕಾರ ಶೋಧ ವಾರೆಂಟ್ ಜಾರಿ ಮಾಡುವ ಮುನ್ನ ಸಮನ್ಸ್ ನೀಡಬೇಕಾಗುತ್ತದೆ. ಆದರೆ, ಸೆಕ್ಷನ್ 93(1)(ಸಿ) ಪ್ರಕಾರ ಸಮನ್ಸ್ ನೀಡದೆ ಶೋಧ ನಡೆಸಲು ವಾರೆಂಟ್ ಜಾರಿಗೊಳಿಸಬಹುದು. ಅದರಂತೆ ಅಪರಾಧ ಪ್ರಕರಣಗಳ ಸಂಬಂಧ ಎಲ್ಲಾ ಸಂದರ್ಭದಲ್ಲೂ ಶೋಧನಾ ವಾರೆಂಟ್ ಜಾರಿಗೊಳಿಸುವ ಮುನ್ನ ಸಮನ್ಸ್ ನೀಡುವ ಅವಶ್ಯಕತೆ ಇಲ್ಲ. ವಿಚಾರಣಾ ನ್ಯಾಯಾಲಯಗಳು ಸಂದರ್ಭಕ್ಕೆ ಅನುಸಾರವಾಗಿ ಶೋಧನಾ ವಾರೆಂಟ್ ಜಾರಿಗೊಳಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಚಾರಣೆಗೆ ಹೊರರಾಜ್ಯದ ಜಡ್ಜ್ ಕರೆಸಿ ಎಂದವಗೆ 1 ಲಕ್ಷ ರು. ದಂಡ..!
ಅಲ್ಲದೆ, ಈ ಪ್ರಕರಣದ ಬಹುತೇಕ ಆರೋಪಿಗಳು ಅರ್ಜಿದಾರ ಕಚೇರಿಯ ಪದಾಧಿಕಾರಿಗಳಾಗಿದ್ದಾರೆ. ಲಭ್ಯವಿದ್ದ ಮಾಹಿತಿ ಪ್ರಕಾರ ಗಲಭೆ ವೇಳೆ ಉಪಯೋಗಿಸಿದ ಆಯುಧಗಳು ಅರ್ಜಿದಾರ ಕಚೇರಿಯಲ್ಲಿ ಸಿಗಬಹುದು ಎಂಬ ಅಂಶ ಪರಿಗಣಿಸಿ ವಿಚಾರಣಾ ನ್ಯಾಯಾಲಯವು ಅರ್ಜಿದಾರ ಕಚೇರಿ ಶೋಧ ನಡೆಸಲು 2020ರ ಆ.31ರಂದು ವಾರೆಂಟ್ ಜಾರಿ ಮಾಡಿದೆ. ಇಂತಹ ಸಂದರ್ಭದಲ್ಲಿ ನ್ಯಾಯಾಲಯಗಳು ತುರ್ತು ಕ್ರಮ ಜರುಗಿಸಬೇಕಾಗುತ್ತದೆ. ಆದ್ದರಿಂದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಹೊರಡಿಸಿದ ಆದೇಶದಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿಗಳು, ಎಸ್‌ಡಿಪಿಐ ವಿರುದ್ಧದ ಶೋಧ ವಾರೆಂಟ್ ರದ್ದುಪಡಿಸಲು ನಿರಾಕರಿಸಿದರು.