* ಅನ್‌ಲಾಕ್‌ 2.0: ರಾಜ್ಯದ ಬಹುತೇಕ ಕಡೆ ಮಾರುಕಟ್ಟೆಗೆ ಮುಗಿಬಿದ್ದ ಜನ* ಅಪಾಯ ಅನ್‌ಲಾಕ್‌, ಮತ್ತೆ ಕೊರೋನಾ ಹೆಚ್ಚಾಗುವ ಭೀತಿ* 23 ಜಿಲ್ಲೆಗಳಲ್ಲಿ 54 ದಿನದ ನಂತರ ಚಟುವಟಿಕೆ ಆರಂಭ* ಸಾಮಾಜಿಕ ಅಂತರ ಮಾಯ, ಇಳಿಯುತ್ತಿರುವ ಕೋವಿಡ್‌ ಮತ್ತೆ ಏರಿಕೆ ಭೀತಿ

ಬೆಂಗಳೂರು(ಜೂ.22): ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 23 ಜಿಲ್ಲೆಗಳಲ್ಲಿ ಕೊರೋನಾ 2ನೇ ಅಲೆಯ ನಿಯಂತ್ರಣಕ್ಕೆ ವಿಧಿಸಿದ್ದ ನಿರ್ಬಂಧಗಳು ಸೋಮವಾರದಿಂದ ಬಹುತೇಕ ತೆರವುಗೊಂಡಿದ್ದು, ಅನ್‌ಲಾಕ್‌ 2.0 ಜಾರಿಗೆ ಬಂದಿದೆ. ಬಹುತೇಕ ವ್ಯಾಪಾರ-ವಹಿವಾಟು, ಆರ್ಥಿಕ ಚಟುವಟಿಕೆಗಳು ಬಿರುಸಿನಿಂದ ಆರಂಭಗೊಂಡಿವೆ. ಮಾತ್ರವಲ್ಲದೆ ಅತಿಯಾದ ವಾಹನ ಹಾಗೂ ಜನಸಂಚಾರ ದಟ್ಟಣೆಯಿಂದಾಗಿ ಕೊರೋನಾ ಪೂರ್ವದ ಸ್ಥಿತಿ ನಿರ್ಮಾಣವಾಗಿದೆ. ಅನ್‌ಲಾಕ್‌ ಭರಾಟೆಯಲ್ಲಿ ಜನ ಮಾಸ್ಕ್‌ ಧರಿಸದೆ, ಕೊರೋನಾ ನಿಯಮಾವಳಿ ಗಾಳಿಗೆ ತೂರಿ ವ್ಯವಹರಿಸಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಕೊರೋನಾ ಸೋಂಕು ಮತ್ತೆ ತೀವ್ರವಾಗುವ ಆತಂಕ ಎದುರಾಗಿದೆ.

ಸೋಮವಾರ ಬೆಂಗಳೂರು, ಮಂಗಳೂರು, ಉಡುಪಿ, ಬೆಳಗಾವಿ, ಬಾಗಲಕೋಟೆ, ಧಾರವಾಡ, ಕೊಪ್ಪಳ, ಗದಗ, ಹಾವೇರಿ, ಕಾರವಾರ ಸೇರಿ ಹೆಚ್ಚಿನ ನಗರ, ಪಟ್ಟಣಗಳಲ್ಲಿ ವ್ಯಾಪಾರಿಗಳು ಅಂಗಡಿಗಳನ್ನು ತೆರೆದು ವ್ಯಾಪಾರ ಶುರು ಮಾಡುತ್ತಿದ್ದಂತೆ ಜನರು ಏಕಾಏಕಿ ಖರೀದಿಗೆ ಮುಗಿಬಿದ್ದಿದ್ದರು. ಅಗತ್ಯ ವಸ್ತುಗಳ ಖರೀದಿಗಿಂತಲೂ ಬಂದ್‌ ಆಗಿದ್ದ ಎಲೆಕ್ಟ್ರಿಕ್‌ ಅಂಗಡಿಗಳು, ಪಾತ್ರೆ, ಬಟ್ಟೆ, ಚಪ್ಪಲಿ, ಮೊಬೈಲ್‌, ಗÜೃಹೋಪಯೋಗಿ ಇನ್ನಿತರ ವಸ್ತುಗಳ ಖರೀದಿಗೆ ಹೆಚ್ಚು ಆಸಕ್ತಿ ವಹಿಸಿದ್ದರು. ಈ ವೇಳೆ ಸಾಮಾಜಿಕ ಅಂತರಕ್ಕೆ ತಿಲಾಂಜಲಿ ನೀಡಿದ್ದರು. ಕೊರೋನಾ 2ನೇ ಅಲೆಯು ತೀವ್ರತರವಾಗಿ ಹರಡಿ ಸಾವು-ನೋವು ನೋಡಿದ್ದರೂ ಜನರು ಮಾತ್ರ ನಿರ್ಲಕ್ಷ್ಯ ವಹಿಸಿದ್ದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಂಡುಬಂತು.

ಎರಡು ತಿಂಗಳ ಬಳಿಕ 23 ಜಿಲ್ಲೆಗಳಲ್ಲಿ ಸಾರಿಗೆ ಬಸ್‌ ರಸ್ತೆಗಿಳಿದಿದ್ದು, ಆಟೋ, ಟ್ಯಾಕ್ಸಿಗಳೂ ರಸ್ತೆಗಳಲ್ಲಿ ಕಾಣಿಸಿಕೊಂಡಿದ್ದರಿಂದ ಬೆಂಗಳೂರು ನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಂಚಾರ ದಟ್ಟಣೆ ಕಂಡುಬಂದಿತು. ಬೆಳಗ್ಗೆಯಿಂದ ನಿಧಾನಕ್ಕೆ ಜನ ಹಾಗೂ ವಾಹನ ಸಂಚಾರ ಆರಂಭವಾಗಿ ಬೆಳಗ್ಗೆ 9ರ ಹೊತ್ತಿಗೆ ದಟ್ಟಣೆ ಉಂಟಾಗಿತ್ತು. ಉದ್ಯೋಗ, ಕಚೇರಿ ಸೇರಿದಂತೆ ತಮ್ಮ ಕೆಲಸ ಕಾರ್ಯಗಳಿಗೆ ತೆರಳಲು ಜನ ರಸ್ತೆಗೆ ಇಳಿದಿದ್ದರು. ಅಗತ್ಯ ವಸ್ತುಗಳ ಖರೀದಿಗೆ ಭರಾಟೆ, ಇತರೆ ವಸ್ತುಗಳ ಖರೀದಿಗೆ ಜನರು ಅಂಗಡಿ ಮುಂಗಟ್ಟುಗಳಿಗೆ ಮುಗಿಬಿದ್ದರು. ಅನ್‌ಲಾಕ್‌ ಖುಷಿಯಲ್ಲಿದ್ದ ಸಾರ್ವಜನಿಕರು, ಕೊರೋನಾ ನಿಯಮಾವಳಿ ಮರೆತು ನಗರದಲ್ಲಿ ಓಡಾಡಿದರು. ಸಾಮಾಜಿಕ ಅಂತರ, ದೈಹಿಕ ಅಂತರ ಕಾಯ್ದುಕೊಳ್ಳದೇ ಸ್ವಚ್ಛಂದವಾಗಿ ಸಂಚರಿಸಿದರು.

ಇನ್ನು ಹೋಟೆಲ್‌ಗಳಲ್ಲಿ ಒಟ್ಟು ಆಸನದ ಶೇ.50ರಷ್ಟುಆಸನಗಳಲ್ಲಿ ಕುಳಿತು ತಿಂಡಿ-ಊಟದ ಸೇವಿಸಲು ಅವಕಾಶ ನೀಡಿದ್ದರಿಂದ ಬಹುತೇಕ ಹೋಟೆಲ್‌ಗಳಲ್ಲಿ ಗ್ರಾಹಕರ ದಟ್ಟಣೆ ಉಂಟಾಗಿತ್ತು. ಪಾರ್ಸೆಲ್‌ ಕಟ್ಟಿಸಿಕೊಳ್ಳುವರು ಒಂದೆಡೆ ಗುಂಪಾಗಿ ನಿಂತ್ತಿದ್ದರು. ಮತ್ತೊಂದೆಡೆ ಹೋಟೆಲ್‌ಗಳ ಎದುರು ಗ್ರಾಹಕರ ಗುಂಪುಗಳು ಕಂಡು ಬಂದಿತು. ಸೋಮವಾರ ಮುಂಜಾನೆಯಿಂದಲೇ ಸಾಕಷ್ಟುಜನರು ಉದ್ಯಾನಗಳಿಗೆ ವಾಕಿಂಗ್‌, ಜಾಗಿಂಗ್‌, ವ್ಯಾಯಾಮಕ್ಕೆ ತೆರಳಿದ್ದರು. ಜಿಮ್‌ಗಳಿಗೂ ಅವಕಾಶ ನೀಡಿರುವುದರಿಂದ ಸಾಕಷ್ಟುಜನರು ಜಿಮ್‌ಗಳಿಗೂ ಎಡತಾಕುತ್ತಿದ್ದರು.

ಬೆಂಗಳೂರು ಸೇರಿದಂತೆ ಕೈಗಾರಿಕೆಗಳು ಹಾಗೂ ಗಾರ್ಮೆಂಟ್‌ಗಳಲ್ಲಿ ಕ್ರಮವಾಗಿ ಶೇ.50 ಹಾಗೂ ಶೇ.30ರಷ್ಟುಕಾರ್ಮಿಕರೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಹೀಗಾಗಿ ನಗರದ ಕೈಗಾರಿಕಾ ಪ್ರದೇಶಗಳಲ್ಲಿ ಜನ ಹಾಗೂ ವಾಹನ ಸಂಚಾರ ದಟ್ಟಣೆ ಹೆಚ್ಚಿತ್ತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‌ಡೌನ್‌ ತುಸು ಸಡಿಲಿಕೆ ಮಾಡಿದ್ದರಿಂದ ಜಿಲ್ಲಾದ್ಯಂತ ಜನರ ಓಡಾಟ ಮತ್ತೆ ಹೆಚ್ಚಿತ್ತು. ಮಾರುಕಟ್ಟೆಯಲ್ಲಿ ಕಾಣಸಿಗುತ್ತಿದ್ದ ಭಾರಿ ಜನಜಂಗುಳಿ ಸೋಮವಾರ ಅಷ್ಟಾಗಿ ಇರಲಿಲ್ಲ. ಅನೇಕರು ಮಾಸ್ಕ್‌ ಧರಿಸದೆ ಸಂಚರಿಸುತ್ತಿದ್ದರು. ತುಮಕೂರಿನಲ್ಲಿ ಟ್ರಾಫಿಕ್‌ ಸಮಸ್ಯೆ, ನಗರ ಸಾರಿಗೆ ಬಸ್‌, ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳ ಸೇವೆ ಎಂದಿನಂತೆ ಇತ್ತು. ಹಾಸನದಲ್ಲಿ ವಾರದ ಮೂರು ದಿನ ಬೆಳಗ್ಗೆ 6ರಿಂದ ಮಧ್ಯಾಹ್ನ 2 ವರೆಗೆ ಅಗತ್ಯ ವಸ್ತು ಮತ್ತು ಸೇವೆಗಳ ವ್ಯವಹಾರಗಳಿಗೆ ಅವಕಾಶ ಮಾಡಿಕೊಟ್ಟಿದ್ದೇ ತಡ ನಗರದಲ್ಲಿ ರಸ್ತೆಗಳೆಲ್ಲ ಜನ ಮತ್ತು ವಾಹನಗಳಿಂದ ತುಂಬಿ ಹೋಗಿದ್ದವು.

ರಾಯಚೂರು ಜಿಲ್ಲೆಯಲ್ಲಿ ಜನರು ಅಗತ್ಯ ವಸ್ತುಗಳಿಗಿಂತ ಹೆಚ್ಚಾಗಿ ಬಟ್ಟೆವ್ಯಾಪಾರವನ್ನು ನಡೆಸಿದರು. ದಾವಣಗೆರೆ ಜನ ಸಾಗರ, ರಸ್ತೆಗಳಲ್ಲಿ ವಾಹನಗಳ ಸಂಚಾರ ಹೆಚ್ಚಿತ್ತು. ಇನ್ನು ಮಂಡ್ಯ ಮಾರುಕಟ್ಟೆಸೇರಿದಂತೆ ಹಲವೆಡೆ ಜನರು ಗುಂಪು ಗುಂಪಾಗಿ ಸೇರುವುದು ಸಾಮಾನ್ಯವಾಗಿತ್ತು. ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲೂ ಕೊರೋನಾ ನಿಯಮಾವಳಿಗಳು ಸಂಪೂರ್ಣ ಮಾಯವಾಗಿದ್ದವು.

ನಿರ್ಲಕ್ಷ್ಯ ಬೇಡ

ಸಾಮಾನ್ಯ ಜನಜೀವನಕ್ಕೆ ಅನುಕೂಲ ಕಲ್ಪಿಸಲು ನಿರ್ಬಂಧಗಳನ್ನು ಜಿಲ್ಲಾವಾರು ಸಡಿಲ ಮಾಡುತ್ತಿದ್ದೇವೆ. ಈಗಲೂ ಜನರು ಕೊರೋನಾ ಸೋಂಕಿನ ಅಪಾಯದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಸಾಧ್ಯವಾದಷ್ಟುಮನೆಯಲ್ಲೇ ಇರಿ. ಸುರಕ್ಷತಾ ಕ್ರಮಗಳನ್ನು ತಪ್ಪದೆ ಪಾಲಿಸಿ.

- ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ