ಉಪನಗರ ರೈಲು ಯೋಜನೆ ಅನುಷ್ಠಾನಕ್ಕೆ ಕೆ-ರೈಡ್‌ (ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ) ಸಮರ್ಥವಾಗಿದ್ದು, ರೈಲ್ವೇ ಇಲಾಖೆ ಅಗತ್ಯ ಸಹಕಾರ ನೀಡಬೇಕೆ ವಿನಃ ರಾಜಕೀಯ ಕೆಸರೆರಚಾಟಕ್ಕೆ ಆಸ್ಪದ ಕೊಡಬಾರದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್‌ ಹೇಳಿದರು. 

ಬೆಂಗಳೂರು (ಮಾ.18): ಉಪನಗರ ರೈಲು ಯೋಜನೆ ಅನುಷ್ಠಾನಕ್ಕೆ ಕೆ-ರೈಡ್‌ (ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ) ಸಮರ್ಥವಾಗಿದ್ದು, ರೈಲ್ವೇ ಇಲಾಖೆ ಅಗತ್ಯ ಸಹಕಾರ ನೀಡಬೇಕೆ ವಿನಃ ರಾಜಕೀಯ ಕೆಸರೆರಚಾಟಕ್ಕೆ ಆಸ್ಪದ ಕೊಡಬಾರದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್‌ ಹೇಳಿದರು. ದೇವನಹಳ್ಳಿ ಬಳಿಯ ಗೊಲ್ಲಹಳ್ಳಿಯ ಕೆ-ರೈಡ್‌ ಕ್ಯಾಸ್ಟಿಂಗ್ ಕಾರ್ಯಾಗಾರಕ್ಕೆ ಭೇಟಿ ನೀಡಿದ ಅವರು ದೇಶದ ಅತಿ ಉದ್ದದ (31 ಮೀಟರ್) ಯು-ಗರ್ಡರ್ ನಿರ್ಮಾಣ ಪ್ರಕ್ರಿಯೆ ವೀಕ್ಷಿಸಿ ಬಳಿಕ ಸುದ್ದಿಗೋಷ್ಠಿ ನಡೆಸಿದರು.

ಈಚೆಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಹಾಗೂ ಸಂಸದ ತೇಜಸ್ವಿ ಸೂರ್ಯ ನೀಡಿದ್ದ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಉಪನಗರ ರೈಲು ಯೋಜನೆ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ಉತ್ತಮ ಸಹಕಾರ ಬಯಸುತ್ತದೆ. 4ನೇ ಕಾರಿಡಾರ್‌ಗೆ ರೈಲ್ವೇ ಇನ್ನೂ ಭೂಮಿಯ ಹಸ್ತಾಂತರ ಮಾಡಿಲ್ಲ. ಡಿಸೈನ್‌ ಅನುಮೋದನೆ ವಿಳಂಬವಾಗುತ್ತಿದೆ. ಈ ಮಧ್ಯೆ ತಾಂತ್ರಿಕ ಪರಿಣಿತರ ಕೊರತೆ ಕಾರಣಕ್ಕೆ ಯೋಜನೆಯನ್ನು ಕೇಂದ್ರ ತನ್ನ ಸ್ವಾಧೀನಕ್ಕೆ ಪಡೆಯಲು ಸಿದ್ಧ ಎಂಬ ಹೇಳಿಕೆಗಳಲ್ಲಿ ಅರ್ಥವಿಲ್ಲ. ರೈಲ್ವೇ ಇಲಾಖೆ ತನ್ನ ಬಳಿಯ ಪರಿಣಿತರನ್ನು ಕೆ-ರೈಡ್‌ಗೆ ನಿಯೋಜನೆ ಮಾಡಿ ಸಹಕಾರ ನೀಡಬಹುದು ಎಂದು ಹೇಳಿದರು.

ವಿಜಯಪುರದಲ್ಲಿ ದೇಶದ 2ನೇ ದೊಡ್ಡ ಪವನ ವಿದ್ಯುತ್‌ ಘಟಕ: ಸಚಿವ ಎಂ.ಬಿ.ಪಾಟೀಲ್‌

ಹಿಂದೆ ರೈಲ್ವೆ ಇಲಾಖೆಯಿಂದ ನಿಯೋಜಿತರಾಗಿದ್ದ ಎಂಡಿ ನೇತೃತ್ವದಲ್ಲಿ ಕೆಲಸ ವಿಳಂಬವಾಗುತ್ತಿತ್ತು. ಈಗ ಕೆ-ರೈಡ್ ಕೆಲಸ ಚುರುಕಾಗಿದೆ. ನಮ್ಮಲ್ಲಿ ತಾಂತ್ರಿಕ ತಜ್ಞರು, ಅನುಭವಿಗಳು ಇದ್ದಾರೆ. ಒಂದು ವೇಳೆ ಕೇಂದ್ರ ಸ್ವಾಧೀನಕ್ಕೆ ಪಡೆದರೂ ಪುನಃ ಇಲ್ಲಿಯದೇ ಭೂಸ್ವಾದೀನ ಸೇರಿ ಇತರೆ ಪ್ರಕ್ರಿಯೆ ವಿಳಂಬವಾಗಲಿದೆ ಎಂದು ಹೇಳಿದರು. ಬೈಯಪ್ಪನಹಳ್ಳಿ-ಚಿಕ್ಕಬಾಣಾವರದ ಮಲ್ಲಿಗೆ (2ನೇ ಕಾರಿಡಾರ್‌) ಲೈನ್‌ ಎರಡು ಹಂತದಲ್ಲಿ ಅಂದರೆ, ಚಿಕ್ಕಬಾಣಾವರ-ಯಶವಂತಪುರದವರೆಗೆ 2025ರ ಡಿಸೆಂಬರ್‌ ಹಾಗೂ ಯಶವಂತಪುರ-ಬೆನ್ನಿಗಾನಹಳ್ಳಿ (17.5ಕಿಮೀ) 2026ರ ಜೂನ್‌ಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. 

ಈವರೆಗೆ ಶೇ. 20ರಷ್ಟು ಕಾಮಗಾರಿ ಮುಗಿದಿವೆ. ಇದಕ್ಕೆ ಅಗತ್ಯವಿರುವ 120.44 ಎಕರೆ ಭೂಮಿಯ ಪೈಕಿ 119.18 ಎಕರೆ ಜಮೀನು ಈಗಾಗಲೇ ಸ್ವಾಧೀನವಾಗಿದೆ ಎಂದು ಸಚಿವರು ತಿಳಿಸಿದರು. ಕೆಂಗೇರಿ- ವೈಟ್ ಫೀಲ್ಡ್ ಕಾರಿಡಾರ್‌ನಲ್ಲಿ ಕಂಟೋನ್ಮೆಂಟ್- ವೈಟ್ ಫೀಲ್ಡ್ ನಡುವೆ ಜಾಗದ ಸಮಸ್ಯೆ ಇದ್ದು, ಇಲ್ಲಿ ಎತ್ತರಿಸಿದ ಮಾರ್ಗ ನಿರ್ಮಿಸಬೇಕೆ ಅಥವಾ ಹೇಗೆ ಯೋಜನೆ ಕಾರ್ಯಗತ ಎಂಬುದರ ಬಗ್ಗೆ ರೈಲ್ವೆ ಜತೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದರು. ಈ ವೇಳೆ ಕೆ- ರೈಡ್ ವ್ಯವಸ್ಥಾಪಕ ನಿರ್ದೇಶಕಿ ಡಾ.ಎನ್.ಮಂಜುಳಾ ಇದ್ದರು.

100 ಅಡಿ ಉದ್ದದ ಗರ್ಡರ್‌: ಬೆಂಗಳೂರು ಉಪನಗರ ರೈಲು ಯೋಜನೆಯಲ್ಲಿ 31ಮೀ (100ಅಡಿ) ಉದ್ದದ ಯು-ಗರ್ಡರ್‌ನ್ನು ದೇಶದಲ್ಲಿ ಮೊದಲ ಬಾರಿಗೆ ಬಳಸಲಾಗುತ್ತಿದೆ. ಮಲ್ಲಿಗೆ ಕಾರಿಡಾರ್ ನ ಹೆಬ್ಬಾಳ- ಯಶವಂತಪುರದ 8 ಕಿಮೀ ನಡುವೆ ಇಂತಹ 450 ಯು-ಗರ್ಡರ್ ಬಳಸಲಾಗುತ್ತದೆ. ಇದರಿಂದ ಸಮಯ ಉಳಿತಾಯ ಜತೆಗೆ ಬಾಳಿಕೆಯ ಅವಧಿ ಹೆಚ್ಚಿದೆ. ಹಣ ಉಳಿತಾಯವೂ ಆಗುತ್ತದೆ ಎಂದರು.

ಯಾರೋ ಪಾಕ್‌ ಪರ ಘೋಷಣೆ ಕೂಗಿದ್ರೆ ನಾಸಿರ್ ಏಕೆ ಹೊಣೆ: ಸಚಿವ ಎಂ.ಬಿ.ಪಾಟೀಲ್

ವರ್ತುಲ ರೈಲಿಗೆ ಸಂಪರ್ಕ: ರೈಲ್ವೆ ಇಲಾಖೆ ಫೈನಲ್‌ ಲೋಕೇಶನ್‌ ಸರ್ವೆ ನಡೆಸುತ್ತಿರುವ ವರ್ತುಲ ರೈಲ್ವೆ ಯೋಜನೆಗೆ ಉಪನಗರ ರೈಲನ್ನು ಸಂಪರ್ಕಿಸಲು ಚಿಂತನೆ ನಡೆದಿದೆ. ಉಪನಗರ ರೈಲು ಯೋಜನೆಯನ್ನು ಬೆಂಗಳೂರು ಸುತ್ತಲ ಉಪನಗರಗಳಿಗೆ ವಿಸ್ತರಿಸುವ ಸಂಬಂಧ ರೈಲ್ವೇ ಬೋರ್ಡ್‌ಗೆ ಮರು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.