Asianet Suvarna News Asianet Suvarna News

ಒಳ ಮೀಸಲಾತಿ ಜಾರಿ ಬಗ್ಗೆ ಯಾರಿಗೂ ಮನಸ್ಸಿಲ್ಲ: ಕೇಂದ್ರ ಸಚಿವ ಎ. ನಾರಾಯಣಸ್ವಾಮಿ

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಒಳ ಮೀಸಲಾತಿ ಜಾರಿ ಬಗ್ಗೆ ಯಾರಿಗೂ ಮನಸ್ಸಿಲ್ಲ ಎಂದು ಆದಿದ್ರಾವಿಡ ಸಮಾಜದ ಸಮಾವೇಶದಲ್ಲಿ ಹೇಳಿದ್ದಾರೆ.

No one cares about  internal reservation says  Union minister A. Narayanaswamy gow
Author
Bengaluru, First Published Aug 8, 2022, 10:29 PM IST

ಮೈಸೂರು (ಆ.8): ಒಳ ಮೀಸಲಾತಿ ಕಲ್ಪಿಸಲು ಯಾವ ರಾಜಕಾರಣಿಗಳಿಗೂ ಮನಸ್ಸಿಲ್ಲ, ನಾನು ಸಚಿವನಾದರೂ ನನ್ನನ್ನು ಗುರುತಿಸುವುದು ಜಾತಿಯಿಂದಲೇ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.  ಮುಕ್ತ ಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಭಾನುವಾರ ಅಖಿಲ ಕರ್ನಾಟಕ ಡಾ. ಅಂಬೇಡ್ಕರ್‌ ಆದಿದ್ರಾವಿಡ ಪೌರಕಾರ್ಮಿಕರ ಜನಾಂಗದ ಅಭಿವೃದ್ಧಿ ಟ್ರಸ್ಟ್‌ ಮತ್ತು ಡಾ. ಅಂಬೇಡ್ಕರ್‌ ಅಂಬೇಡ್ಕರ್‌ ಆದಿದ್ರಾವಿಡ ಪೌರಕಾರ್ಮಿಕರ ಯುವಕರ ಅಭಿವೃದ್ಧಿ ಮಹಾಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಆದಿದ್ರಾವಿಡ ಸಮಾಜದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಜಾತಿ ವರ್ಗೀಕರಿಸಿ ಒಳ ಮೀಸಲಾತಿ ಕಲ್ಪಿಸುವುದು ಯಾವ ರಾಜಕಾರಣಿಗಳಿಗೂ ಬೇಕಿಲ್ಲ. ಒಳ ಮೀಸಲಾತಿ ಕುರಿತು ಮಾತನಾಡಲು ಅನೇಕರು ಭಯಪಡುತ್ತಾರೆ. ಆದರೆ ನನಗೆ ಆ ಭಯವಿಲ್ಲ. ನನಗೆ ಸಮಾಜ ಮೊದಲು, ನಂತರ ರಾಜಕಾರಣಿ. ನಾನು ಸಚಿವನಾದರೂ, ಎಷ್ಟೇ ಒಳ್ಳೆಯ ಬಟ್ಟೆಹಾಕಲಿ, ಸ್ಟಾರ್‌ ಹೊಟೇಲ್‌ಗಳಿಗೆ ತೆರಳಿದರೂ ನನ್ನನ್ನು ನೋಡುವುದು ಮಾದಿಗ ಜಾತಿಯವನ್ನು ಕುಳಿತಿದ್ದಾನೆ ಎನ್ನುತ್ತಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಒಳ ಮೀಸಲಾತಿ ಕುರಿತು ಅನೇಕ ರಾಜ್ಯಗಳು ವರದಿ ಸಿದ್ಧಪಡಿಸಿವೆ. ಆದರೂ ಒಳ ಮೀಸಲಾತಿ ಕಲ್ಪಿಸುವುದು ಅಷ್ಟುಸುಲಭವಲ್ಲ. ಈ ವಿಷಯದಲ್ಲಿ ಮಾದಿಗ ಸಮಾಜಕ್ಕೆ ಅನ್ಯಾಯವಾಗುತ್ತಿದೆ. ಜಾತಿ ವರ್ಗೀಕರಿಸಿ ಒಳಮೀಸಲಾತಿ ಕಲ್ಪಿಸುವ ಕುರಿತು ಕಾನೂನು ಹೋರಾಟ ನಡೆಯುತ್ತಿದೆ. ಈ ಕುರಿತು ಹಿರಿಯ ವಕೀಲರೊಬ್ಬರನ್ನು ನೇಮಿಸಲಾಗಿದೆ. ಆ. 10 ರಂದು ಸುಪ್ರೀಂಕೋರ್ಚ್‌ನಲ್ಲಿ ವಿಚಾರಣೆ ಇದೆ. ಕೇಂದ್ರ ಸರ್ಕಾರಕ್ಕೆ ಕೆಲ ಸೂಚನೆ ನೀಡುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

ಮಾದಿಗ ಜಾತಿಯಲ್ಲಿ 70 ಉಪ ಪಂಗಡಗಳಿವೆ. ಯಾರೊಬ್ಬರೂ ನಾವೆಲ್ಲ ಒಂದು ಎಂದು ಹೇಳುವುದಿಲ್ಲ. ಮದುವೆಗೆ ಹೆಣ್ಣು ಕೊಡುವುದಿಲ್ಲ, ನೀರೂ ಕೊಡುವುದಿಲ್ಲ. ಒಂದು ಪ್ರದೇಶದ ಮಾದಿಗರನ್ನು ಮತ್ತೊಂದು ಪ್ರದೇಶದ ಮಾದಿಗರು ಒಪ್ಪುವುದಿಲ್ಲ. ಸಚಿವನಾದ ನನ್ನನ್ನೇ ನಮ್ಮ ಜನರು ನಮ್ಮ ನಾಯಕ ಎಂದು ಕೆರೆಯುವುದಿಲ್ಲ, ಮನೆಗೆ ಕರೆದು ಊಟ ಹಾಕುವುದಿಲ್ಲ ಎಂದು ಅವರು ಪರಿಸ್ಥಿತಿ ಬಿಚ್ಚಿಟ್ಟರು.

ಈ ಎಲ್ಲಾ ಕಾರಣದಿಂದ ಮಾದಿಗರಿಗೆ ನ್ಯಾಯ ಸಿಕ್ಕಿಲ್ಲ. ಮಾದಿಗ ಸಮಾಜದವರು ಈಗಲಾದರೂ ಒಂದಾಗಬೇಕು. ನಮ್ಮಲ್ಲಿ ಬದ್ಧತೆ ಕೊರತೆ ಇದೆ. ಉಪ ಪಂಗಡಗಳ ನಡುವೆ ಮುಕ್ತ ಚರ್ಚೆ ಇಲ್ಲ. ಪ್ರೇರಣೆ ಮತ್ತು ಅರಿವಿನ ಕೊರತೆಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಬಂಧ ನಮ್ಮ ಸಮಾಜದ ಪರಿಸ್ಥಿತಿ ಬದಲಾಗಲಿಲ್ಲ. ಕೇಂದ್ರ, ರಾಜ್ಯ ಸರ್ಕಾರಗಳಲ್ಲಿ ಅನೇಕ ಸೌಲಭ್ಯಗಳಿವೆ. ಅದರ ಕುರಿತು ನಮ್ಮ ಸಮಾಜದವರಿಗೆ ಮತ್ತು ಶಾಸಕರು, ಸಂಸದರಿಗೂ, ಸಂಘಟನೆಯವರಿಗೂ ಗೊತ್ತಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ರಾಜ್ಯಸಭಾ ಮಾಜಿ ಸದಸ್ಯ, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಉಪಾಧ್ಯಕ್ಷ ಕೆ.ಬಿ. ಕೃಷ್ಣಮೂರ್ತಿ ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಪೌರಕಾರ್ಮಿಕರ ಕುರಿತು ಸಮಾಜದ ಮನಸ್ಥಿತಿ ಬದಲಾಗಿಲ್ಲ. ಎಷ್ಟೇ ವಿದ್ಯಾವಂತರಾದರೂ ಪೌರಕಾರ್ಮಿಕರ ಕೆಲಸವನ್ನೆ ಮಾಡಬೇಕು ಎಂದು ಜನ ಬಯಸುತ್ತಾರೆ. ಜತೆಗೆ, ಮೀಸಲಾತಿ ಜಾರಿಯಾಗಿ ಇಷ್ಟುವರ್ಷವಾದರೂ ಪೌರಕಾರ್ಮಿಕರಿಗೆ ಸಾಮಾಜಿಕ ನ್ಯಾಯದಡಿ ಸೌಲಭ್ಯ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ಎಸ್‌.ಎ. ರಾಮದಾಸ್‌ ಮಾತನಾಡಿ, ಕಾನೂನಿನಲ್ಲಿ ಬದಲಾವಣೆ ಮಾಡಲು ಸಾಧ್ಯವಾಗದೆ ಮನಸ್ಸಿನಲ್ಲಿ ಬದಲಾವಣೆ ಆಗಬೇಕಿದೆ. ನಾನು ಮೊದಲು ಚುನಾವಣೆಯಲ್ಲಿ ನಿಂತಾಗ ಏಳು ಕಾಲೋನಿ ಒಳ ಬಿಟ್ಟಿರಲಿಲ್ಲ.ಆದರೆ ಬದಲಾದ ಕಾಲದಲ್ಲಿ ಇಂದು ನನ್ನನ್ನು ಅಣ್ಣ ತಮ್ಮನಂತೆ ಮನೆಗೆ ಕರೆದು ಊಟ ಹಾಕುತ್ತಾರೆ. ಹಲವು ಹಬ್ಬಗಳಿಗೆ ಕರೆದು ಉಣಬಡಿಸುತ್ತಾರೆ ಎಂದರೆ ಸಮಾಜದ ಪರಿವರ್ತನೆ ಆಗಿರುವುದು ಪ್ರಮುಖ ಕಾರಣ. ದೇವರಾಜ ಕಾಲೋನಿಗೆ ಭೇಟಿ ನೀಡಿ ಮನೆ ಮನೆಗೆ ತೆರಳಿ ಪೇಜಾವರ ಶ್ರೀಗಳು ಪೂಜೆ ಮಾಡಿದ್ದರು. ಮಾತಿನ ಕೃತಿಯಲ್ಲಿ ಮನಸ್ಸು ಬದಲಾವಣೆ ಆದರೆ ಎಲ್ಲವೂ ಸರಿಯಾಗಲಿದೆ. ಪೌರ ಕಾರ್ಮಿಕರ ಮಕ್ಕಳ ಅನುಕೂಲಕ್ಕಾಗಿ ಕೇಂದ್ರ ಮತ್ತು ರಾಜ್ಯಸರ್ಕಾರಗಳ ನೆರವಿನಿಂದ ರೆಸಿಡೆನ್ಸಿ ಸ್ಕೂಲ್‌ ತೆರೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಶಾಸಕ ಎಲ್ ನಾಗೇಂದ್ರ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ. ಶಿವಣ್ಣ, ಎಂಡಿಎ ಮಾಜಿ ಅಧ್ಯಕ್ಷ ಎಚ್‌.ವಿ. ರಾಜೀವ್‌, ನಗರ ಪಾಲಿಕೆ ಸದಸ್ಯೆ ಶಾಂತಮ್ಮ ವಡಿವೇಲು, ಹುಣಸೂರು ನಗರಸಭಾ ಸದಸ್ಯೆ ರಾಣಿ ಪೆರುಮಾಳ್‌, ನಂಜನಗೂಡು ನಗರಸಭೆ ಸದಸ್ಯ ಪಿ. ದೇವ, ಕೆ.ಆರ್‌. ನಗರ ಪುರಸಭಾ ಸದಸ್ಯ ಶಂಕರ್‌, ಸೋಸಲೆ ಗ್ರಾಪಂ ಅಧ್ಯಕ್ಷೆ ಎಸ್‌. ಹೇಮಾ ಇದ್ದರು.

ಸಂಘಟನೆಯ ಕಾರ್ಯಾಧ್ಯಕ್ಷ ವಿ. ರಾಜು, ಪ್ರಧಾನ ಕಾರ್ಯದರ್ಶಿ ಎಚ್‌.ಎಸ್‌. ಸುರೇಶ್‌ ಕುಮಾರ್‌, ಉಪಾಧ್ಯಕ್ಷ ಜಿ. ಮಹದೇವ್‌, ಶಂಕರಬಾಬು, ನಗರಾಧ್ಯಕ್ಷ ಶಿವ, ಕಾರ್ಯಾಧ್ಯಕ್ಷ ಪಿ.ಆರ್‌. ವಿಜಯ  ಜಿಲ್ಲಾಧ್ಯಕ್ಷ ಎಸ್‌.ಪಿ. ಮಹದೇವ್‌ ಇದ್ದರು.

ಸ್ವಚ್ಛತಾ ಕಾರ್ಯದಲ್ಲಿ ಶೇ. 90ರಷ್ಟುಮಂದಿ ಭಾಗಿಯಾದರೂ, ಅನುಕಂಪ, ಮಾನವೀಯತೆ ತೋರಿದರೂ ಸಮಾನತೆ ಕಾಣುತ್ತಿಲ್ಲ. ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಹಿಂದುಳಿದಿರುವ ಕಾರಣ ಎಲ್ಲಾ ರಾಜಕೀಯ ಪಕ್ಷಗಳು ಮೇಲೆತ್ತುವ ಕೆಲಸ ಮಾಡಬೇಕು.

- ಬಿ. ಸುಬ್ರಹ್ಮಣ್ಯ, ರಾಜ್ಯಾಧ್ಯಕ್ಷರು.

Follow Us:
Download App:
  • android
  • ios