ಬೆಂಗಳೂರು (ಆ.25): ಕೋವಿಡ್‌ ನಿಯಂತ್ರಣ ಸಂಬಂಧ ಹೊರ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ವಿಧಿಸಲಾದ ನಿರ್ಬಂಧ, ಈ ಹಿಂದೆ ಹೊರಡಿಸಿದ್ದ ಎಲ್ಲ ಸುತ್ತೋಲೆಗಳನ್ನು ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಹೀಗಾಗಿ ಇನ್ನುಮುಂದೆ ಹೊರ ರಾಜ್ಯಗಳ ಪ್ರಯಾಣಿಕರು ಮುಕ್ತವಾಗಿ ರಾಜ್ಯಕ್ಕೆ ಆಗಮಿಸಬಹುದಾಗಿದೆ.

ಕೋವಿಡ್‌ ಸೋಂಕಿತರು ರಾಜ್ಯಕ್ಕೆ ಬಂದ ಸಂದರ್ಭದಲ್ಲಿ ಸ್ವಯಂ ಐಸೋಲೇಶನ್‌ಗೆ ಒಳಗಾಗಬೇಕು, ಮಾಸ್ಕ್‌ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.

ಸೇವಾ ಸಿಂಧು ಪೋರ್ಟಲ್‌ನಲ್ಲಿ ನೊಂದಣಿ ಮಾಡುವುದು, ರಾಜ್ಯದ ಗಡಿಗಳು, ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಮತ್ತು ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ತಪಾಸಣೆ ಮಾಡುವುದನ್ನು ರದ್ದುಗೊಳಿಸಲಾಗಿದೆ. ತಪಾಸಣೆ, ಪ್ರಯಾಣಿಕರ ವರ್ಗೀಕರಣ, ಕೈಗಳ ಮೇಲೆ ಮುದ್ರೆ ಹಾಕುವುದು, 14 ದಿನಗಳ ಕ್ವಾರಂಟೈನ್‌, ಬೇರ್ಪಡಿಸುವಿಕೆ ಮತ್ತು ಪರೀಕ್ಷೆ ಮಾಡುವುದನ್ನು ಸ್ಥಗಿತ ಮಾಡಲಾಗಿದೆ. ಮನೆಯ ಬಾಗಿಲಿಗೆ ಪೋಸ್ಟರ್‌ ಹಚ್ಚುವುದು, ನೆರೆ-ಹೊರೆಯವರು, ನಿವಾಸ ಕಲ್ಯಾಣ ಸಂಘ, ಅಪಾರ್ಟ್‌ಮೆಂಟ್‌ ಮಾಲಿಕರ ಸಂಘಗಳಿಗೆ ಮಾಹಿತಿ, ಪಂಚಾಯತ್‌/ ವಾರ್ಡ್‌ ಮಟ್ಟದ ತಂಡಗಳಿಂದ ಮೇಲ್ವಿಚಾರಣೆ, ಫ್ಲೈಯಿಂಗ್‌ ಸ್ಕಾ$್ವಡ್‌, ಐವಿಆರ್‌ಎಸ್‌ ಕಾಲ್‌ಸೆಂಟರ್‌ನಿಂದ ಹೊರಹೋಗುವ ಕೊರೋನಾ ಸಂಬಂಧಿ ಕರೆಗಳನ್ನು ರದ್ದುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಅನ್‌ಲಾಕ್‌ -4: ಸೆ. 01 ರಿಂದ ಶಾಲಾ- ಕಾಲೇಜು ಆರಂಭಕ್ಕೆ ಅನುಮತಿ?...

ಪರಿಷ್ಕೃತ ಸುತ್ತೋಲೆ ಕರ್ನಾಟಕಕ್ಕೆ ಬರುವ ಎಲ್ಲ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ವ್ಯಾಪಾರಿಗಳು, ವಿದ್ಯಾರ್ಥಿಗಳು, ಕೆಲಸಕ್ಕೆ ಬರುವ ಕಾರ್ಮಿಕರು, ಸಾರಿಗೆ ಮಧ್ಯಂತರ ಪ್ರಯಾಣಿಕರಿಗೆ ಅನ್ವಯಿಸುತ್ತದೆ. ಅವರ ಭೇಟಿಯ ಉದ್ದೇಶ ಅಥವಾ ರಾಜ್ಯದಲ್ಲಿ ಉಳಿದುಕೊಳ್ಳುವ ಅವಧಿಯನ್ನು ಲೆಕ್ಕಿಸದೆ ಎಲ್ಲ ಜಿಲ್ಲಾಧಿಕಾರಿಗಳು, ಬಿಬಿಎಂಪಿ ಆಯುಕ್ತರು ತ್ವರಿತವಾಗಿ ಯಾವುದೇ ಬದಲಾವಣೆ ಇಲ್ಲದಂತೆ ಸುತ್ತೋಲೆ ಜಾರಿಗೊಳಿಸಬೇಕು ಎಂದು ಸೂಚಿಸಿದೆ.

ಕೋವಿಡ್‌ ಲಕ್ಷಣಗಳಿಲ್ಲದಿರುವವರು ರಾಜ್ಯಕ್ಕೆ ಬಂದ ಮೇಲೆ 14 ದಿನಗಳ ಕ್ವಾರಂಟೈನ್‌ ಇಲ್ಲದೆ ತಮ್ಮ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ಆದರೆ, 14 ದಿನಗಳವರೆಗೆ (ರಾಜ್ಯಕ್ಕೆ ಬಂದ ದಿನದಿಂದ) ಕೋವಿಡ್‌-19 ರೋಗ ಲಕ್ಷಣಗಳಾದ ಜ್ವರ, ಕೆಮ್ಮು, ಶೀತ, ಗಂಟಲು, ನೋವು, ಉಸಿರಾಟ ತೊಂದರೆ ಇತ್ಯಾದಿಗಳ ಬಗ್ಗೆ ಸ್ವಯಂ ನಿಗಾ ವಹಿಸಬೇಕು. ಈ ವೇಳೆಯಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡಲ್ಲಿ ತಕ್ಷಣವೇ ವೈದ್ಯಕೀಯ ಸಮಾಲೋಚನೆ ಪಡೆಯಬೇಕು ಅಥವಾ ಆಪ್ತಮಿತ್ರ ಸಹಾಯವಾಣಿ 14410ಕ್ಕೆ ಕರೆ ಮಾಡಬೇಕು ಎಂದು ನಿರ್ದೇಶಿಸಲಾಗಿದೆ.

ವೈದ್ಯರ ಸಲಹೆ ಧಿಕ್ಕರಿಸಿ ಸಿಎಂ ಬಿಎಸ್‌ವೈ ಬೆಳಗಾವಿಯಲ್ಲಿ ವೈಮಾನಿಕ ಸಮೀಕ್ಷೆ...

ರಾಜ್ಯಕ್ಕೆ ಆಗಮಿಸಿದವರಲ್ಲಿ ಕೋವಿಡ್‌-19 ರೋಗ ಲಕ್ಷಣಗಳಿದ್ದರೆ ಸ್ವಯಂ ಪ್ರತ್ಯೇಕವಾಗಿರಬೇಕು. ತಪ್ಪದೇ ವೈದ್ಯಕೀಯ ಸಮಾಲೋಚನೆ ಪಡೆಯಬೇಕು ಅಥವಾ ಆಪ್ತಮಿತ್ರ ಸಹಾಯವಾಣಿ 14410ಕ್ಕೆ ಕರೆ ಮಾಡಬೇಕು ಎಂದು ನಿರ್ದೇಶಿಸಲಾಗಿದೆ. ಕೋವಿಡ್‌-19 ತಡೆಗಟ್ಟಲು ಮಾಸ್ಕ್‌ಗಳನ್ನು ಕಡ್ಡಾಯವಾಗಿ ಧರಿಸಬೇಕು. 2 ಮೀಟರ್‌ ಅಥವಾ 6 ಅಡಿ ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಸಾಬೂನಿನಿಂದ ಆಗಾಗ್ಗೆ ಕೈ ತೊಳೆಯುವುದು ಅಥವಾ ಕೈ ಸ್ಯಾನಿಟೈಸರ್‌ ಬಳಸಬೇಕು. ಕೆಮ್ಮುವಾಗ ಶಿಷ್ಟಾಚಾರ ಪಾಲನೆ ಇತ್ಯಾದಿ ಮುನ್ನಚ್ಚರಿಕೆ ಕ್ರಮಗಳನ್ನು ಸಾರ್ವಜನಿಕ ಮತ್ತು ಕೆಲಸದ ಸ್ಥಳದಲ್ಲಿ ಪಾಲನೆ ಮಾಡಬೇಕು ಎಂದು ತಿಳಿಸಿದೆ.

ಇತರೆ ರಾಜ್ಯಗಳಿಂದ ಬಂದವರಲ್ಲಿ ರೋಗ ಲಕ್ಷಣಗಳಿದ್ದರೆ ಸ್ವಯಂ ವರದಿ ಮಾಡುವುದು, ಸ್ವಯಂ ಪ್ರತ್ಯೇಕತೆ ಕಾಯ್ದುಕೊಳ್ಳುವುದು ಮತ್ತು ರೋಗ ಲಕ್ಷಣಗಳುಳ್ಳ ವ್ಯಕ್ತಿಗಳು ಕೋವಿಡ್‌-19 ಪರೀಕ್ಷೆ ಮಾಡಿಸುವ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳು/ ಬಿಬಿಎಂಪಿ ಸೂಕ್ತ ಐಇಸಿ (ಮಾಹಿತಿ, ಶಿಕ್ಷಣ ಮತ್ತು ಸಂವಹನ) ಅಭಿಯಾನ ನಡೆಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.