ರಾಜ್ಯದಲ್ಲಿ 25 ಸಾವಿರ ಕೋಟಿ ರು. ಮೊತ್ತದ ಬಿಲ್‌ಗಳು ಬಾಕಿಯಿವೆ. ಅದರಲ್ಲಿ ಜಲಸಂಪನ್ಮೂಲ ಇಲಾಖೆಯದ್ದೇ 12 ಸಾವಿರ ಕೋಟಿ ರು. ಬಿಲ್‌ ಪಾವತಿಯಾಗಬೇಕಿದೆ. ಆಗಸ್ಟ್‌ 31ರೊಳಗೆ ಬಾಕಿ ಬಿಲ್‌ ಪಾವತಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಎಲ್ಲ ಸಚಿವರಿಗೂ ಮನವಿ ಮಾಡುತ್ತೇವೆ: ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ

ಬೆಂಗಳೂರು(ಆ.12): ‘ಗುತ್ತಿಗೆದಾರರ ಬಾಕಿ ಬಿಲ್‌ ಪಾವತಿಸದೆ ಇಲ್ಲದ ಸಬೂಬು ಹೇಳುತ್ತಿದೆ’ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ, ‘ಆ. 31ರೊಳಗೆ ಎಲ್ಲ ಬಿಲ್‌ಗಳನ್ನು ಪಾವತಿಸಬೇಕು’ ಎಂದು ಒತ್ತಾಯಿಸಿದ್ದಾರೆ. ಅದರೆ, ‘ಬಾಕಿ ಬಿಲ್‌ ಪಾವತಿಸುವ ಸಂಬಂಧ ಯಾವುದೇ ಸಚಿವರು ಗುತ್ತಿಗೆದಾರರ ಬಳಿ ಕಮಿಷನ್‌ ಕೇಳಿಲ್ಲ’ ಎಂದೂ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ 25 ಸಾವಿರ ಕೋಟಿ ರು. ಮೊತ್ತದ ಬಿಲ್‌ಗಳು ಬಾಕಿಯಿವೆ. ಅದರಲ್ಲಿ ಜಲಸಂಪನ್ಮೂಲ ಇಲಾಖೆಯದ್ದೇ 12 ಸಾವಿರ ಕೋಟಿ ರು. ಬಿಲ್‌ ಪಾವತಿಯಾಗಬೇಕಿದೆ. ಆಗಸ್ಟ್‌ 31ರೊಳಗೆ ಬಾಕಿ ಬಿಲ್‌ ಪಾವತಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಎಲ್ಲ ಸಚಿವರಿಗೂ ಮನವಿ ಮಾಡುತ್ತೇವೆ. ಜತೆಗೆ ಬಿಲ್‌ ಪಾವತಿಯಾಗದಿದ್ದರೆ ಯಾವ ರೀತಿ ಹೋರಾಟ ಮಾಡಬೇಕು ಎಂಬುದರ ಬಗ್ಗೆ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ನಿರ್ಧರಿಸಲಾಗುವುದು’ ಎಂದರು.

ಸರ್ಕಾರ ಸಂಘರ್ಷಕ್ಕಿಳಿದರೆ ಎದುರಿಸಲು ಸಿದ್ಧ: ಕೆಂಪಣ್ಣ ಎಚ್ಚರಿಕೆ

ಯಾರೂ ಕಮಿಷನ್‌ ಕೇಳಿಲ್ಲ:

ಬಿಬಿಎಂಪಿ ಗುತ್ತಿಗೆದಾರರು ಬಿಲ್‌ ಪಾವತಿಗೆ 15 ಪರ್ಸೆಂಟ್‌ ಕಮಿಷನ್‌ ಕೇಳಲಾಗುತ್ತಿದೆ ಎಂದು ಆರೋಪಿಸುತ್ತಿರುವುದು ಸತ್ಯಕ್ಕೆ ದೂರವಾದ ಮಾತು. ಪರ್ಸೆಂಟೇಜ್‌ ಬಗ್ಗೆ ಹೇಳಿದ್ದ ಗುತ್ತಿಗೆದಾರ ಹೇಮಂತ್‌ ನಂತರ ನನಗೆ ಕರೆ ಮಾಡಿ, ‘ಒತ್ತಡದಲ್ಲಿ ಆ ರೀತಿ ಆರೋಪ ಮಾಡಿದ್ದೇನೆ ಅಷ್ಟೇ. ಆ ರೀತಿ ಯಾರೂ ಕಮಿಷನ್‌ ನನಗೆ ಕೇಳಿರಲಿಲ್ಲ’ ಎಂದು ಹೇಳಿದ್ದಾರೆ. ಅದೇ ರೀತಿ ರಾಜ್ಯದ ಯಾವ ಸಚಿವರೂ ನಮ್ಮ ಬಳಿ ಕಮಿಷನ್‌ ಕೇಳಿಲ್ಲ. ಆದರೆ, ಕಮಿಷನ್‌ ದಂಧೆ ನಿಲ್ಲಿಸಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಕೇಳಿಕೊಳ್ಳುತ್ತೇನೆ ಎಂದು ಕೆಂಪಣ್ಣ ತಿಳಿಸಿದರು.

40 ಪರ್ಸೆಂಟ್‌ ಹೇಳಿಕೆಗೆ ಈಗಲೂ ನಾನು ಬದ್ಧ

‘ಕಳೆದ ಸರ್ಕಾರದ ಅವಧಿಯಲ್ಲಿ 40 ಪರ್ಸೆಂಟ್‌ ಕಮಿಷನ್‌ ಆರೋಪಕ್ಕೆ ನಾವು ಈಗಲು ಬದ್ಧರಾಗಿದ್ದೇವೆ. ಅದನ್ನು ನಿರೂಪಿಸಬಹುದಾದ ಎಲ್ಲ ದಾಖಲೆಗಳೂ ನಮ್ಮ ಬಳಿಯಿವೆ. 40 ಪರ್ಸೆಂಟ್‌ ಕಮಿಷನ್‌ ಆರೋಪದ ತನಿಖೆಗಾಗಿ ಸರ್ಕಾರ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ತನಿಖಾ ಸಮಿತಿ ರಚಿಸಿದೆ. ಆ ಸಮಿತಿಗೆ ನಾವು ಎಲ್ಲ ದಾಖಲೆಗಳನ್ನು ನೀಡುತ್ತೇವೆ. ಅದಕ್ಕಾಗಿ ಎಲ್ಲ ದಾಖಲೆಗಳನ್ನೂ ಸಿದ್ಧಪಡಿಸಿ ಇಟ್ಟುಕೊಳ್ಳಲಾಗಿದೆ’ ಎಂದು ಕೆಂಪಣ್ಣ ವಿವರಿಸಿದರು.

ನಾನು ಇಲ್ಲೇ ಇದ್ದೇನೆ: ಕಾರಜೋಳಗೆ ಟಾಂಗ್‌

ಮಾಜಿ ಸಚಿವ ಗೋವಿಂದ ಕಾರಜೋಳ ಅವರು ನನ್ನನ್ನು ಎಲ್ಲಿದ್ದೀರಿ ಕೆಂಪಣ್ಣ ಎಂದು ಪ್ರಶ್ನಿಸುತ್ತಿದ್ದಾರೆ. ನನಗೀಗ 83 ವರ್ಷ ವಯಸ್ಸು. ಈಗಲೂ ನಾನು ಇಲ್ಲೇ ಇದ್ದೇನೆ. ಹಿಂದಿನ ಅವಧಿಯಲ್ಲಿ ನೀರಾವರಿ ಇಲಾಖೆಯಲ್ಲಿನ ಅಕ್ರಮಗಳನ್ನು ಹೇಳಿದರೆ ಅದೇ ದೊಡ್ಡ ಕಥೆಯಾಗುತ್ತದೆ.

ಎಸ್‌ಐಟಿ ತನಿಖೆ ಒಪ್ಪಲ್ಲ: ಕೆಂಪಣ್ಣ

ಕಾಮಗಾರಿ ಕೈಗೊಳ್ಳದೆ ಯಾರು ಬಿಲ್‌ ಸಲ್ಲಿಸಿದ್ದಾರೋ ಅವರ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ಅದರ ಬದಲು ಎಲ್ಲ ಕಾಮಗಾರಿಗಳನ್ನು ಪರಿಶೀಲನೆ ನಡೆಸುತ್ತೇವೆ ಎನ್ನುವುದು ಸರಿಯಲ್ಲ. ಕಳೆದ ನಾಲ್ಕು ವರ್ಷಗಳ ಕಾಮಗಾರಿಗಳ ಪರಿಶೀಲನೆಗೆ ಎಸ್‌ಐಟಿ ರಚಿಸಲಾಗಿದೆ. ಆದರೆ, ಬಿಬಿಎಂಪಿಯಲ್ಲಿ ಕಾಮಗಾರಿಗಳ ನಿರ್ವಹಣಾ ಅವಧಿ 1 ವರ್ಷದಿಂದ 2 ವರ್ಷ ಮಾತ್ರ. ಹೀಗಿರುವಾಗ ನಾಲ್ಕು ವರ್ಷಗಳ ಹಿಂದಿನ ಕಾಮಗಾರಿ ಪರಿಶೀಲಿಸುವುದು ಎಷ್ಟುಸರಿ ಎಂದು ಕೆಂಪಣ್ಣ ಪ್ರಶ್ನಿಸಿದರು.

ಅಲ್ಲದೆ, ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡಿಲ್ಲ ಎಂದು ಬಿಲ್‌ ತಡೆ ಹಿಡಿಯಲಾಗಿದೆ. ಅದೇ ರೀತಿ ನಿಗದಿತ ಅವಧಿಯಲ್ಲಿ ಕಾಮಗಾರಿ ಪರಿಶೀಲಿಸದ ಅಧಿಕಾರಿಗಳ ವಿರುದ್ಧವೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿ. ಗುತ್ತಿಗೆದಾರರ ಜತೆಗೆ ಅಧಿಕಾರಿಗಳ ಹೆಸರನ್ನೂ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.

ನಾನು ಇಲ್ಲೇ ಇದ್ದೇನೆ: ಕಾರಜೋಳಗೆ ತಿರುಗೇಟು

‘ಬಿಬಿಎಂಪಿ ಗುತ್ತಿಗೆದಾರರು ಬಿಜೆಪಿ ನಾಯಕರನ್ನು ಭೇಟಿ ಮಾಡುತ್ತಿರುವುದು ರಾಜಕೀಯ ಉದ್ದೇಶದಿಂದಷ್ಟೇ. ನಾವು ಹಿಂದೆ ಮೊದಲು ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದೆವು. ಅದರಿಂದ ಯಾವುದೇ ನೆರವಾಗದ ಕಾರಣ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದೆವು ಹಾಗೂ ವಿಪಕ್ಷ ನಾಯಕರನ್ನು ಭೇಟಿ ಮಾಡಿದ್ದೆವು. ಈಗ ಕಮಿಷನ್‌ ವಿಚಾರವಾಗಿ ಮಾಜಿ ಸಚಿವ ಗೋವಿಂದ ಕಾರಜೋಳ ಅವರು ನನ್ನನ್ನು ಎಲ್ಲಿದ್ದೀರಿ ಕೆಂಪಣ್ಣ ಎಂದು ಪ್ರಶ್ನಿಸುತ್ತಿದ್ದಾರೆ. ನನಗೀಗ 83 ವರ್ಷ ವಯಸ್ಸು. ಈಗಲೂ ನಾನು ಇಲ್ಲೇ ಇದ್ದೇನೆ. ಹಿಂದಿನ ಅವಧಿಯಲ್ಲಿ ನೀರಾವರಿ ಇಲಾಖೆಯಲ್ಲಿನ ಅಕ್ರಮಗಳನ್ನು ಹೇಳಿದರೆ ಅದೇ ದೊಡ್ಡ ಕಥೆಯಾಗುತ್ತದೆ’ ಎಂದು ಕೆಂಪಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಬಿಲ್‌ ಪಾವತಿಸಿದೆ ಸಂಘರ್ಷಕ್ಕೆ ನಿಂತರೆ ನಾವು ರೆಡಿ: ಸಿದ್ದು ಸರ್ಕಾರಕ್ಕೆ ಕೆಂಪಣ್ಣ ಖಡಕ್‌ ಎಚ್ಚರಿಕೆ

‘ಅದೇ ರೀತಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಪದೇಪದೇ ನನ್ನ ಹೆಸರು ಬಳಸುತ್ತಿದ್ದಾರೆ. ಎಸ್‌ಐಟಿ ರಚಿಸಿ ತನಿಖೆ ನಡೆಸಲು ನಾನೇ ಕಾರಣ ಎಂದು ಹೇಳುತ್ತಿದ್ದಾರೆ. ಅವರಿಗೂ ಪತ್ರ ಬರೆಯುತ್ತೇನೆ. ಸುಮ್ಮನೆ ನನ್ನ ಹೆಸರು ಬಳಸಬೇಡಿ ಎಂದು ಕೋರುತ್ತೇನೆ’ ಎಂದರು.

ಮುಳುಗುವುದು ಬಾಕಿಯಿದೆ:

‘ರಾಜ್ಯ ಸರ್ಕಾರ ಎಲ್ಲ ರೀತಿಯ ಭಾಗ್ಯವನ್ನೂ ನೀಡುತ್ತಿದೆ. ಅದೇ ರೀತಿ ಗುತ್ತಿಗೆದಾರರಿಗೆ ಬಿಲ್‌ ಪಾವತಿ ಭಾಗ್ಯವನ್ನು ನೀಡಲಿ. ಬೆಂಕಿಯಿಂದ ಬಾಣಲೆಗೆ ಬಿದ್ದ ಪರಿಸ್ಥಿತಿ ನಮ್ಮದಾಗಿದೆ. ಸಾಲ, ಬ್ಯಾಂಕ್‌ಗಳಲ್ಲಿನ ಓವರ್‌ ಡ್ರಾಫ್ಟ್‌ಗಳು ರದ್ದಾಗುತ್ತಿದೆ. ಆರ್ಥಿಕ ವಿಚಾರವಾಗಿ ಕುತ್ತಿಗೆ ತನಕ ನೀರು ಬಂದಿದ್ದು, ಮುಳುಗುವುದಷ್ಟೆಬಾಕಿಯಿದೆ’ ಎಂದು ಕೆಂಪಣ್ಣ ಹೇಳಿದರು.