ಗುಜರಾತ್‌ ಮಾದರಿ ಅನುಸರಿಸಿ ಬೆಳೆಸಲು ಚಿಂತನೆ, ಯಾರಿಂದಲೂ ನಂದಿನಿ ಬ್ರ್ಯಾಂಡ್‌ ಅಳಿಸಲಾಗದು: ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ 

ಬೆಂಗಳೂರು(ಏ.10): ಅಮುಲ್‌ ಜೊತೆ ನಂದಿನಿ ವಿಲೀನ ಪ್ರಸ್ತಾಪವೇ ಇಲ್ಲ. ಯಾರೇ ಸ್ಪರ್ಧೆ ಮಾಡಿದರೂ ನಂದಿನಿ ಬ್ರ್ಯಾಂಡ್‌ ಅಳಿಸಲು ಅಸಾಧ್ಯ. ಕರ್ನಾಟಕದಲ್ಲಿ 15 ಹಾಲು ಒಕ್ಕೂಟಗಳಿದ್ದು ಎಲ್ಲವೂ ಲಾಭದಲ್ಲಿವೆ. ಗುಜರಾತ್‌ ಮಾದರಿ ಅನುಸರಿಸಿದರೆ ಇನ್ನಷ್ಟುಬೆಳೆಸಲು ಸಾಧ್ಯ ಎಂಬ ಚಿಂತನೆ ಇದೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಸ್ಪಷ್ಟಪಡಿಸಿದರು.

ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್‌ನ ಅಮುಲ್‌ ಜೊತೆ ನಂದಿನಿ ಉತ್ಪನ್ನಗಳನ್ನು ತಯಾರಿಸುವ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯನ್ನು (ಕೆಎಂಎಫ್‌) ವಿಲೀನ ಮಾಡುವ ಪ್ರಸ್ತಾಪವೇ ಇಲ್ಲ. ನಂದಿನಿ ಬ್ರ್ಯಾಂಡ್‌ ಅಳಿಸಲು ಅಸಾಧ್ಯವಾಗುವಂತೆ ಭದ್ರ ಬುನಾದಿ ಹಾಕಲಾಗಿದೆ. ಗುಜರಾತ್‌ ಮಾದರಿ ಅನುಸರಿಸಿದರೆ ಮತ್ತಷ್ಟುಬೆಳೆಸಲು ಸಾಧ್ಯ ಎಂಬ ಚಿಂತನೆ ಇದೆ ಎಂದು ವಿವರಿಸಿದರು.

ಸಗಣಿ ಬಾಚೋ ತಾಯಂದಿರಿಗೆ 5 ರೂ ಸಬ್ಸಿಡಿ ನೀಡಿದ್ದೇವೆ : ಸಿಟಿ ರವಿ

ಕೆಎಂಎಫ್‌ಗೆ ಸರ್ಕಾರದಿಂದ ಗರಿಷ್ಠ ಸಹಕಾರ ನೀಡಲಾಗುತ್ತಿದೆ. ಕರ್ನಾಟಕದಲ್ಲಿ 15 ಮಿಲ್‌್ಕ ಯೂನಿಯನ್‌ಗಳಿದ್ದು ಎಲ್ಲವೂ ಲಾಭದಲ್ಲಿವೆ. ಹಾಲು ಮತ್ತು ಹಾಲಿನ ಉತ್ಪನ್ನದ ವಿಚಾರದಲ್ಲಿ ಕೃತಕ ಅಭಾವ ಸೃಷ್ಟಿಸಿಲ್ಲ. ಬೇಸಿಗೆ ಆಗಿರುವುದರಿಂದ ಹಾಲು ಉತ್ಪಾದನೆ ಕಡಿಮೆ ಆಗಿದೆ. ಲಕ್ಷಾಂತರ ನಂದಿನಿ ಕೌಂಟರ್‌ಗಳಿದ್ದು ಆನ್‌ಲೈನ್‌ನಲ್ಲೂ ನಂದಿನಿ ಉತ್ಪನ್ನಗಳು ಸಿಗುತ್ತವೆ. ವಿಶ್ವಾದ್ಯಂತ ವಹಿವಾಟು ಹೊಂದಿದ್ದೇವೆ ಎಂದು ಮಾಹಿತಿ ನೀಡಿದರು.

ತಂತ್ರಜ್ಞಾನದ ನೆರವಿಗೆ ಸಲಹೆ:

ಕೋವಿಡ್‌ ಸಂದರ್ಭದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಉಳಿಕೆ ಹಾಲಿನ ಪುಡಿಯನ್ನು ಮಕ್ಕಳಿಗೆ ಉಚಿತವಾಗಿ ನೀಡಿ ಈ ಹಣವನ್ನು ಪಾವತಿ ಮಾಡಲಾಗಿತ್ತು. ಕಳೆದ ಡಿಸೆಂಬರ್‌ನಲ್ಲಿ ಮಂಡ್ಯದ ಗೆಜ್ಜಲಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ಅವರು ನಂದಿನಿ ಮಾರುಕಟ್ಟೆವಿಸ್ತರಣೆ, ತಂತ್ರಜ್ಞಾನದ ನೆರವು ಪಡೆಯಲು ಅಮುಲ್ ಜೊತೆ ಚರ್ಚಿಸಲು ಸಲಹೆ ನೀಡಿದ್ದರು ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.

ನಂದಿನಿ ಸೊಸೈಟಿಗಳು ಸುಮಾರು 26 ಲಕ್ಷ ರೈತರಿಂದ ಹಾಲು ಖರೀದಿಸುತ್ತವೆ. ಲೀಟರ್‌ ಅಮುಲ್‌ ಹಾಲನ್ನು ಆನ್‌ಲೈನ್‌ನಲ್ಲಿ 57 ರುಪಾಯಿಗೆ ಮಾರಾಟ ಮಾಡಿದರೆ, ನಾವು 39 ರು.ಗೆ ಮಾರಾಟ ಮಾಡುತ್ತೇವೆ. ತಮಿಳುನಾಡು ಮತ್ತಿತರ ರಾಜ್ಯಗಳಿಗೆ ನಮ್ಮ ಉತ್ಪನ್ನಗಳನ್ನು ಕಳುಹಿಸುತ್ತಿದ್ದೇವೆ. ಆಂಧ್ರಕ್ಕೆ ಲಾಡು ತಯಾರಿಸಲು ನಮ್ಮ ತುಪ್ಪ ಸರಬರಾಜು ಮಾಡುತ್ತಿದ್ದೇವೆ. ಆದರೆ ಅಮುಲ್‌ ಹೆಸರಿನಲ್ಲಿ ಕೆಲವರು ಚುನಾವಣಾ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.