ಕೆಎಂಎಫ್‌ನ ನಂದಿನಿ ಬ್ರ್ಯಾಂಡ್‌ ಅನ್ನು ಅಮೂಲ್‌ ಜತೆಗೆ ವಿಲೀನಗೊಳಿಸುವ ಪ್ರಶ್ನೆಯೇ ಇಲ್ಲ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ವಿಲೀನಗೊಳಿಸುವಂತೆ ಹೇಳಿಲ್ಲ. ಹೆಚ್ಚು ಬೇಡಿಕೆಯಿರುವ ಕಡೆ ಏಕರೂಪದ ಬ್ರ್ಯಾಂಡ್‌ ಮಾರಾಟದ ಬಗ್ಗೆ ಮಾತನಾಡಿದ್ದರು: ಸಚಿವ ಜೆ.ಸಿ.ಮಾಧುಸ್ವಾಮಿ 

ವಿಧಾನ ಪರಿಷತ್‌(ಫೆ.22):  ಕೆಎಂಎಫ್‌ನ ‘ನಂದಿನಿ ಬ್ರ್ಯಾಂಡ್‌’ ಅನ್ನು ಅಮೂಲ್‌ ಜತೆಗೆ ವಿಲೀನಗೊಳಿಸಲು ಸಾಧ್ಯವಿಲ್ಲ. ಇದಕ್ಕೆ ಕಾನೂನಿನಲ್ಲಿ ಅವಕಾಶವೂ ಇಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.

ಮಂಗಳವಾರ ವಿಧಾನಷರಿಷತ್ತಿನಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಮುಖ್ಯಮಂತ್ರಿಗಳ ಪರವಾಗಿ ಉತ್ತರ ನೀಡಿದ ಅವರು, ‘ಕೆಎಂಎಫ್‌ನ ನಂದಿನಿ ಬ್ರ್ಯಾಂಡ್‌ ಅನ್ನು ಅಮೂಲ್‌ ಜತೆಗೆ ವಿಲೀನಗೊಳಿಸುವ ಪ್ರಶ್ನೆಯೇ ಇಲ್ಲ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ವಿಲೀನಗೊಳಿಸುವಂತೆ ಹೇಳಿಲ್ಲ. ಹೆಚ್ಚು ಬೇಡಿಕೆಯಿರುವ ಕಡೆ ಏಕರೂಪದ ಬ್ರ್ಯಾಂಡ್‌ ಮಾರಾಟದ ಬಗ್ಗೆ ಮಾತನಾಡಿದ್ದರು. ಮಾರುಕಟ್ಟೆಯಲ್ಲಿ ನಂದಿನಿ ಬ್ರ್ಯಾಂಡ್‌ನ ಉತ್ಪನ್ನಗಳಿಗೆ ಉತ್ತಮ ಬೇಡಿಕೆಯಿದೆ. ಹೀಗಾಗಿ ಈ ಬ್ರ್ಯಾಂಡ್‌ ಅನ್ನು ಅಮೂಲ್‌ ಜತೆಗೆ ವಿಲೀನಗೊಳಿಸುವುದಿಲ್ಲ’ ಎಂದು ವಿರೋಧ ಪಕ್ಷಗಳಿಗೆ ಸ್ಪಷ್ಟಪಡಿಸಿದರು.

KMF, ಅಮುಲ್ ವಿಲೀನ ಇಲ್ಲ: ಸಿದ್ದರಾಮಯ್ಯ, ಎಚ್ಡಿಕೆ ವಿರುದ್ದ ಅಶ್ವತ್ಥ್‌ನಾರಾಯಣ್ ಗರಂ

ಈ ವೇಳೆ ಜೆಡಿಎಸ್‌ ಸದಸ್ಯ ಟಿ.ಎ.ಶರವಣ ಮಾತನಾಡಿ, ಎಚ್‌.ಡಿ.ರೇವಣ್ಣ ಅವರು ಕೆಎಂಎಫ್‌ ಸಂಸ್ಥೆಯನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, ‘ರೇವಣ್ಣ ಕಣ್ಣು ಬಿಡುವುದಕ್ಕೂ ಮುಂಚೆ ನಾನು ಐದೂವರೆ ವರ್ಷ ಕೆಎಂಎಫ್‌ ಅಧ್ಯಕ್ಷನಾಗಿದ್ದೆ. ಎರಡು ವರ್ಷ ಅಧ್ಯಕ್ಷರಾಗಿದ್ದ ಎಚ್‌.ಡಿ.ರೇವಣ್ಣ ಅವರು ಕೆಎಂಎಫ್‌ನ ಹಾಲಿನ ಪೌಡರ್‌ ಘಟಕ, ಫೀಡ್‌ ಘಟಕವನ್ನು ಹಾಸನಕ್ಕೆ ಕೊಂಡೊಯ್ದಿದ್ದೇ ಸಾಧನೆಯಾಗಿದೆ’ ಎಂದು ತಿರುಗೇಟು ನೀಡಿದರು.