Minister Boseraju on R Ashoka ವಿಪಕ್ಷ ನಾಯಕ ಆರ್. ಅಶೋಕ್ ಅವರ ಭ್ರಷ್ಟಾಚಾರ ಆರೋಪಕ್ಕೆ ಕೊಡಗಿನಲ್ಲಿ ತಿರುಗೇಟು ನೀಡಿರುವ ಸಚಿವ ಎನ್.ಎಸ್. ಬೋಸರಾಜ್, ಬಿಜೆಪಿ ನಾಯಕರಿಗೆ ಮೆಚುರಿಟಿ ಇಲ್ಲ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ಕೇಂದ್ರದಿಂದ ಬರಬೇಕಾದ ಅನುದಾನ ತರುವಂತೆ ಸವಾಲು ಹಾಕಿದರು.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು : ರಾಜ್ಯದಲ್ಲಿ ತೀವ್ರ ಭ್ರಷ್ಟಾಚಾರವಿದೆ, ಅಬಕಾರಿ ಇಲಾಖೆಯಲ್ಲಿ ಸಿಎಂ ಅವರೇ ಹಣ ಸಂಗ್ರಹಿಸಿ ಮಹಾರಾಷ್ಟ್ರ ಚುನಾವಣೆಗೆ ಹಣ ಕಳುಹಿಸಿದ್ದಾರೆ. ಇನ್ಮುಂದೆ ಅಸ್ಸಾಂ ಚುನಾವಣೆಗೆ ಕಳುಹಿಸಲಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಸುದ್ದಿಗೋಷ್ಠಿಯಲ್ಲಿ ಹೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಕೊಡಗು ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜ್ ಈಗಿರುವ ಬಿಜೆಪಿ ನಾಯಕರಿಗೆ ಮೆಚುರಿಟಿ ಇಲ್ಲ. ಆರ್ ಅಶೋಕ್ ಅವರಿಗೆ ಆಗಲಿ, ವಿಜಯೇಂದ್ರ ಅವರಿಗೆ ಆಗಲಿ ಮೆಚುರಿಟಿ ಇಲ್ಲ. ರಾಜಕಾರಣಿಗಳು ಏನಾದರೂ ಮಾತನಾಡಿದರು ಎಂದರೆ ಅದಕ್ಕೆ ಒಂದು ಘನತೆ ಇರಬೇಕು. ಆರ್ ಅಶೋಕ್ ಅವರಿಗೆ ನಾಚಿಕೆ ಆಗಲ್ವಾ ಎಂದು ಕಿಡಿಯಾಗಿದ್ದಾರೆ.
ರಾಜಕಾರಣಿಗಳು ಮಾತನಾಡಿದರೆ ಅದನ್ನು ಗಂಭೀರವಾಗಿ ಪರಿಗಣಿಸುವಂತೆ ಇರಬೇಕು. ಆದರೆ ವಿಪಕ್ಷ ನಾಯಕರಾಗಿರುವ ಆರ್ ಅಶೋಕ್ ಅವರ ಮಾತಿಗೆ ಏನಾದರೂ ಮೆಚುರಿಟಿ ಇದೆಯಾ. ಕೇವಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೊಗಳುವುದು ಅಷ್ಟೇ ಗೊತ್ತು. ಅದಕ್ಕೆ ಆರ್ ಅಶೋಕ್ ಅವರಿಗೆ ಮೆಚುರಿಟಿ ಇಲ್ಲ ಅಂತ ಬಿಜೆಪಿಯವರೇ ಹೇಳುತ್ತಾರೆ. ಅವರಿಗೆ ತಮ್ಮ ಪಕ್ಷದಲ್ಲಿ ಏನು ಆಗುತ್ತದೆ ಎನ್ನುವುದು ಗೊತ್ತಿಲ್ಲ. ಅವರ ಪಕ್ಷದಲ್ಲಿರುವ ಹುಳುಕುಗಳ ಅವರು ಸರಿಮಾಡಿಕೊಳ್ಳಲು ಆಗಲ್ಲ. ಶ್ರೀರಾಮುಲು, ರೆಡ್ಡಿ ಪಾದಯಾತ್ರೆ ಮಾಡುತ್ತೇವೆ ಎಂದು ಪ್ಲಾನ್ ಮಾಡಿಕೊಂಡರೆ ಅದಕ್ಕೆ ಹೈಕಮಾಂಡ್ ಒಪ್ಪಿಗೆ ಬೇಕು ಅಂತಾರೆ. ಹೀಗಿರುವಾಗ ನಮ್ಮ ಪಕ್ಷದ ಬಗ್ಗೆ ಏನು ಮಾತನಾಡುವುದು.
ಕೇಂದ್ರ ಸರ್ಕಾರದಿಂದ ಬರಬೇಕಾಗಿರುವ ಅನುದಾನದ ಬಗ್ಗೆ ಒಬ್ಬ ಕೇಂದ್ರ ಸಚಿವನೂ ಮಾತನಾಡಲ್ಲ, ಅವರ ಸಂಸದರು ಮಾತನಾಡಲ್ಲ, ಜೋಳ ಕಬ್ಬು ಅವುಗಳ ಎಂಎಸ್ ಪಿ ಬಗ್ಗೆ ಮಾತನಾಡಲ್ಲ. ಅದು ಬಿಟ್ಟು ಬೆಳಿಗ್ಗೆಯಿಂದ ಸಂಜೆವರೆಗೆ ನಮ್ಮ ಸರ್ಕಾರದ ವಿರುದ್ಧ ಬೊಗಳುತ್ತಾರೆ ಎಂದು ಕಿಡಿಯಾಗಿದ್ದಾರೆ.
ಅವರಿಗೆ ತಾಕತ್ತಿದ್ದರೆ ಕೇಂದ್ರದಿಂದ ಬರಬೇಕಾಗಿರುವ ಅನುದಾನ ಕೊಡಿಸಲಿ ಎಂದು ಮಡಿಕೇರಿಯಲ್ಲಿ ಸಚಿವ ಭೋಸರಾಜ್ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.
ಇನ್ನು ಡಿಸಿಎಂ ಡಿಕೆಶಿ ಅವರು ದೆಹಲಿಯಲ್ಲಿ ಹೈಕಮಾಂಡ್ ಅವನ್ನು ಎಡತಾಕುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಅಸ್ಸಾಂ ಚುನಾವಣೆ ಹಿರಿಯ ವೀಕ್ಷಕರಾಗಿ ಹಾಕಿರುವುದರಿಂದ ಡಿಕೆಶಿ ಅವರು ಚುನಾವಣೆಯ ಕೆಲಸಗಳಿಗಾಗಿ ದೆಲಿಗೆ ಹೋಗಿದ್ದಾರೆ ಅಷ್ಟೇ ಎಂದಿದ್ದಾರೆ. ನನ್ನನ್ನೂ ಆಂಧ್ರ ಚುನಾವಣಾ ವೀಕ್ಷಕರಾಗಿ ಹಾಕಿದ್ದರು, ಹಾಗೆ ಡಿಕೆಶಿ ಅವರನ್ನು ಹಾಕಿದ್ದಾರೆ. ಅವರು ಅಸ್ಸಾಂ ಭೇಟಿ ಮಾಡಿ ಸಭೆ ನಡೆಸಿ ಬಂದಿದ್ದಾರೆ. ಬಳಿಕ ಎನ್ ಆರ್ ಇ ಜಿ ಎ ಬಗ್ಗೆ ಮಾತನಾಡಲು ಕೇಂದ್ರ ನಾಯರಕು ಬರಲು ಹೇಳಿದ್ದರು. ಹೀಗಾಗಿ ಡಿಕೆಶಿ ಅವರು ದೆಹಲಿಗೆ ಹೋಗಿದ್ದರು ಅಷ್ಟೇ. ಕೆಪಿಸಿಸಿ ಅಧ್ಯಕ್ಷರಾಗಿ ಅವರು ದೆಹಲಿಗೂ ಹೋಗಬಾರದ. ಅದಕ್ಕೆ ಏನೇನೋ ಕಲ್ಪನೆಗಳನ್ನು ಮಾಡುವುದು ಏಕೆ ಎಂದು ಸಚಿವ ಬೋಸರಾಜ್ ಹೇಳಿದ್ದಾರೆ.
ಕೆಲವು ನಾಯಕರು ತಮ್ಮ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ, ಅವರ ಮಾತಿಗೆಲ್ಲಾ ಯಾವ ಬೆಲೆ ಇಲ್ಲ ಎಂದು ಹೇಳಿದ್ದಾರೆ. ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ಪ್ರಕರಣ ಗೊತ್ತಾಗುತ್ತಿದ್ದಂತೆ ಸರ್ಕಾರ ಕ್ರಮ ಕೈಗೊಂಡಿದೆ. ಯಾವುದೇ ತಪ್ಪು ಗೊತ್ತಾಗುತ್ತಿದ್ದಂತೆ ಕೈಗೊಳ್ಳಬೇಕು, ಹಾಗೆಯೆ ನಮ್ಮ ಸರ್ಕಾರ ಕ್ರಮಕೈಗೊಂಡಿದೆ. ಜಿಲ್ಲೆಗಳಲ್ಲಿ ಇರುವಾಗ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ನ್ಯಾಯಾಂಗ ಇಲಾಖೆ, ಸಿಬಿಐ ಮುಂತಾದ ಇಲಾಖೆಗಳಲ್ಲೇ ಇಂತಹ ಪ್ರಕರಣ ಆಗಿವೆ. ಇವೆಲ್ಲಾ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತವೆ ಅಲ್ಲವೆ.? ಅಲ್ಲಿ ಏನು ಕ್ರಮ ಆಗಿದೆ ಎಂದು ಸಚಿವ ಭೋಸರಾಜ್ ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರದ ಯಾವ ಇಲಾಖೆಯಲ್ಲಿ ಇಂತಹ ಘಟನೆಗಳು ನಡೆದಿಲ್ಲ ಹೇಳಿ, ಅವರೇನು ಇಂತಹ ಇಲಾಖೆಗಳನ್ನು ಮುಚ್ಚಿ ಹಾಕಿದ್ದಾರಾ. ಈಗ ಬಯಲಿಗೆ ಬಂದಿದೆ ಕ್ರಮ ಆಗಿದೆ, ತಪ್ಪು ಮಾಡಿದ್ದಾರೆ ಶಿಕ್ಷೆ ಅನುಭವಿಸುತ್ತಾರೆ ಎಂದಿದ್ದಾರೆ. ಈಗ ಆಗಿರುವ ಪ್ರಕರಣವೋ ಯಾವಾಗ ಆಗಿದೆಯೋ ಗೊತ್ತಿಲ್ಲ, ತನಿಖೆ ನಡೆಯುತ್ತಿದೆ ಎಂದು ಸಚಿವ ಭೋಸರಾಜ್ ಹೇಳಿದ್ದಾರೆ.

