ಕರ್ನಾಟಕದಲ್ಲಿ ಲೋಡ್ ಶೆಡ್ಡಿಂಗ್ ಮಾಡಿಲ್ಲ, ವಿದ್ಯುತ್ ಕಡಿತಕ್ಕೆ ಸೂಚನೆಯನ್ನೂ ಕೊಟ್ಟಿಲ್ಲ: ಸಚಿವ ಜಾರ್ಜ್
ರಾಜ್ಯದಲ್ಲಿ ಮಳೆ ಕೊರತೆಯಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಬೇಸಿಗೆಯಲ್ಲಿ ಇರುವಷ್ಟು ವಿದ್ಯುತ್ ಬೇಡಿಕೆ ಈಗಲೇ ಇದೆ. ಥರ್ಮಲ್ ವಿದ್ಯುತ್ ಘಟಕ ದುರಸ್ತಿ ನಡೆಯುತ್ತಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಕೆಲವೆಡೆ ಕೊಂಚ ವ್ಯತ್ಯಯ ಆಗಿರಬಹುದು. ಆದರೆ, ಎಲ್ಲಿಯೂ ಲೋಡ್ ಶೆಡ್ಡಿಂಗ್‌ಗೆ ಸೂಚನೆ ನೀಡಿಲ್ಲ: ಇಂಧನ ಸಚಿವ ಕೆ.ಜೆ.ಜಾರ್ಜ್

ಬೆಂಗಳೂರು(ಸೆ.06): ರಾಜ್ಯದ ಯಾವುದೇ ಭಾಗದಲ್ಲೂ ಅಘೋಷಿತ ವಿದ್ಯುತ್ ಕಡಿತ ಮಾಡಿಲ್ಲ. ಲೋಡ್ ಶೆಡ್ಡಿಂಗ್ ಮಾಡುವಂತೆ ಅಧಿಕಾರಿಗಳಿಗೆ ಯಾವ ಸೂಚನೆಯನ್ನೂ ನೀಡಿಲ್ಲ. ವಿದ್ಯುತ್ ಸ್ಥಾವರಗಳ ದುರಸ್ಥಿ ಕಾರ್ಯಗಳು ಇರುವೆಡೆ ಕೊಂಚ ವ್ಯತ್ಯಯಗಳು ಆಗಿರಬಹುದು ಅಷ್ಟೆಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ವಿದ್ಯುತ್ ಕಡಿತ ಮಾಡುತ್ತಿರುವ ಬಗ್ಗೆ ರೈತರಿಂದ ಬರುತ್ತಿರುವ ದೂರುಗಳ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಮಳೆ ಕೊರತೆಯಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಬೇಸಿಗೆಯಲ್ಲಿ ಇರುವಷ್ಟು ವಿದ್ಯುತ್ ಬೇಡಿಕೆ ಈಗಲೇ ಇದೆ. ಥರ್ಮಲ್ ವಿದ್ಯುತ್ ಘಟಕ ದುರಸ್ತಿ ನಡೆಯುತ್ತಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಕೆಲವೆಡೆ ಕೊಂಚ ವ್ಯತ್ಯಯ ಆಗಿರಬಹುದು. ಆದರೆ, ಎಲ್ಲಿಯೂ ಲೋಡ್ ಶೆಡ್ಡಿಂಗ್‌ಗೆ ಸೂಚನೆ ನೀಡಿಲ್ಲ ಎಂದು ತಿಳಿಸಿದ್ದಾರೆ.
ಲೋಡ್ ಶೆಡ್ಡಿಂಗ್: ವಿದ್ಯುತ್ ಖರೀದಿಗೆ ಹೊರ ರಾಜ್ಯಗಳಿಗೆ ಕರ್ನಾಟಕ ಸರ್ಕಾರ ಮೊರೆ?
ಲೋಡ್ ಶೆಡ್ಡಿಂಗ್ ಅಗತ್ಯ ಬಿದ್ದರೆ ಮೊದಲೇ ತಿಳಿಸಿ ಮಾಡುತ್ತೇವೆ. ಸದ್ಯ ಅದರ ಅಗತ್ಯವಿಲ್ಲ. ನಿತ್ಯ 40 ಕೋಟಿ ರು. ವೆಚ್ಚದ ವಿದ್ಯತ್ ಖರೀದಿ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಮತ್ತೆ ಮಳೆ ಆರಂಭವಾಗಿರುವುದರಿಂದ ವಿದ್ಯುತ್ ಉತ್ಪಾದನೆಯೂ ಹೆಚ್ಚಾಗುತ್ತಿದೆ. ಮಂಗಳವಾರ ನಿಗದಿಗಿಂತ 100 ಯೂನಿಟ್ ಉತ್ಪಾದನೆ ಹೆಚ್ಚಾಗಿದೆ. ಮಳೆ ಮುಂದುವರೆದರೆ ಸಮಸ್ಯೆ ನಿವಾರಣೆಯಾಗುತ್ತದೆ ಎಂದರು.