Asianet Suvarna News Asianet Suvarna News

ಸರ್ಕಾರದಿಂದ ಗರ್ಭಿಣಿ, ಮಕ್ಕಳಿಗೆ ಮೊಟ್ಟೆವಿತರಣೆ ಕುಂಠಿತ

  • ಪೌಷ್ಟಿಕತೆ ಹೆಚ್ಚಿಸಲು ಗರ್ಭಿಣಿಯರು, ಬಾಣಂತಿಯರು ಮತ್ತು ಆರು ವರ್ಷದ ಮಕ್ಕಳಿಗೆ ಸರ್ಕಾರ ನೀಡುತ್ತಿದ್ದ ಕೋಳಿ ಮೊಟ್ಟೆ
  • ಮೊಟ್ಟೆಯ ದರ ಹೆಚ್ಚಳದಿಂದಾಗಿ ಲಕ್ಷಾಂತರ ಫಲಾನುಭವಿಗಳಿಗೆ ಮೊಟ್ಟೆನೀಡದೇ ಇರುವುದು ಬೆಳಕಿಗೆ ಬಂದಿದೆ
No Egg distribution To children And pregnant women in karnataka snr
Author
Bengaluru, First Published Aug 4, 2021, 7:09 AM IST
  • Facebook
  • Twitter
  • Whatsapp

 ಬೆಂಗಳೂರು (ಆ.04):  ಪೌಷ್ಟಿಕತೆ ಹೆಚ್ಚಿಸಲು ಗರ್ಭಿಣಿಯರು, ಬಾಣಂತಿಯರು ಮತ್ತು ಆರು ವರ್ಷದ ಮಕ್ಕಳಿಗೆ ಸರ್ಕಾರ ನೀಡುತ್ತಿದ್ದ ಕೋಳಿ ಮೊಟ್ಟೆಯ ದರ ಹೆಚ್ಚಳದಿಂದಾಗಿ ಲಕ್ಷಾಂತರ ಫಲಾನುಭವಿಗಳಿಗೆ ಮೊಟ್ಟೆನೀಡದೇ ಇರುವುದು ಬೆಳಕಿಗೆ ಬಂದಿದೆ.

ಅಂಗನವಾಡಿ ಕೇಂದ್ರಗಳ ಮೂಲಕ ಅರ್ಹರಿಗೆ ಕೋಳಿ ಮೊಟ್ಟೆನೀಡುವ ಕಾರ್ಯಕ್ರಮ ದರ ಹೆಚ್ಚಳದಿಂದ ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ. ಲಾಕ್‌ಡೌನ್‌ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮೊಟ್ಟೆಯ ಬೆಲೆ ಹೆಚ್ಚಳವಾಗಿದೆ. ಪ್ರತಿ ಮೊಟ್ಟೆಗೆ 5 ರು.ಗಳಿದ್ದ ಬೆಲೆ 6.50 ರು.ಗಳಿಂದ 7 ರು.ಗಳವರೆಗೊ ಏರಿಕೆಯಾಗಿದೆ. ಆದರೆ ಸರ್ಕಾರ ತಲಾ ಒಂದು ಮೊಟ್ಟೆಗೆ 5 ರು.ನಂತೆ ಕೆಲವು ಕಡೆ ತಿಂಗಳಿಗೆ 125 ರು. (ಒಬ್ಬರಿಗೆ) ನೀಡುತ್ತಿದೆ ಹೊರತು ಮೊಟ್ಟೆದರ ಹೆಚ್ಚಳದ ಪ್ರಕಾರ ನೀಡುತ್ತಿಲ್ಲ. ಹೀಗಾಗಿ ಫಲಾನುಭವಿಗಳಿಗೆ ನಿಗದಿತ ಪ್ರಮಾಣದಲ್ಲಿ ಮೊಟ್ಟೆವಿತರಣೆಗೆ ಸಾಧ್ಯವಾಗುತ್ತಿಲ್ಲ ಎಂದು ಗೊತ್ತಾಗಿದೆ.

ಮೊಟ್ಟೆ ಖರೀದಿಯಲ್ಲಿ ಲಂಚ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಸಚಿವೆ ಶಶಿಕಲಾ ಜೊಲ್ಲೆ

ರಾಜ್ಯದಲ್ಲಿ 46.16 ಲಕ್ಷ ಫಲಾನುಭವಿಗಳಿದ್ದು, ಮೊಟ್ಟೆದರ 5 ರು. ಇದ್ದಾಗ ಮಾತ್ರ ನೀಡಲಾಗುತ್ತದೆ. ದರ ಹೆಚ್ಚಳವಾದರೆ ಮೊಟ್ಟೆಯನ್ನೇ ನೀಡುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಕೋಳಿ ಮೊಟ್ಟೆಬೆಲೆ ಏರಿಕೆಯಾಗುತ್ತಿರುವ ಅಂಶವನ್ನು ಪ್ರತಿ ಹಂತದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುತ್ತಿದೆ. ಆದರೆ, ಮೊಟ್ಟೆಖರೀದಿಗೆ ನೀಡುತ್ತಿರುವ ಮೊತ್ತ ಹೆಚ್ಚಾಗುತ್ತಿಲ್ಲ. ಇದರಿಂದ ಕಡಿಮೆ ಪ್ರಮಾಣದ ಮೊಟ್ಟೆನೀಡಬೇಕಾಗಿದೆ. ಇದಕ್ಕೆ ಫಲಾನುಭವಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ನಗರದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯೊಬ್ಬರು ಮಾಹಿತಿ ನೀಡಿದರು.

ಪ್ರತಿ ತಿಂಗಳಿಗೆ 25 ಮೊಟ್ಟೆವಿತರಣೆ ಮಾಡಬೇಕು ಎಂಬ ನಿಯಮವಿದೆ. ಇದಕ್ಕಾಗಿ ಸರ್ಕಾರದಿಂದ ಪ್ರತಿಯೊಂದು ಫಲಾನುಭವಿಗೆ 125 ರು.ಗಳನ್ನು ನೀಡುತ್ತಿದೆ. ಆದರೆ, ಮೊಟ್ಟೆಬೆಲೆ ಹೆಚ್ಚಳದಿಂದ ಅಷ್ಟೂಮೊಟ್ಟೆವಿತರಣೆ ಮಾಡುಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಬದಲಾಗಿ 125 ರು.ಗಳ ಹಣವನ್ನು ಫಲಾನುಭವಿಗಳಿಗೆ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.

ರಾಜ್ಯದಲ್ಲಿನ ಫಲಾನುಭವಿಗಳ ವಿವರ:

ರಾಜ್ಯದ 175 ತಾಲೂಕಿಗಳಲ್ಲಿ 62,580 ಅಂಗನವಾಡಿ ಕೇಂದ್ರಗಳಿವೆ. ಈ ಕೇಂದ್ರಗಳ ಮೂಲಕ ಒಟ್ಟು 46.16 ಲಕ್ಷ ಫಲಾನುಭವಿಗಳು ಕೋಳಿ ಮೊಟ್ಟೆಸೇರಿದಂತೆ ವಿವಿಧ ಪೌಷ್ಟಿಕಾಂಶ ಆಹಾರಗಳನ್ನು ಪಡೆದುಕೊಳ್ಳುತ್ತಿದ್ದಾರೆ. 6 ತಿಂಗಳಿಂದ ಮೂರು ವರ್ಷದ 22.09 ಲಕ್ಷ ಮಕ್ಕಳು, 3ರಿಂದ ಆರು ವರ್ಷದ 15.94 ಮಕ್ಕಳು, 4.12 ಗರ್ಭಿಣಿ ಮಹಿಳೆಯರು ಮತ್ತು 3.93 ಬಾಣಂತಿಯರು ಫಲಾನುಭವಿಗಳಿದ್ದಾರೆ. ಇದೀಗ ಕೋಳಿ ಮೊಟ್ಟೆವಿತರಣೆಯಲ್ಲಿ ಏರುಪೇರಾಗುತ್ತಿದೆ.

ಪರಿಷ್ಕೃತ ಬೆಲೆ ನಿಗದಿಗೆ ಇನ್ನು ಟೆಂಡರ್‌

ಅಂಗನವಾಡಿಗಳ ಮೂಲಕ ವಿವಿಧ ಫಲಾನುಭವಿಗಳಿಗೆ ವಿತರಣೆ ಮಾಡುವ ಕೋಳಿ ಮೊಟ್ಟೆಬೆಲೆ ಹೆಚ್ಚಳವಾಗಿರುವ ಸಂಬಂಧ ಇಲಾಖೆಗೆ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಪರಿಷ್ಕೃತ ಬೆಲೆ ನಿಗದಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ ಟೆಂಡರ್‌ ಕರೆಯಲಾಗಿದೆ. ಟೆಂಡರ್‌ ಪ್ರಕ್ರಿಯೆ ಶೀಘ್ರದಲ್ಲಿ ಮುಗಿಯಲಿದ್ದು, ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios