ಬೆಂಗಳೂರು(ಜು.03): ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೋನಾ ಸೋಂಕು ನಿಯಂತ್ರಣ ಕಾರ್ಯದಲ್ಲಿ ಮುನ್ನೆಲೆಯಲ್ಲಿ ನಿಂತು ಕಾರ್ಯನಿರ್ವಹಿಸುತ್ತಿರುವ ಬಿಬಿಎಂಪಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಸೋಂಕು ಪರೀಕ್ಷೆ ವ್ಯವಸ್ಥೆ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದಲ್ಲಿ ಕೊರೋನಾ ಸೋಂಕಿನ ಭೀತಿ ಆರಂಭಗೊಂಡ ದಿನದಿಂದ ಈವರೆಗೆ ಬಿಬಿಎಂಪಿ ಆಯುಕ್ತರಿಂದ ಎಲ್ಲ ವರ್ಗದ ಅಧಿಕಾರಿ ಸಿಬ್ಬಂದಿ ನಗರದಲ್ಲಿ ಕೊರೋನಾ ಸೋಂಕು ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಂಟೈನ್ಮೆಂಟ್‌ ವಲಯ ನಿರ್ಮಾಣ, ಸೀಲ್‌ಡೌನ್‌ ಮಾಡುವುದು, ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವುದು, ಸಂಪರ್ಕಿತರನ್ನು ಕ್ವಾರಂಟೈನ್‌ ಮಾಡುವುದು, ಸೋಂಕು ನಿವಾರಕ ದ್ರಾವಣ ಸಿಂಪಡಣೆ, ಆರೋಗ್ಯ ತಪಾಸಣೆ ಸೇರಿದಂತೆ ವಿವಿಧ ಕಾರ್ಯ ಮಾಡುತ್ತಿದ್ದಾರೆ. ಆದರೆ, ಇಷ್ಟೆಲ್ಲ ಕಾರ್ಯ ಮಾಡುತ್ತಿದ್ದರೂ ಸಿಬ್ಬಂದಿಗೆ ಕೊರೋನಾ ಸೋಂಕು ಪರೀಕ್ಷೆಗೆ ಮಾಡಿಸುವ ಕಡೆ ಅಧಿಕಾರಿಗಳು ಗಮನ ನೀಡುತ್ತಿಲ್ಲ.

ಬೆಂಗಳೂರು: ಕೊರೋನಾ ಅಟ್ಟಹಾಸಕ್ಕೆ ಒಂದೇ ತಿಂಗಳಲ್ಲಿ 85 ಬಲಿ!

ಈಗಾಗಲೇ ವಿಶೇಷ ಆಯುಕ್ತ ರಂದೀಪ್‌ ಅವರ ಅಪ್ತ ಸಹಾಯಕ ಸಿಬ್ಬಂದಿ, ಪಾಲಿಕೆ ಮುಖ್ಯ ಆರೋಗ್ಯ ವಿಭಾಗದ ವಾಹನ ಚಾಲಕ, ವಸಂತನಗರ ವಾರ್ಡ್‌ ಎಂಜಿನಿಯರ್‌, ಬೊಮ್ಮನಹಳ್ಳಿ ಮುಖ್ಯ ಆರೋಗ್ಯಾಧಿಕಾರಿ ಹಾಗೂ ಅವರ ಕುಟುಂಬ ಸದಸ್ಯರು 15ಕ್ಕೂ ಹೆಚ್ಚು ಬಿಬಿಎಂಪಿ ಸಿಬ್ಬಂದಿ, 15 ಪೌರಕಾರ್ಮಿಕರಿಗೆ ಸೋಂಕು ದೃಢಪಟ್ಟಿದೆ. ಜೊತೆಗೆ ದಿನನಿತ್ಯ ನೂರಾರು ಮಂದಿ ಬಿಬಿಎಂಪಿ ಕಚೇರಿಗೆ ಬಂದು ಹೋಗುತ್ತಾರೆ. ಹೀಗಾಗಿ, ಪಾಲಿಕೆ ಇತರೆ ಅಧಿಕಾರಿ ಸಿಬ್ಬಂದಿ ಆತಂಕಗೊಂಡಿದ್ದಾರೆ. ಆದರೂ ಸಿಬ್ಬಂದಿಗೆ ಸಾಮೂಹಿಕವಾಗಿ ಕೊರೋನಾ ಸೋಂಕು ಪರೀಕ್ಷೆಗೆ ವ್ಯವಸ್ಥೆ ಇಲ್ಲ ಎಂದು ಹೆಸರು ಹೇಳದ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಬಿಬಿಎಂಪಿ ರೆಫರಲ್‌ ಆಸ್ಪತ್ರೆಗಳಲ್ಲಿ ಪಾಲಿಕೆ ಸಿಬ್ಬಂದಿಗೆ ಸೋಂಕು ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಸೋಂಕು ತೀವ್ರತೆ ಈ ಪ್ರಮಾಣದಲ್ಲಿ ಇಲ್ಲದ ಹಿನ್ನೆಲೆಯಲ್ಲಿ ಹೆಚ್ಚು ಸಿಬ್ಬಂದಿ ಸೋಂಕು ಪರೀಕ್ಷೆಗೆ ಒಳಗಾಗಿರಲಿಲ್ಲ.

ಕಚೇರಿಗೆ ಮರಳಿದ ವಿಶೇಷ ಆಯುಕ್ತರು

ಪಾಲಿಕೆಯ ಆರೋಗ್ಯ ಮತ್ತು ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್‌ ಅವರ ಅಪ್ತ ಸಹಾಯಕನಿಗೆ ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ ವಿಶೇಷ ಆಯುಕ್ತ ಡಿ. ರಂದೀಪ್‌ ಅವರು ಸೇರಿದಂತೆ ಅವರ ಕಚೇರಿಯ ಸಿಬ್ಬಂದಿ ಎಲ್ಲರೂ ಜೂ.29ರಿಂದ ಹೋಂ ಕ್ವಾರಂಟೈನ್‌ ಆಗಿದ್ದರು. ಸೋಂಕಿನ ಲಕ್ಷಣ ಇಲ್ಲದ ಹಿನ್ನೆಲೆಯಲ್ಲಿ ವಿಶೇಷ ಆಯುಕ್ತ ಡಿ. ರಂದೀಪ್‌ ಅವರು ಗುರುವಾರ ತಮ್ಮ ಕಚೇರಿಗೆ ವಾಪಾಸ್‌ ಆಗಿದ್ದಾರೆ.

ಸೋಂಕಿನ ಆತಂಕ ಇರುವ ಬಿಬಿಎಂಪಿ ಅಧಿಕಾರಿ ಸಿಬ್ಬಂದಿ ಬಿಬಿಎಂಪಿ ಅಥವಾ ನಗರದಲ್ಲಿ ಇರುವ ಫೀವರ್‌ ಕ್ಲಿನಿಕ್‌ ಕೇಂದ್ರಗಳಲ್ಲಿ ತಮ್ಮ ಗುರುತಿನ ಚೀಟಿ ತೋರಿಸಿ ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದು ಬಿಬಿಎಂಪಿ ವಿಶೇಷ ಆಯುಕ್ತರು (ಆಡಳಿತ) ಅನ್ಬುಕುಮಾರ್‌ ತಿಳಿಸಿದ್ದಾರೆ. 

ಬಿಬಿಎಂಪಿಯ ಸುಮಾರು 15 ರಿಂದ 18 ಮಂದಿ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಅವರಿಗೆ ಸೂಕ್ತ ಚಿಕಿತ್ಸೆ ದೊರೆಯಬೇಕು ಹಾಗೂ ಚಿಕಿತ್ಸಾ ವೆಚ್ಚವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಸಿಬ್ಬಂದಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್‌ ರಾಜ್‌ ಹೇಳಿದ್ದಾರೆ.