ಬೆಂಗಳೂರು, (ಜೂನ್.20):  ಪಿಯುಸಿ ಇಂಗ್ಲೀಷ್ ಪರೀಕ್ಷೆ ಬರೆದ ಬೆಂಗಳೂರಿನ ವಿದ್ಯಾರ್ಥಿನಿಗೆ ಕೊರೋನಾ ದೃಢಪಟ್ಟಿದೆ ಎನ್ನುವುದು ಸತ್ಯಕ್ಕೆ ದೂರವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಸುರೇಶ್‍ಕುಮಾರ್ ಸ್ಪಷ್ಟಪಡಿಸಿದ್ದಾರೆ.

ವಿದ್ಯಾರ್ಥಿನಿಯೊಬ್ಬಳು ಕ್ವಾರಂಟೈನ್ ಮೊಹರು ಅಳಿಸಿ ಪರೀಕ್ಷೆಗೆ ಹಾಜರಾಗಿದ್ದಾಳೆಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಇಂದು (ಶನಿವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುವಾರ ನಡೆದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ಬೆಂಗಳೂರಿನ ಜಯನಗರದ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿ ಕ್ವಾರಂಟೈನ್ ಮೊಹರನ್ನು ಅಳಿಸಿಕೊಂಡು ಹಾಜರಾಗಿದ್ದಾಳೆಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ. ಈ ವಿದ್ಯಾರ್ಥಿನಿಯ ಕೊರೋನಾ ಟೆಸ್ಟ್ ಮಾಡಿಸಲಾಗಿದ್ದು, ‘ಕೊರೋನಾ ನೆಗೆಟಿವ್’ ಎಂಬುದು ಸ್ಪಷ್ಟವಾಗಿ ದೃಢಪಟ್ಟಿದೆ ಎಂದರು.

ಜೂನ್. 18ರಂದು ಪರೀಕ್ಷೆ ಬರೆದ PUC ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್

ಈ ವಿದ್ಯಾರ್ಥಿನಿಯ ಕೊರೋನಾ ಟೆಸ್ಟ್ ಮಾಡಿಸಲಾಗಿದ್ದು, ಶನಿವಾರ ಮಧ್ಯಾಹ್ನ 2.54ಕ್ಕೆ ವರದಿಯನ್ನೂ ಸಹ ಪಡೆಯಲಾಗಿದೆ. ಈ ವರದಿಯಲ್ಲಿ ‘ಕೊರೋನಾ ನೆಗೆಟಿವ್’ ಎಂಬುದು ಸ್ಪಷ್ಟವಾಗಿ ದೃಢಪಟ್ಟಿದೆ. ಹಾಗಾಗಿ ಆಕೆ ಪರೀಕ್ಷೆ ಬರೆದ ಕೊಠಡಿಯಲ್ಲಿ ಹಾಜರಿದ್ದ ಯಾವುದೇ ಪರೀಕ್ಷಾರ್ಥಿಗಳು ಭಯಪಡಬೇಕಾದ ಅಗತ್ಯವಿಲ್ಲ, ಯಾವುದೇ ವಿದ್ಯಾರ್ಥಿ ಕ್ವಾರಂಟೈನ್‍ಗೆ ಒಳಗಾಗಬೇಕಾದ ಅಗತ್ಯವೂ ಇಲ್ಲ ಎಂದು ತಿಳಿಸಿದರು.

ಆ ವಿದ್ಯಾರ್ಥಿನಿಯೂ ಸಹ ಆರೋಗ್ಯದ ದೃಷ್ಟಿಯಿಂದ ಸುರಕ್ಷಿತವಾಗಿದ್ದಾಳೆ. ಆಕೆಯ ತಂದೆ ಈಗಾಗಲೇ ಕ್ವಾರಂಟೈನ್‍ನಲ್ಲಿದ್ದು, ಆರೋಗ್ಯ ಇಲಾಖೆಯ ನಿಗಾದಲ್ಲಿ ಸೂಕ್ತ ಚಿಕಿತ್ಸೆಗೊಳಗಾಗಿದ್ದಾರೆ. ಅವರೂ ಸಹ ಯಾವುದೇ ವಿಶೇಷ ಆರೋಗ್ಯದ ತೊಂದರೆಗೆ ಒಳಗಾಗಿಲ್ಲ ಎಂದು ಸುರೇಶ್ ಕುಮಾರ್ ಹೇಳಿದರು.