Asianet Suvarna News Asianet Suvarna News

ಏರಿಕೆಯಾಗಲಿದೆಯಾ ಬಸ್ ಪ್ರಯಾಣ ದರ..?

 ಉಪಚುನಾವಣೆ ಘೋಷಣೆಯಾಗಿರುವುದ ರಿಂದ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾಪ ಮುಂದೂಡುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಗಳವಾರ ಸಾರಿಗೆ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದು, ಸರ್ಕಾರಿ ಬಸ್ ದರ ಏರಿಕೆ ವಿಚಾರ ಪ್ರಸ್ತಾಪವಾಗುವ ನಿರೀಕ್ಷೆಯಿದೆ

No Bus Fare Hike
Author
Bengaluru, First Published Oct 8, 2018, 7:49 AM IST

ಬೆಂಗಳೂರು :  ಮೂರು ಲೋಕಸಭಾ ಕ್ಷೇತ್ರ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿರುವುದ ರಿಂದ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾಪ ಮುಂದೂಡುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಂಗಳವಾರ ಸಾರಿಗೆ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದು, ಸರ್ಕಾರಿ ಬಸ್ ದರ ಏರಿಕೆ ವಿಚಾರ ಪ್ರಸ್ತಾಪವಾಗುವ ನಿರೀಕ್ಷೆಯಿದೆ. ಆದರೂ ಉಪ ಚುನಾವಣೆ ಘೋಷಣೆಯಾಗಿರುವುದರಿಂದ ಸದ್ಯಕ್ಕೆ ಪ್ರಯಾಣ ದರ ಏರಿಕೆ ನಿರ್ಧಾರ ಪ್ರಕಟಿಸುವ ಸಾಧ್ಯತೆ ಕಡಿಮೆ ಎಂದು ಉನ್ನತ ಮೂಲಗಳು ತಿಳಿಸಿವೆ.

ತೈಲ ದರ ಏರಿಕೆಯಿಂದ ಸಾರಿಗೆ ನಿಗಮಗಳಿಗೆ ಮಾಸಿಕ ಕೋಟ್ಯಂತರ ರು. ಹೆಚ್ಚುವರಿ ಹೊರೆಯಾಗುತ್ತಿದೆ ಎಂಬ ಕಾರಣ ನೀಡಿ ನಾಲ್ಕು ಸಾರಿಗೆ ನಿಗಮಗಳು ಟಿಕೆಟ್ ದರ ಏರಿಕೆ ಸಂಬಂಧ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ನಾಲ್ಕು ನಿಗಮಗಳು ಆರ್ಥಿಕ ಸಂಕಷ್ಟದಲ್ಲಿರುವುದರಿಂದ ತೈಲ ದರ ಏರಿಕೆಯಿಂದ ನಿಗಮಗಳ ಆರ್ಥಿಕ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಹಾಗಾಗಿ ದರ ಏರಿಕೆ ಅನಿವಾರ್ಯವಾಗಿರುವುದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಾರಿಗೆ ಸಚಿವ ಡಿ.ಸಿ.ತಮಣ್ಣ ಹೇಳಿದ್ದರು.  ಹಾಗಾಗಿ ಸಾರಿಗೆ ಇಲಾಖೆ ಪ್ರಗತಿ ಪರಿಶೀಲನಾ ಸಭೆ ವೇಳೆ ಟಿಕೆಟ್ ದರ ಏರಿಕೆ ವಿಚಾರ ಚರ್ಚೆಯಾಗುವ ಸಂಭವವಿದೆ. 

ಉಪ ಚುನಾವಣೆ ಬಳಿಕ ಏರಿಕೆ?: ಈಗಾಗಲೇ ವಿಧಾನಸಭಾ ಹಾಗೂ ಲೋಕಸಭಾ ಉಪಚುನಾವಣೆ ದಿನಾಂಕ ಘೋಷಣೆಯಾಗಿರುವುದರಿಂದ ಮುಖ್ಯಮಂತ್ರಿಗಳು ಟಿಕೆಟ್ ದರ ಏರಿಕೆ ಸಂಬಂಧ  ಮಂಗಳವಾರ ಅಂತಿಮ ತೀರ್ಮಾನ ಪ್ರಕಟಿಸುವ ಸಾಧ್ಯತೆ ಕಡಿಮೆಯಿದೆ. ಚುನಾವಣೆ ಸಂದರ್ಭದಲ್ಲಿ ಟಿಕೆಟ್ ದರ ಏರಿಕೆ ಮಾಡುವುದು ಪಕ್ಷದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ಉಪಚುನಾವಣೆ ಬಳಿಕವೇ ದರ ಏರಿಕೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. 

ರಾಜ್ಯ ಸರ್ಕಾರ ಸೆ. 17 ರಂದು ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು 2 ರು. ಇಳಿಕೆ ಮಾಡಿತ್ತು. ಅದರ ಬೆನ್ನಲ್ಲೇ ನಾಲ್ಕು ನಿಗಮಗಳಿಗೆ ಅನ್ವಯವಾಗುವಂತೆ ಟಿಕೆಟ್ ದರವನ್ನು ಶೇ. 18 ರಷ್ಟು ಹೆಚ್ಚಳ ಮಾಡಿತ್ತು. ಇದಾದ  ಕೆಲವೇ ಗಂಟೆಗಳಲ್ಲಿ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಟಿಕೆಟ್ ದರ ಏರಿಕೆ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು. 

ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು 2.50 ರು. ಇಳಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಬಸ್ ಟಿಕೆಟ್ ದರ ಏರಿಕೆ ವಿಚಾರ ಭಾರಿ ಕುತೂಹಲ ಕೆರಳಿಸಿದೆ. ರಾಜ್ಯ ಸರ್ಕಾರ ತೈಲ ದರ ಕೊಂಚ ಇಳಿಸಿದ ಬಳಿಕ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಸಾರಿಗೆ ನಿಗಮಗಳು ಟಿಕೆಟ್ ದರ ಏರಿಕೆ ಸಂಬಂಧ ಮರು ಪ್ರಸ್ತಾವನೆ ಸಲ್ಲಿಸಿವೆ. ಹಾಗಾಗಿ ದರ ಏರಿಕೆ ಶೇ.೧೮ಕ್ಕಿಂತ ಕಡಿಮೆಯಾಗುವ ಸಾಧ್ಯತೆಯಿದೆ.

Follow Us:
Download App:
  • android
  • ios