ಪ್ರಕರಣದ ಸ್ವರೂಪ ಮತ್ತು ಗಂಭೀರತೆ ಪರಿಗಣಿಸಿದರೆ ಜಾಮೀನಿನ ಮೇಲೆ ಆರೋಪಿಯನ್ನು ಬಿಡುಗಡೆಗೊಳಿಸಲು ಇದು ಅರ್ಹ ಪ್ರಕರಣವಲ್ಲ ಎಂದು ತೀರ್ಮಾನಿಸಿದ ನ್ಯಾಯಪೀಠ ಅರ್ಜಿ ವಜಾಗೊಳಿಸಿದೆ.

ಬೆಂಗಳೂರು(ಜು.01):  ಮದ್ಯ ಸೇವಿಸಿ ಕಿರುಚಾಡುತ್ತಾ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಕಾರಣಕ್ಕೆ ತನಗೆ ಕಪಾಳ ಮೋಕ್ಷ ಮಾಡಿದ್ದ ಯುವಕನೋರ್ವನ್ನು ಡ್ಯಾಗರ್‌ನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿದನಿಗೆ ಹೈಕೋರ್ಟ್‌ ಜಾಮೀನು ನಿರಾಕರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಕರಣದ ಸಂಬಂಧ ಕಳೆದ ಎಂಟು ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿರುವ ಬೆಂಗಳೂರಿನ ಕನವನಹಳ್ಳಿ ಮುಖ್ಯರಸ್ತೆಯ ಕೂಡ್ಲು ಸ್ಲಂ ಕ್ವಾಟ​ರ್‍ಸ್ರ್‍ ನಿವಾಸಿ ಕೆ.ನವೀನ್‌ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರ ಪೀಠ ಆದೇಶಿಸಿದೆ.

ಹುದ್ದೆಯೇ ಇಲ್ಲದೆಡೆ 5 ಸಬ್‌ ರಿಜಿಸ್ಟ್ರಾರ್‌ಗಳ ಕೆಲಸ: ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

ದಿಢೀರ್‌ ಆಗಿ ಏರ್ಪಟ್ಟ ಜಗಳದಿಂದ ಕೊಲೆ ಘಟನೆ ನಡೆದಿದೆ. ಮೃತನನ್ನು ಕೊಲೆ ಮಾಡುವ ಉದ್ದೇಶ ಆರೋಪಿಗೆ ಇರಲಿಲ್ಲ ಎಂಬ ಅರ್ಜಿದಾರ ಪರ ವಕೀಲರ ವಾದವನ್ನು ತಿರಸ್ಕರಿಸಿದ ಹೈಕೋರ್ಟ್‌, ಆರೋಪಿಯು ಕೊಲೆ ಮಾಡಿ ಫೇಮಸ್‌ ಆಗಬೇಕೆಂದು ಪದೇ ಪದೇ ಹೇಳುತ್ತಿದ್ದ. ಮೃತನ ತಾಯಿ ಹಾಗೂ ಇತರೆ ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ ಆರೋಪಿ ಮೃತನ ಕುತ್ತಿಗೆಗೆ ಡ್ಯಾಗರ್‌ನಿಂದ ಚುಚ್ಚಿದ್ದಾನೆ. ನಂತರ ಓಡಿಹೋಗುತ್ತಿದ್ದ ಮೃತನನ್ನು ಬೆನ್ನಟ್ಟಿಮತ್ತೆ ಕುತ್ತಿಗೆ ಮತ್ತು ಹೊಟ್ಟೆಗೆ ಡ್ಯಾಗರ್‌ನಿಂದ ಚುಚ್ಚಿದ್ದಾನೆ. ಶವಪರೀಕ್ಷೆಯ ವರದಿ ಪ್ರಕಾರ ಮೃತನ ದೇಹದ ಮೇಲೆ ಏಳು ಗಂಭೀರ ಗಾಯಗಳಿವೆ. ಆಘಾತ ಮತ್ತು ತೀವ್ರ ರಕ್ತಸ್ರಾವದಿಂದ ಮೃತನ ಸಾವನ್ನಪ್ಪಿದ್ದಾರೆ. ಈ ಹಂತದಲ್ಲಿ ಉಂಟಾದ ಹಠಾತ್‌ ಜಗಳದಿಂದ ಘಟನೆ ನಡೆದಿದೆ. ಕೊಲೆ ಮಾಡುವ ಉದ್ದೇಶವು ಆರೋಪಿಗೆ ಇರಲಿಲ್ಲ ಎಬುದಾಗಿ ಹೇಳಲಾಗದು ಎಂದು ಅಭಿಪ್ರಾಯಪಟ್ಟಿತು. ಅಲ್ಲದೆ, ಪ್ರಕರಣದ ಸ್ವರೂಪ ಮತ್ತು ಗಂಭೀರತೆ ಪರಿಗಣಿಸಿದರೆ ಜಾಮೀನಿನ ಮೇಲೆ ಆರೋಪಿಯನ್ನು ಬಿಡುಗಡೆಗೊಳಿಸಲು ಇದು ಅರ್ಹ ಪ್ರಕರಣವಲ್ಲ ಎಂದು ತೀರ್ಮಾನಿಸಿದ ನ್ಯಾಯಪೀಠ ಅರ್ಜಿ ವಜಾಗೊಳಿಸಿದೆ.

ಪ್ರಕರಣವೇನು?

ಅರ್ಜಿದಾರ ಆರೋಪಿ ನವೀನ್‌ ಮದ್ಯಕ್ಕೆ ದಾಸನಾಗಿದ್ದ. ಫೇಮಸ್‌ ಆಗಲು ಒಂದು ಕೊಲೆ ಮಾಡುವುದಾಗಿ ಪದೇ ಪದೇ ಹೇಳುತ್ತಿದ್ದ. 2022ರ ಅ.3ರಂದು ರಾತ್ರಿ 10ಕ್ಕೆ ಕಿರುಚಾಡುತ್ತಿದ್ದ ಸಾರ್ವಜನಿಕರಿಗೆ ಉಪದ್ರವ ನೀಡುತ್ತಿದ್ದಾಗ ಅನಿಲ್‌ ಕುಮಾರ್‌ (24) ಎಂಬಾತ ಬುದ್ಧಿ ಹೇಳಿದ್ದ. ಆಗ ಜಗಳ ನಡೆದಿದ್ದು, ನವೀನ್‌ಗೆ ಅನಿಲ್‌ ಕಪಾಳ ಮೋಕ್ಷ ಮಾಡಿದ್ದ. ಈ ಹಿನ್ನೆಲೆಯಲ್ಲಿ ಅ.9ರಂದು ಸಂಜೆ 6.10ರ ಸಮಯದಲ್ಲಿ ಮನೆಯಿಂದ ಹೊರ ಬಂದಿದ್ದ ಅನಿಲ್‌ ಮೇಲೆ ಎರಗಿದ ನವೀನ್‌, ಕುತ್ತಿಗೆಗೆ ಡ್ಯಾಗರ್‌ನಿಂದ ಚುಚ್ಚಿದ್ದ. ಅನಿಲ್‌ ರಕ್ಷಣೆಗೆ ಮುಂದಾದ ಮೂವರಿಗೆ ಜೀವ ಬೆದರಿಕೆ ಹಾಕಿದ್ದ. ಈ ವೇಳೆ ತಪ್ಪಿಸಿಕೊಂಡು ಓಡುತ್ತಿದ್ದ ಅನಿಲ್‌ ಬೆನ್ನಟ್ಟಿಹಿಡಿದು ಮತ್ತೆ ಕುತ್ತಿಗೆ, ಹೊಟ್ಟೆ ಮತ್ತು ದೇಹದ ಇತರೆ ಭಾಗಗಳಿಗೆ ಡ್ಯಾಗರ್‌ನಿಂದ ಚುಚ್ಚಿ ಪರಾರಿಯಾಗಿದ್ದ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅನಿಲ್‌ ಮೃತಪಟ್ಟಿದ್ದ.

ಮೃತನ ತಾಯಿಯ ದೂರು ಆಧರಿಸಿ ತನಿಖೆ ನಡೆಸಿದ್ದ ಬೆಳ್ಳಂದೂರು ಠಾಣಾ ಪೊಲೀಸರು ನವೀನನ್ನು ಬಂಧಿಸಿದ್ದರು. ಜಾಮೀನು ಕೋರಿ ಬಂಧಿತ ಹೈಕೋರ್ಟ್‌ ಮೊರೆ ಹೋಗಿದ್ದ. ನವೀನ್‌ ಪರ ವಕೀಲರು, ಹಿಂದೆ ನಡೆದಿದ್ದ ಜಗಳದ ವೇಳೆ ಮೃತನು ಕಪಾಳಕ್ಕೆ ಹೊಡೆದಿದ್ದ. ದಿಢೀರ್‌ ಆಗಿ ನಡೆದ ಘಟನೆಯಿಂದ ಅರ್ಜಿದಾರ ಕೊಲೆಗೈದಿದ್ದಾನೆ. ಕೊಲೆ ಮಾಡುವ ಉದ್ದೇಶ ಆರೋಪಿಗೆ ಇರಲಿಲ್ಲ. ಆರೋಪಿಗೆ 22 ವರ್ಷವಾಗಿದ್ದು, 2022ರ ಅ.10ರಿಂದ ನ್ಯಾಯಾಂಗ ಬಂಧನದಲ್ಲಿದ್ದು, ಅಗತ್ಯ ಷರತ್ತುಗಳನ್ನು ವಿಧಿಸಿ ಜಾಮೀನು ನೀಡುವಂತೆ ಕೋರಿದ್ದರು.