ಬೆಂಗಳೂರು, (ಮೇ.18): ಲಾಕ್‍ಡೌನ್ 4.0 ಕರ್ನಾಟಕದಲ್ಲಿ ಬಹುತೇಕ ಎಲ್ಲವುದಕ್ಕೂ ಸಡಿಲಿಕೆ ನೀಡಲಾಗಿದೆ.

ಬಸ್, ಟ್ಯಾಕ್ಸಿ, ಕ್ಯಾಬ್, ಆಟೋ ಸಂಚಾರಕ್ಕೆ ಅನುಮತಿ ನೀಡಿದೆ. ಆದರೆ ಭಾನುವಾರ ವಾಹನ ಸಂಚಾರ, ಅಂಗಡಿ ಮುಚ್ಚಲು ಆದೇಶ ಹೊರಡಿಸಿದೆ. ಇನ್ನು ರಾಜ್ಯದಲ್ಲಿ ಭಾನುವಾರ ಮದ್ಯ ಸಿಗಲ್ಲ.

ಹೌದು... ಮೇ 31ರವರೆಗೆ ಪ್ರತಿ ಭಾನುವಾರ ರಾಜ್ಯದಲ್ಲಿ ಸಂಪೂರ್ಣ ಲಾಕ್‍ಡೌನ್ ಇರಲಿದೆ. ಹಾಗಾಗಿ ಎಲ್ಲ ವ್ಯಾಪಾರ ಸೇರಿದಂತೆ ಮದ್ಯದಂಗಡಿಗಳು ಬಂದ್ ಆಗಲಿವೆ. ಈ ಮೂಲಕ ಸಂಡೇ ಪಾರ್ಟಿ ಮಾಡುವವರಿಗೆ ದೊಡ್ಡ ನಿರಾಸೆ ಉಂಟು ಮಾಡಿದೆ.

ನಾಳೆಯಿಂದ ನಯಾ ದುನಿಯಾ; ಇದಕ್ಕೆಲ್ಲಾ ಸಿಕ್ಕಿದೆ ರಿಲೀಫ್..! 

ಮೇ.31ರ ವರೆಗೆ ಕೇಂದ್ರ ಸರ್ಕಾರ ಪ್ರಕಟಿಸಿದ ಲಾಕ್‌ಡೌನ್‌ ಗೈಡ್‌ಲೈನ್ಸ್ ಬಗ್ಗೆ ಚರ್ಚಿಸಲು ಸಿಎಂ ಬಿಎಸ್ ಯಡಿಯೂರಪ್ಪ ಅವರು ಮಹತ್ವ ಸಭೆ ನಡೆಸಿದ್ದು, ಕೇವಲ ಪ್ರತಿ ಭಾನುವಾರ ಮಾತ್ರ ಸಂಪೂರ್ಣ ಲಾಕ್ ಡೌನ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. 

ವಾರದಲ್ಲಿ ಆರು ದಿನ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಅದು ಪಾರ್ಸಲ್ ಮಾತ್ರ. ಫಸ್ಟ್ ಮತ್ತು ಎರಡನೇ ಹಂತದ ಲಾಕ್‌ಡೌನ್‌ನಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಕೊಟ್ಟಿರಲಿಲ್ಲ. ಇದರಿಂದ ಮದ್ಯವ್ಯಸನಿಗಳು ದೊಡ್ಡ ಅವಾಂತರಗಳನ್ನೇ ಮಾಡಿದ್ದರು.

ಬಳಿಕ ರಾಜ್ಯದ ಬೊಕ್ಕಸ ತುಂಬಲು  ಎಂಎಸ್‌ಐಎಲ್‌ ಹಾಗೂ ಬಾರ್‌ಗಳಲ್ಲಿ ಷರತ್ತು ಬದ್ದ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿತ್ತು. ಇದರಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ಆದಾಯ ಹರಿದಬಂದಿದ್ದನ್ನು ಇಲ್ಲಿ ಸ್ಮರಿಸಬಹದು. ಆದ್ರೆ, ಇದೀಗ ಮದ್ಯ ವಹಿವಾಟು ಸಹ ಕೊಂಚ ಇಳಿಕೆಯಾಗಿದೆ. ಮೊದಲಿನಂತೆ ಈಗ ಮದ್ಯ ಸೇಲ್ ಆಗುತ್ತಿಲ್ಲ. 

ಯಾಕಂದ್ರೆ ಜನರು ಮದ್ಯ ಆರಂಭವಾಗುತ್ತಿದ್ದಂತೆಯೇ ಮುಂದೆ ಸಿಗುತ್ತೋ ಇಲ್ಲೋ ಎನ್ನುವ ರೀತಿಯಲ್ಲಿ ಮನೆಯಲ್ಲಿ ಸ್ಟಾಕ್ ಮಾಡಿಕೊಂಡಿದ್ದಾರೆ. ಇದರಿಂದ ಮದ್ಯ ಮಾರಾಟದ ವ್ಯಾಪಾಟ ಕೊಂಚ ಕಡಿಮೆಯಾಗಿದೆ ಎನ್ನಲಾಗುತ್ತಿದೆ.