ಜು.7ರಿಂದಲೇ ‘ನಿರ್ಮಾಣ-2’ ತಂತ್ರಾಂಶ ಸ್ಥಗಿತಗೊಂಡಿದ್ದು, ಕಟ್ಟಡ ನಿರ್ಮಾಣ ಲೈಸೆನ್ಸ್‌ ಸಿಗದೆ ಅರ್ಜಿ ಸಲ್ಲಿಸಿರುವವರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಾಫ್ಟ್ ವೇರ್‌ ಬಿಟ್ಟು ಈಗ ಕಚೇರಿಯಲ್ಲೇ ಅರ್ಜಿ ಸ್ವೀಕಾರ ಆರಂಭವಾಗಿದೆ.

ಮಂಡ್ಯ ಮಂಜುನಾಥ

 ಮಂಡ್ಯ (ಜು.16): ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಟ್ಟಡ ಪರವಾನಗಿ ಅರ್ಜಿಗಳನ್ನು ನಿರ್ವಹಿಸಲು ಅನುಷ್ಠಾನಗೊಳಿಸಿದ್ದ ‘ನಿರ್ಮಾಣ-2’ ತಂತ್ರಾಂಶ ಜುಲೈ 7ರಿಂದಲೇ ಸ್ಥಗಿತಗೊಂಡಿರುವುದರಿಂದ ಕಟ್ಟಡ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿರುವವರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ತಾಂತ್ರಿಕ ಸಮಸ್ಯೆಗಳಿಂದ ‘ನಿರ್ಮಾಣ-2’ ತಂತ್ರಾಂಶ ಸ್ಥಗಿತಗೊಂಡಿದ್ದು, ಈಗಾಗಲೇ ತಂತ್ರಾಂಶದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಕಡತಗಳಲ್ಲಿ ನಿರ್ವಹಿಸಿ ಕಟ್ಟಡ ಪರವಾನಗಿ ನೀಡಲು ಕ್ರಮ ವಹಿಸುವಂತೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ರಾಜ್ಯದ ಎಲ್ಲಾ ಆಯುಕ್ತರು, ಪೌರಾಯುಕ್ತರು, ಮುಖ್ಯಾಧಿಕಾರಿಗಳಿಗೆ ಪತ್ರ ಮುಖೇನ ಸೂಚಿಸಿದ್ದಾರೆ. ಹೊಸದಾಗಿ ಕಟ್ಟಡ ಪರವಾನಗಿ ಕೋರಿ ಬರುವ ಅರ್ಜಿಗಳನ್ನೂ ಕಚೇರಿಗಳಲ್ಲೇ ಸ್ವೀಕರಿಸಿ ನಿರ್ವಹಿಸುವಂತೆ ಸೂಚಿಸಲಾಗಿದೆ.

ಪರವಾನಗಿಗೆ ಕಾಯುತ್ತಿದ್ದವರಿಗೆ ನಿರಾಸೆ: ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ತಿಂಗಳುಗಳ ಹಿಂದೆಯೇ ಅರ್ಜಿ ಸಲ್ಲಿಸಿ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಪರವಾನಗಿ ಕೈ ಸೇರುವ ದಿನಗಳಿಗೆ ಎದುರು ನೋಡುತ್ತಿದ್ದವರಿಗೆ ನಿರ್ಮಾಣ-2 ತಂತ್ರಾಂಶ ಸ್ಥಗಿತಗೊಂಡಿರುವುದು ತೀವ್ರ ನಿರಾಸೆ ಮೂಡಿಸಿದೆ. ಅವರು ಮತ್ತೆ ಮೊದಲಿನಿಂದ ಕಟ್ಟಡ ನಿರ್ಮಾಣದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸಬೇಕಿದೆ. ಮತ್ತೆ ದಾಖಲೆಗಳನ್ನೆಲ್ಲಾ ಸಂಗ್ರಹಿಸಿ ಕಚೇರಿಗೆ ಅಲೆದಾಡುವುದಕ್ಕೆ ತಯಾರಾಗಬೇಕಿದೆ.

ಆರಂಭದಿಂದಲೂ ತೊಂದರೆ: ನಿರ್ಮಾಣ-2 ಎಂಬ ಹೊಸ ತಂತ್ರಾಂಶದಿಂದ ಆರಂಭದಿಂದಲೂ ಸಮಸ್ಯೆಯಾಗುತ್ತಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ದಾಖಲೆಗಳನ್ನು ಅಪ್‌ಲೋಡ್‌ ಮಾಡಲು ಸರ್ವರ್‌ ಸಮಸ್ಯೆ ಎದುರಾಗುತ್ತಿತ್ತು. ಇನ್ನೊಂದೆಡೆ ಮನೆ ಕಟ್ಟುವವರು ಬಹುತೇಕ ಬ್ಯಾಂಕ್‌ ಸಾಲ ಮಾಡುವುದು ಸಾಮಾನ್ಯ. ಆದರೆ, ಕಟ್ಟಡ ನಿರ್ಮಾಣ ಪರವಾನಗಿ ಪತ್ರ ಹಾಜರುಪಡಿಸದೆ ಬ್ಯಾಂಕ್‌ ಅಧಿಕಾರಿಗಳು ಸಾಲ ನೀಡುವುದಿಲ್ಲ. ಜೊತೆಗೆ ಕಟ್ಟಡಕ್ಕೆ ಬೇಕಾದ ತಾತ್ಕಾಲಿಕ ವಿದ್ಯುತ್‌, ನೀರಿನ ಸಂಪರ್ಕಕ್ಕೆ ಕಟ್ಟಡ ನಿರ್ಮಾಣ ಪರವಾನಗಿ ಪತ್ರ ಅತ್ಯಗತ್ಯವಾಗಿತ್ತು. ತಂತ್ರಾಂಶದಲ್ಲಿ ಎದುರಾಗುತ್ತಿದ್ದ ತಾಂತ್ರಿಕ ಸಮಸ್ಯೆಗಳು ಮನೆ ನಿರ್ಮಾಣದ ಕನಸು ಹೊತ್ತವರನ್ನು ಹತಾಶರನ್ನಾಗಿ ಮಾಡಿವೆ.

ನಿರ್ವಹಣೆಯಲ್ಲಿ ವಿಫಲ: ನಿರ್ಮಾಣ-2 ತಂತ್ರಜ್ಞಾನವನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದ ಮೇಲೆ ಅನುಷ್ಠಾನಕ್ಕೆ ತಂದಿದ್ದೇಕೆ? ತಂತ್ರಜ್ಞಾನ ಬೆಳವಣಿಗೆ ಸಾಧಿಸುತ್ತಿರುವ ವೇಗದಲ್ಲಿ ಆಡಳಿತ ಯಂತ್ರವನ್ನು ಮುನ್ನಡೆಸಲಾಗುತ್ತಿಲ್ಲ. ಇದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.

- ಸೋಮಶೇಖರ್‌, ತಾವರೆಗೆರೆ, ಮಂಡ್ಯ

ಲೈಸೆನ್ಸ್‌ ಸರ್ವೆಯರ್‌ ಪರೀಕ್ಷೆ: ನಿಷೇಧಾಜ್ಞೆ ಜಾರಿ:  ಕೊಪ್ಪಳ ನಗರದಲ್ಲಿ ಜು. 17ರಂದು ನಡೆಯಲಿರುವ ಪರವಾನಗಿ ಭೂಮಾಪಕರು(ಲೈಸೆನ್ಸ್‌ ಸರ್ವೆಯರ್‌) ಪರೀಕ್ಷೆ ನಿಮಿತ್ತ ಪರೀಕ್ಷೆಯು ಸುಗಮ ಹಾಗೂ ಶಾಂತಿಯುತವಾಗಿ ನಡೆಯುವ ಉದ್ದೇಶದಿಂದ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್‌ ವ್ಯಾಪ್ತಿಯಲ್ಲಿ ಸಿಆರ್‌ಪಿಸಿ 1973ರ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ಆದೇಶ ಹೊರಡಿಸಿದ್ದಾರೆ.

ಪರೀಕ್ಷೆಯು ನಗರದ ಉಳ್ಳತ್ತಿ ಸ್ಕಿಲ್‌ ಅಸೋಸಿಯೇಷನ್‌ ಪರೀಕ್ಷಾ ಕೇಂದ್ರದಲ್ಲಿ ಜು. 17ರಂದು ಬೆಳಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 12.30ರ ವರೆಗೆ ಹಾಗೂ ಮಧ್ಯಾಹ್ನ 2.30ರಿಂದ ಸಂಜೆ 4.30 ಗಂಟೆಯವರೆಗೆ ಎರಡು ಅಧಿವೇಶನದಲ್ಲಿ ನಡೆಯಲಿದೆ.

ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್‌ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಎಸ್‌ಟಿಡಿ, ಮೊಬೈಲ್‌, ಪೇಜರ್‌, ಜೆರಾಕ್ಸ್‌, ಟೈಪಿಂಗ್‌ ಮುತಾದವುಗಳನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಲೂ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿಸಿದೆ.