ಕೇರಳ ರಾಜ್ಯದಲ್ಲಿ ‘ನಿಪಾ’ ವೈರಸ್‌ ಕಾಣಿಸಿಕೊಂಡಿರುವುದು ಹಾಗೂ ಕೇರಳದಿಂದ ಬರುವವರಲ್ಲಿ ಕೋವಿಡ್‌ ಸೋಂಕು ಪತ್ತೆ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಸರ್ಕಾರ ಸೂಚನೆ

 ಬೆಂಗಳೂರು (ಸೆ.08): ಕೇರಳ ರಾಜ್ಯದಲ್ಲಿ ‘ನಿಪಾ’ ವೈರಸ್‌ ಕಾಣಿಸಿಕೊಂಡಿರುವುದು ಹಾಗೂ ಕೇರಳದಿಂದ ಬರುವವರಲ್ಲಿ ಕೋವಿಡ್‌ ಸೋಂಕು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಇದೇ ವೇಳೆ ಕೊರೋನಾ ಸೋಂಕು ಹರಡುವಿಕೆ ತಡೆಯಲು ವಿದ್ಯಾರ್ಥಿಗಳು, ಉದ್ಯೋಗಿಗಳು ಅಕ್ಟೋಬರ್‌ ಅಂತ್ಯದವರೆಗೆ ಕೇರಳಕ್ಕೆ ಹೋಗದಂತೆ ಅಥವಾ ಅಲ್ಲಿಂದ ಬರದಂತೆ ಕ್ರಮ ಕೈಗೊಳ್ಳಬೇಕೆಂದು ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ, ಹೋಟೆಲ್‌ ಇತ್ಯಾದಿ ಉದ್ದಿಮೆಗಳ ಮಾಲಿಕರಿಗೆ ಸಲಹೆ ನೀಡಿದೆ.

ಕೇರಳದಿಂದ ನೆಗೆಟಿವ್‌ ಆರ್‌ಟಿ-ಪಿಸಿಆರ್‌ ವರದಿ ತೆಗೆದುಕೊಂಡು ಬಂದಿದ್ದರೂ ಮತ್ತೆ ಪರೀಕ್ಷೆ ಮಾಡಿದಾಗ ಪಾಸಿಟಿವ್‌ ಬರುತ್ತಿರುವ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಉದ್ಯೋಗಿಗಳು ಕರ್ನಾಟಕದಿಂದ ಕೇರಳಕ್ಕೆ ಹೋಗುವುದು ಅಥವಾ ಕೇರಳದಿಂದ ಕರ್ನಾಟಕಕ್ಕೆ ಬರುವುದನ್ನು ಆಕ್ಟೋಬರ್‌ ಕೊನೆಯವರೆಗೆ ಮುಂದೂಡಬೇಕು ಎಂದು ರಾಜ್ಯ ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಕೇರಳದಿಂದ ಇನ್ನೂ ರಾಜ್ಯಕ್ಕೆ ಆಗಮಿಸದ ಸಿಬ್ಬಂದಿ, ವಿದ್ಯಾರ್ಥಿಗಳು ತಮ್ಮ ಪ್ರಯಾಣವನ್ನು ಅಕ್ಟೋಬರ್‌ ಕೊನೆಯವರೆಗೆ ಮುಂದೂಡಬೇಕು. ಹಾಗೆಯೇ ರಾಜ್ಯದಿಂದ ಕೇರಳಕ್ಕೆ ಪ್ರಯಾಣಿಸುವವರು ಕೂಡ ತಮ್ಮ ಪಯಣವನ್ನು ಮುಂದೂಡಬೇಕು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ. ಈ ಬಗ್ಗೆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ನರ್ಸಿಂಗ್‌, ಪ್ಯಾರಾ ಮೆಡಿಕಲ್‌ ಸಂಸ್ಥೆಗಳು, ಆಸ್ಪತ್ರೆಗಳ ಮಾಲಿಕರು, ಹೋಟೆಲ್‌, ಕಾರ್ಖಾನೆ, ಉದ್ದಿಮೆಗಳ ಮಾಲಿಕರು ತಮ್ಮ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಸೂಚಿಸುವಂತೆ ಹೇಳಿದೆ.

ರಾಜ್ಯದಲ್ಲಿ ಮೂರನೇ ಅಲೆ ತಪ್ಪಿಸಲು ಆಕ್ಟೋಬರ್‌ ಕೊನೆಯ ತನಕ ಕೇರಳ ಪ್ರವಾಸದ ಯೋಜನೆಯನ್ನು ಮುಂದೂಡುವಂತೆ ಜನರಲ್ಲಿ ಆರೋಗ್ಯ ಇಲಾಖೆ ಮನವಿ ಮಾಡಿದೆ.

ಗಡಿಗಳಲ್ಲಿ ನಿಪಾ ಎಚ್ಚರಿಕೆ:

ಕೇರಳದಿಂದ ರಾಜ್ಯಕ್ಕೆ ಕೋವಿಡ್‌-19 ಕಂಟಕ ಕಾಡುತ್ತಿರುವಾಗಲೇ ನಿಪಾ ಮಹಾಮಾರಿ ಕೂಡ ರಾಜ್ಯ ಪ್ರವೇಶಿಸುವ ಆತಂಕ ಪ್ರಾರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಡಳಿತಗಳಿಗೆ ರಾಜ್ಯ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಗಡಿ ಜಿಲ್ಲೆಗಳಾದ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಕೇರಳದಿಂದ ಬರುವವರಲ್ಲಿ ನಿಪಾದ ರೋಗ ಲಕ್ಷಣಗಳಿವೆಯೇ ಎಂಬ ಬಗ್ಗೆ ತಪಾಸಣೆ ನಡೆಸಬೇಕು. ನಿಪಾ ಹರಡುವಿಕೆಯನ್ನು ತಡೆಯಲು ಆರಂಭದಲ್ಲೇ ಕ್ರಮ ಕೈಗೊಳ್ಳಬೇಕು. ಶಂಕಿತ, ಸೋಂಕು ಬಂದಿರುವ ಸಾಧ್ಯತೆ ಇರುವ ಅಥವಾ ಸಂಪರ್ಕಿತರ ಸ್ಯಾಂಪಲ್‌ಗಳನ್ನು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸಂಗ್ರಹಿಸಿ ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಪರೀಕ್ಷೆಗೆಂದು ಕಳುಹಿಸಬೇಕು. ಜನರಲ್ಲಿ ನಿಪಾದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

ಕೇರಳದಿಂದ ಬರುವವರಲ್ಲಿ ನಿಪಾದ ಲಕ್ಷಣಗಳಾದ ಜ್ವರ, ಕಫ, ತಲೆ ನೋವು, ನಿತ್ರಾಣ, ಭೇದಿ, ಮಾನಸಿಕ ಸ್ಥಿತಿಯಲ್ಲಿ ಏರಿಳಿತ, ವಾಂತಿ, ಮೈ-ಕೈ ನೋವು ಮುಂತಾದ ಲಕ್ಷಣಗಳಿವೆಯೇ ಎಂದು ತಪಾಸಣೆ ನಡೆಸಬೇಕು. ನಿಪಾ ಸಂಬಂಧಿತ ಪ್ರಕರಣ ಕಂಡುಬಂದಲ್ಲಿ ಅದರ ವರದಿಯನ್ನು ಪ್ರತಿದಿನ ಆರೋಗ್ಯ ಇಲಾಖೆಗೆ ಕಳುಹಿಸಿಕೊಡುವಂತೆ ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಲಾಗಿದೆ.

ನಿಪಾ ಸೋಂಕು ಸಾಂಕ್ರಾಮಿಕ ರೋಗದ ಲಕ್ಷಣ ಹೊಂದಿದೆ. ನಿಪಾ ಕೋವಿಡ್‌ಗಿಂತ ಹೆಚ್ಚು ಮಾರಣಾಂತಿಕವಾಗಿದೆ. ಕೋವಿಡ್‌ನಲ್ಲಿ ಮರಣ ದರ ಶೇ.1.5ಕ್ಕಿಂತ ಕಡಿಮೆ ಇದೆ. ಆದರೆ ನಿಪಾದ ಮರಣ ದರ ಶೇ.40ರಿಂದ ಶೇ.75 ಇದೆ. ಕೆಲವೊಂದು ಸಂದರ್ಭದಲ್ಲಿ ಸೋಂಕಿತರೆಲ್ಲರೂ ಸಾಯುವ ಸಾಧ್ಯತೆಯಿದೆ ಎಂದು ಸೂಚನೆಯಲ್ಲಿ ಎಚ್ಚರಿಕೆ ನೀಡಲಾಗಿದೆ.

ನಿಪಾ ವೈರಸ್‌ ಹಾವಳಿ ತಡೆಗೆ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ. ಕೇರಳ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಲಸಿಕಾ ಅಭಿಯಾನವನ್ನು ಹೆಚ್ಚು ಮಾಡಿದ್ದೇವೆ. ಇನ್ನಷ್ಟುಕಠಿಣ ಕ್ರಮ ಕೈಗೊಳ್ಳಲಿದ್ದೇವೆ. ತಜ್ಞರ ಸಮಿತಿಗೆ ನಿಪಾ ವೈರಸ್‌ ಬಗ್ಗೆ ತಿಳಿದುಕೊಳ್ಳಲು ತಿಳಿಸಿದ್ದೇನೆ. ಯಾವ ರೀತಿ ಹರಡುತ್ತದೆ, ಹೇಗೆ ನಿಯಂತ್ರಣ ಮಾಡಬೇಕು ಸೇರಿದಂತೆ ಇತರೆ ಮಾಹಿತಿ ಕೇಳಲಾಗಿದೆ.

- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಕೇರಳದಿಂದ ರಾಜ್ಯಕ್ಕೆ ನಿಪಾ ಕಾಲಿಡದಂತೆ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇನ್ನಷ್ಟುಗಂಭೀರ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನಿಪಾದ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುವುದು. ರಾಜ್ಯಕ್ಕೆ ಸೋಂಕು ಪ್ರವೇಶಿಸದಂತೆ ಕ್ರಮಗಳನ್ನು ಕೈಗೊಳ್ಳಲಾಗುವುದು.

- ಡಾ.ಕೆ.ಸುಧಾಕರ್‌, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ