ಬೆಂಗಳೂರು(ಸೆ.03): ದೇಶದಲ್ಲಿ ಸದ್ಯಕ್ಕೆ ಗಾಂಜಾ ಕಾನೂನು ಬದ್ಧ ಮಾಡಬೇಕು ಎಂಬ ವಾದ ತಪ್ಪು. ಗಾಂಜಾದಲ್ಲಿ ಔಷಧೀಯ ಗುಣಗಳಿರುವುದು ಇನ್ನೂ ಸಂಶೋಧನೆಯಲ್ಲಿ ಸಾಬೀತಾಗಿಲ್ಲ. ಜತೆಗೆ ಮನುಷ್ಯನ ಆರೋಗ್ಯ ಹಾಗೂ ಮಾನಸಿಕ ಸ್ಥಿತಿಯ ಮೇಲೆ ದುಷ್ಪರಿಣಾಮ ಉಂಟಾಗುವುದರಿಂದ ಕಾನೂನು ಬದ್ಧ ಮಾಡಬಾರದು ಎಂದು ನಿಮ್ಹಾನ್ಸ್‌ ಆಸ್ಪತ್ರೆ ನಿರ್ದೇಶಕ ಪ್ರೊ.ಬಿ.ಎನ್‌. ಗಂಗಾಧರ್‌ ಅಭಿಪ್ರಾಯಪಟ್ಟಿದ್ದಾರೆ.

ಗಾಂಜಾದಲ್ಲಿ ಔಷಧೀಯ ಗುಣಗಳಿವೆ ಎಂಬ ಕೂಗು ಮೊದಲಿನಿಂದಲೂ ಇದೆ. ಆದರೆ ಔಷಧೀಯ ಗುಣಗಳಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಇನ್ನೂ ಸಂಶೋಧನೆಗಳು ನಡೆಯುತ್ತಿವೆ. ಸಂಶೋಧನೆಗಳಿಂದ ಔಷಧೀಯ ಗುಣಗಳು ಸಾಬೀತಾಗಿಲ್ಲ. ಈವರೆಗೆ ಯಾವುದೇ ಔಷಧಿಯಲ್ಲೂ ಬಳಕೆ ಮಾಡುತ್ತಿಲ್ಲ. ಒಂದು ವೇಳೆ ಸಂಶೋಧನೆಗಳಲ್ಲಿ ಔಷಧ ಗುಣಗಳಿರುವುದು ಸಾಬೀತಾದರೂ ಸಹ ಔಷಧ ರೂಪದಲ್ಲಿ ಗಾಂಜಾ ಬಳಕೆ ಕಾನೂನು ಬದ್ಧ ಮಾಡಬಹುದು. ಆದರೆ, ನೇರವಾಗಿ ಗಾಂಜಾ ಸೇವನೆಗೆ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.

ಡ್ರಗ್ಸ್‌ ಮಾಫಿಯಾ: ಕಾಂಗ್ರೆಸ್‌ ಮುಖಂಡನ ಪುತ್ರನ ಹೆಸರು!

ಏಕೆಂದರೆ, ಗಾಂಜಾ ಮನುಷ್ಯನ ಮನಸ್ಸಿನ ಮೇಲೆ ಹಲವು ದುಷ್ಪರಿಣಾಮ ಬೀರುತ್ತದೆ. ಮರಿಜುವಾನಾ ಎಂದು ಕರೆಯಲ್ಪಡುವ ಗಾಂಜಾಗೆ ವ್ಯಸನಿಯಾಗಿಸುವುದರ ಜತೆಗೆ ಉನ್ಮಾದ ಅಥವಾ ಉತ್ತೇಜಿಸುವ ಗುಣ ಇದೆ. ವಾಸ್ತವದೊಂದಿಗೆ ಸಂಪೂರ್ಣ ಸಂಪರ್ಕ ಕಡಿದುಕೊಂಡರೆ ಅನಾಹುತಗಳು ಸಂಭವಿಸಬಹುದು. ಉನ್ಮಾದದಿಂದ ಹಲವು ಅಪಾಯಗಳು ಸಂಭವಿಸಬಹುದು. ಕೆಲವರು ತಮಗೆ ಉನ್ಮಾದ ಆಗುವುದಿಲ್ಲ, ಹೀಗಾಗಿ ಅವಕಾಶ ಕೊಡಿ ಎನ್ನಬಹುದು. ಆದರೆ, ಎಲ್ಲರ ಮೇಲೆಯೂ ಗಾಂಜಾ ಒಂದೇ ರೀತಿ ಪರಿಣಾಮ ಬೀರುವುದಿಲ್ಲ. ಗಾಂಜಾ ಸೇವನೆಯ ಬಳಿಕದ ಪರಿಣಾಮಗಳೂ ಎಲ್ಲಾ ಸಮಯದಲ್ಲೂ ಒಂದೇ ರೀತಿ ಇರುವುದಿಲ್ಲ ಎಂದಿದ್ದಾರೆ.

ಗಾಂಜಾ ಸೇವನೆ ಕಾನೂನು ಬದ್ಧಗೊಳಿಸಿದರೆ ಗಾಂಜಾ ವ್ಯಸನಿಯಾದವರು ಮುಂದಿನ ಡ್ರಗ್ಸ್‌ ಬಳಕೆಗೆ ಯೋಚಿಸಬಹುದು. ಅವರನ್ನು ನಿಯಂತ್ರಿಸುವುದು ಕಷ್ಟವಾಗಬಹುದು. ತಮ್ಮ ಯೋಚನೆಯ ಮೇಲೆ ಅವರು ಹಿಡಿತ ಕಳೆದುಕೊಳ್ಳಬಹುದು. ಉನ್ಮಾದದ ದಾಸನಾಗಿಸುವ ಗಾಂಜಾಗೆ ಅವಕಾಶ ನೀಡಬಾರದು. ಔಷಧೀಯ ಗುಣಗಳಿದ್ದರೆ ಸಂಶೋಧನೆಗಳಲ್ಲಿ ಸಾಬೀತಾಗಲಿ. ಸಾಬೀತಾದ ಬಳಿಕವೂ ಔಷಧ ರೂಪದಲ್ಲೇ ಬಳಕೆಯಾಗಲಿ. ಸದ್ಯಕ್ಕೆ ಗಾಂಜಾ ನಿಷೇಧವೇ ಸರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.