ಸತತ ಎರಡು ಚುನಾವಣೆಗಳಲ್ಲಿ ಸೋಲಿನ ರುಚಿ ಕಂಡ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಮುಂದಿನ ಲೋಕಸಭೆ ಚುನಾವಣೆಯ ಸ್ಪರ್ಧಿಸುವ ಬದಲು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ರಾಜ್ಯ ರಾಜಕೀಯದಲ್ಲೇ ನೆಲೆ ಕಂಡುಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಪ್ರಭುಸ್ವಾಮಿ ನಟೇಕರ್‌

ಬೆಂಗಳೂರು (ಆ.3) :  ಸತತ ಎರಡು ಚುನಾವಣೆಗಳಲ್ಲಿ ಸೋಲಿನ ರುಚಿ ಕಂಡ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಮುಂದಿನ ಲೋಕಸಭೆ ಚುನಾವಣೆಯ ಸ್ಪರ್ಧಿಸುವ ಬದಲು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ರಾಜ್ಯ ರಾಜಕೀಯದಲ್ಲೇ ನೆಲೆ ಕಂಡುಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಿಖಿಲ್‌ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್‌ ವಿರುದ್ಧ ಸೋಲನುಭವಿಸಿದ್ದರು. ಬಳಿಕ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಅದೃಷ್ಟಪರೀಕ್ಷೆ ಸಲುವಾಗಿ ರಾಮನಗರ ಕ್ಷೇತ್ರ(Ramanagar constitucncy)ದಿಂದ ಕಣಕ್ಕಿಳಿದಿದ್ದರು. ಇದಕ್ಕಾಗಿಯ ತಾಯಿ ಅನಿತಾ ಕುಮಾರಸ್ವಾಮಿ ಅವರೇ ಕ್ಷೇತ್ರ ತ್ಯಾಗ ಮಾಡಿದರು. ಹೇಳಿ ಕೇಳಿ ರಾಮನಗರ ಕ್ಷೇತ್ರ ಜೆಡಿಎಸ್‌ ಭದ್ರಕೋಟೆ. ಹೇಗಿದ್ದರೂ ಸುಲಭವಾಗಿ ಗೆಲ್ಲಬಹುದು ಎಂಬ ಎಣಿಕೆ ಹುಸಿಯಾಯಿತು. ಕಾಂಗ್ರೆಸ್‌ನ ಇಕ್ಬಾಲ್‌ ಹುಸೇನ್‌ ವಿರುದ್ಧ ಸೋಲನುಭವಿಸಿದರು.

ಚುನಾವಣೆ ಅಕ್ರಮ ಆರೋಪ; ಎಚ್‌ಡಿ ರೇವಣ್ಣ ಆಯ್ಕೆ ರದ್ದತಿಗೆ ಕೋರಿ ಹೈಕೋರ್ಟ್‌ಗೆ ಅರ್ಜಿ

ಇದೀಗ ಮುಂದಿನ ವರ್ಷ ಮತ್ತೆ ಲೋಕಸಭಾ ಚುನಾವಣೆ(Loksabha election 2024) ಎದುರಾಗುತ್ತಿದೆ. ಎರಡು ಸತತ ಸೋಲಿನ ಕಹಿ ಅನುಭವ ಹೊಂದಿರುವ ನಿಖಿಲ್‌ ಕುಮಾರಸ್ವಾಮಿ(Nikhil kumaraswamy) ಈ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ತೀರಾ ಕಡಮೆ ಎನ್ನಲಾಗುತ್ತಿದೆ. ಒಂದು ವೇಳೆ ಮೂರನೇ ಬಾರಿಯೂ ಸೋಲುಂಟಾದಲ್ಲಿ ಅದು ಭವಿಷ್ಯ ರಾಜಕೀಯ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂಬ ಆತಂಕವೂ ಇದೆ.

ರಾಮನಗರದಲ್ಲೇ ನೆಲೆ:

ರಾಜ್ಯ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ರಾಮನಗರ ಕ್ಷೇತ್ರದಲ್ಲಿಯೇ ತಮ್ಮ ರಾಜಕೀಯ ಜೀವನ ರೂಪಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ರಾಜಕೀಯದಲ್ಲಿ ಸೋಲು-ಗೆಲುವು ಸಹಜ ಎಂಬುದನ್ನು ಮನಗಂಡು, 2028ರ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಕೈಗೊಳ್ಳಲು ಮುಂದಾಗಿದ್ದಾರೆ. ಕುಟುಂಬ ಸಮೇತರಾಗಿ ವಿದೇಶ ಪ್ರವಾಸಕ್ಕೆ ತೆರಳಿರುವ ಅವರು, ಅಲ್ಲಿಂದ ಹಿಂತಿರುಗಿದ ಬಳಿಕ ಪಕ್ಷದ ಸಂಘಟನೆಯ ಜತೆಗೆ ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಳ್ಳುವತ್ತ ಹೆಚ್ಚಿನ ಗಮನಹರಿಸಲಿದ್ದಾರೆ. ಯುವ ಘಟಕವನ್ನು ಸದೃಢಗೊಳಿಸುವ ಮೂಲಕ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸುಳ್ಳು ಜಾತಿ, ಶೈಕ್ಷಣಿಕ ಪ್ರಮಾಣಪತ್ರ ಆರೋಪ; ಪ್ರಿಯಾಂಕ್‌ ಖರ್ಗೆ ಆಯ್ಕೆ ರದ್ದತಿ ಕೋರಿ ಹೈಕೋರ್ಟ್‌ಗೆ ಅರ್ಜಿ

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ(HD Devegowda) ಕುಟುಂಬದಿಂದ ಲೋಕಸಭೆ ಚುನಾವಣೆಗೆ ಯಾರು ಸ್ಪರ್ಧಿಸುವುದಿಲ್ಲ. ಬದಲಿಗೆ ಕಾರ್ಯಕರ್ತರಿಗೆ, ಪಕ್ಷದ ಮುಖಂಡರಿಗೆ ಟಿಕೆಟ್‌ ನೀಡಲಾಗುತ್ತದೆ ಎಂಬ ಮಾತುಗಳು ಇತ್ತೀಚೆಗೆ ಕೇಳಿಬಂದಿದ್ದವು. ನಿಖಿಲ್‌ ಕುಮಾರಸ್ವಾಮಿ ಅವರು ರಾಜ್ಯ ರಾಜಕೀಯದತ್ತ ಮುಖಮಾಡುವುದು ಇದಕ್ಕೆ ಪುಷ್ಠಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೆ, ಪಕ್ಷದ ನಾಯಕರು ಇದನ್ನು ತಳ್ಳಿ ಹಾಕಿದ್ದು, ಅದೆಲ್ಲ ಕೇವಲ ವದಂತಿಗಳಷ್ಟೇ. ನಿಖಿಲ್‌ ಕುಮಾರಸ್ವಾಮಿ ರಾಜ್ಯ ರಾಜಕೀಯದಲ್ಲಿ ನೆಲೆ ಕಂಡುಕೊಳ್ಳುವುದಕ್ಕೂ, ಲೋಕಸಭೆ ಚುನಾವಣೆಯಲ್ಲಿ ದೇವೇಗೌಡ ಕುಟುಂಬದಿಂದ ಯಾರು ಸ್ಪರ್ಧಿಸುವುದಿಲ್ಲ ಎಂಬುದಕ್ಕೂ ಸಂಬಂಧ ಇಲ್ಲ ಎನ್ನುತ್ತಾರೆ.