ನವದೆಹಲಿ(ಜ.13):  ಕಳೆದ ವರ್ಷ ಬಂಧಿತನಾಗಿದ್ದ ಬೆಂಗಳೂರಿನ ಶಂಕಿತ ಐಸಿಸ್‌ ಉಗ್ರ, ವೈದ್ಯ ಅಬ್ದುಲ್‌ ರೆಹಮಾನ್‌ ವಿರುದ್ಧ ರಾಷ್ಟ್ರೀಯ ತನಿಖಾದಳ ಮಂಗಳವಾರ ಆರೋಪಪಟ್ಟಿ ಸಲ್ಲಿಸಿದೆ. 

ಈತನ ವಿರುದ್ಧ ಐಸಿಸ್‌ ಉಗ್ರ ಸಂಘಟನೆಯ ಸಿದ್ಧಾಂತಗಳನ್ನು ಮತ್ತಷ್ಟು ಪ್ರಚುರಪಡಿಸುವ ಮತ್ತು ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ನಡೆಸಿದ ಆರೋಪವನ್ನು ಹೊರಿಸಲಾಗಿದೆ. ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ ಅಡಿಯಲ್ಲಿ ದೆಹಲಿಯ ಎನ್‌ಐಎ ಕೋರ್ಟ್‌ನಲ್ಲಿ ಈ ಆರೋಪಪಟ್ಟಿ ದಾಖಲಾಗಿದೆ. ಬೆಂಗಳೂರಿನ ಮೆಡಿಕಲ್‌ ಕಾಲೇಜುವೊಂದರಲ್ಲಿ ವ್ಯಾಸಂಗದ ವೇಳೆ ರೆಹಮಾನ್‌ ಐಸಿಸ್‌ ಪ್ರಭಾವಕ್ಕೆ ಒಳಗಾಗಿದ್ದ. ಬಳಿಕ 2013ರಲ್ಲಿ ಸಿರಿಯಾಕ್ಕೆ ತೆರಳಿ, ವಿವಿಧ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಭಾರತಕ್ಕೆ ಮರಳಿದ ಬಳಿಕವೂ ಐಸಿಸ್‌ ಜೊತೆಗಿನ ನಂಟನ್ನು ಮುಂದುವರಿಸಿದ್ದ. ಈ ಹಿನ್ನೆಲೆಯಲ್ಲಿ ಎನ್‌ಐಎ ಪೊಲೀಸರು ಅಬ್ದುರ್‌ ರೆಹಮಾನ್‌ನನ್ನು 2020ರ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಬಂಧಿಸಿದ್ದರು.

ಟೆರರರ್ ಡಾಕ್ಟರನ್ನ ಐಸಿಸ್‌ಗೆ ಸೇರಿಸಿದ್ದು ಇನ್ನೊಬ್ಬ ಡಾಕ್ಟರ್!

ಐಸಿಸ್‌ ಉಗ್ರರಿಗೆ ಚಿಕಿತ್ಸೆ ನೀಡಲು ಮೆಡಿಕಲ್‌ ಆ್ಯಪ್‌ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿಯೂ ಬಹುತೇಕ ಯಶಸ್ವಿಯಾಗಿದ್ದ. ಅದೇ ರೀತಿ ಲೇಸರ್‌ ಚಾಲಿತ ಕ್ಷಿಪಣಿ ನಿಯಂತ್ರಿಸುವ ಆ್ಯಪ್‌ ತಯಾರಿಸುವುದಕ್ಕೂ ಐಸಿಸ್‌ಗೆ ನೆರವು ನೀಡಿದ್ದ ಎಂಬ ಸಂಗತಿ ತನಿಖೆಯಿಂದ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಎನ್‌ಐಎ ಪೊಲೀಸರು ಅಬ್ದುರ್‌ ರೆಹಮಾನ್‌ನನ್ನು 2020ರ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಬಂಧಿಸಿದ್ದರು.