ಕಳೆದ 21ದಿನಗಳಿಂದ ಆರೋಗ್ಯ ಇಲಾಖೆಯಲ್ಲಿ ಹಗಲು- ರಾತ್ರಿ ಎನ್ನದೇ ಬಡಜನರ ಸೇವೆ ಮಾಡುತ್ತಿದ್ದ ಒಳಗುತ್ತಿಗೆ ನೌಕರರು ಮತ್ತು ಸಿಬ್ಬಂದಿ ನೌಕರಿ ಖಾಯಂ ಮಾಡಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಮುಂದುವರೆಸಿದ್ದಾರೆ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ರಾಯಚೂರು (ಮಾ.5): ಎಲ್ಲರಿಗೂ ಆರೋಗ್ಯ, ಎಲ್ಲೆಡೆಯೂ ಆರೋಗ್ಯ ಎಂಬ ಘೋಷಣೆ ಸರ್ಕಾರ ಮಾಡಿದೆ. ಬಡ ಜನರಿಗೆ ಗುಣಮಟ್ಟದ ಆರೋಗ್ಯ ಸೌಲಭ್ಯಗಳು ನೀಡಬೇಕು ಎಂಬ ಕಾರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿವಿಧ ಯೋಜನೆ ಅಡಿಯಲ್ಲಿ ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರಗಳನ್ನು ತೆರೆದಿದೆ. ಅದರಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಒಳಗುತ್ತಿಗೆ ಮತ್ತು ಹೊರಗುತ್ತಿಗೆ ಅಡಿಯಲ್ಲಿ ಸಿಬ್ಬಂದಿಯನ್ನ ನೇಮಕ ಮಾಡಿ ಬಡವರಿಗೆ ಗುಣಮಟ್ಟದ ಆರೋಗ್ಯ ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಕಳೆದ 10-12 ವರ್ಷಗಳಿಂದ ಸಿಬ್ಬಂದಿ ಕಡಿಮೆ ವೇತನ ಪಡೆದರೂ ಬಡ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ. ಆದ್ರೆ ಕಳೆದ 21ದಿನಗಳಿಂದ ಆರೋಗ್ಯ ಇಲಾಖೆಯಲ್ಲಿ ಹಗಲು- ರಾತ್ರಿ ಎನ್ನದೇ ಬಡಜನರ ಸೇವೆ ಮಾಡುತ್ತಿದ್ದ ಒಳಗುತ್ತಿಗೆ ನೌಕರರು ಮತ್ತು ಸಿಬ್ಬಂದಿ ನೌಕರಿ ಖಾಯಂ ಮಾಡಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಮುಂದುವರೆಸಿದ್ದಾರೆ. ಹೀಗಾಗಿ ಪ್ರಾಥಮಿಕ ಮತ್ತು ತಾಲೂಕಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಆರೈಕೆ ಸಿಗದೇ ರೋಗಿಗಳು ಗೋಳಾಟ ನಡೆಸಿದ್ದಾರೆ.
ಹೋರಾಟಕ್ಕೆ ಕುಳಿತ NHM ಒಳಗುತ್ತಿಗೆ ನೌಕರರು:
ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಕೆಲಸ ಮಾಡಲು ಸರ್ಕಾರ ಒಳಗುತ್ತಿಗೆ ಅಡಿಯಲ್ಲಿ ಸಿಬ್ಬಂದಿಯನ್ನ ನೇಮಕ ಮಾಡಿದ್ದಾರೆ. ನೇಮಕಗೊಂಡ ಸಿಬ್ಬಂದಿ ಜಿಲ್ಲೆ ಬಿಟ್ಟು - ಜಿಲ್ಲೆಗಳಿಗೆ ಬಂದು ಕಳೆದ 10-12 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅದರಲ್ಲೂ ಸ್ಟಾಪ್ ನರ್ಸ್, ಆಯುಷ್ ವೈದ್ಯರು, ಲ್ಯಾಬ್ ಟೆಕ್ನಿಷಿಯನ್, ಫಾರ್ಮಸಿಸ್ಟ್, ಗ್ರೂಪ್ ಡಿ ಸಿಬ್ಬಂದಿ ಹಾಗೂ ಆರೋಗ್ಯ ಸಂಯೋಜಕರು ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಸಾರ್ವಜನಿಕರ ಆರೋಗ್ಯ ಸೇವೆ ಸಿಗದೇ ಪರದಾಟ ನಡೆಸಿದ್ದಾರೆ. ಮುಖ್ಯವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬರು ಖಾಯಂ ಸ್ಟಾಪ್ ನರ್ಸ್ ಇದ್ರೆ, ಇನ್ನುಳಿದ 3 ಜನರು ಒಳಗುತ್ತಿಗೆ ಸ್ಟಾಪ್ ನರ್ಸ್ ಕೆಲಸ ಮಾಡುತ್ತಿದ್ರು. ಈಗ 21 ದಿನಗಳಿಂದ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಯಂ ಸೇವೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಿಂತ ಒಳಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಕೆಲಸ ಬಿಟ್ಟು ನಮಗೆ ಖಾಯಂಗೊಳಿಸಬೇಕೆಂದು ಆಗ್ರಹಿಸಿ ಹೋರಾಟ ನಡೆಸಿದ್ದಾರೆ. ಹೀಗಾಗಿ ಗ್ರಾಮೀಣ ಪ್ರದೇಶದ ಆಸ್ಪತ್ರೆಯಲ್ಲಿ ಬಡ ರೋಗಿಗಳು ನರಳಾಟ ನಡೆಸಿದ್ದಾರೆ. ಪ್ರತಿದಿನ ಆಸ್ಪತ್ರೆಗಳಿಗೆ ಬರುವ ಸಾರ್ವಜನಿಕರಿಗೆ ಒಳಗುತ್ತಿಗೆ ನೌಕರರೇ ಆಸರೆ ಆಗಿದ್ರು. ಈಗ ಸಿಬ್ಬಂದಿ ಕೆಲಸಕ್ಕೆ ಹಾಜರ್ ಆಗದೇ ಹೋರಾಟಕ್ಕೆ ಇಳಿದಿದ್ದರಿಂದ ಆಸ್ಪತ್ರೆಯಲ್ಲಿ ಹತ್ತಾರು ಸಮಸ್ಯೆ ಉಲ್ಬಣ ಆಗುತ್ತಿವೆ.
ಸಂಕಷ್ಟದಲ್ಲಿ ಒಳಗುತ್ತಿಗೆ ಆರೋಗ್ಯಕಾರ್ಯಕರ್ತರು:
ಮೆರಿಟ್ ಆಧಾರದಲ್ಲಿ ನೇಮಕಗೊಂಡ ಒಳಗುತ್ತಿಗೆ ನೌಕರರಲ್ಲಿ ಬಹುತೇಕ ಸಿಬ್ಬಂದಿ ಸ್ಟಾಪ್ ನರ್ಸ್ ಗಳು ಹೆಚ್ವಾಗಿ ಇದ್ದಾರೆ. ಅದರಲ್ಲೂ ಕೋವಿಡ್ ವೇಳೆಯಲ್ಲಿ ಆಸ್ಪತ್ರೆಯ ಒಳಗೆ ಹಾಗೂ ಹೊರಗೆ ಅಕ್ಷರಶಃ ಹೋರಾಟವನ್ನೇ ನಡೆಸಿರುವ ಆರೋಗ್ಯ ಕಾರ್ಯಕರ್ತರು ಹಾಗೂ ಸಿಬ್ಬಂದಿ ಈಗ ವೇತನ ಸೇರಿದಂತೆ ಖಾಯಂ ನೌಕರರಿಗಾಗಿ ಹೋರಾಟ ನಡೆಸಿದ್ದಾರೆ. ಕೋವಿಡ್ ಆಸ್ಪತ್ರೆಗಳಲ್ಲಿ ವೈದ್ಯರಂತೆ ರೋಗಿಗಳೊಂದಿಗೆ ನೇರ ಸಂಪರ್ಕ ಹೊಂದಿರುವ ಆರೋಗ್ಯ ಸಿಬ್ಬಂದಿ, ಹಗಲು ರಾತ್ರಿ ಎನ್ನದೇ ನಾವು ಕೆಲಸ ಮಾಡಿದ್ದೇವೆ. ಆದ್ರೂ ನಮಗೆ ಯಾವುದೇ ಸ್ಥಾನಮಾನವಿಲ್ಲ. ಕಳೆದ 10-12 ವರ್ಷಗಳಿಂದ ದುಡಿದರೂ 15-20ಸಾವಿರದ ಒಳಗೆ ದುಡಿಯುತ್ತಿದ್ದೇವೆ.
ಇಷ್ಟು ದುಡಿದರೂ ವೇತನವೂ ಸಮಯಕ್ಕೆ ಸರಿಯಾಗಿ ಸಿಗುವ ಸಂಬಳವೂ ನಮಗೆ ಸಿಗಲ್ಲ. ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ನಾವು ಪ್ರಮುಖ ಪಾತ್ರವಹಿಸಿದ್ದೇವೆ ಎಂದು ಸನ್ಮಾನ ಮಾಡಿದ್ರು. ಆದ್ರೆ ನಮ್ಮ ಬೇಡಿಕೆಗಳಿಗೆ ಬೆಲೆ ಇಲ್ಲ ದಂತಾಗಿದೆ. ನಮ್ಮ ಜೊತೆಗೆ ಕೆಲಸ ಮಾಡುವ ವೈದ್ಯರಿಗೆ ಸಮಸ್ಯೆಯಾದಲ್ಲಿ ಸರ್ಕಾರ ಕೂಡಲೇ ಸ್ಪಂದಿಸುತ್ತದೆ. ಆದರೆ, ನಾವು ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ ಎಂದು ಹಲವು ವರ್ಷ ಗಳಿಂದ ಕೇಳಿಕೊಳ್ಳುತ್ತಿದ್ದರೂ ನಮ್ಮ ಧ್ವನಿ ಸರ್ಕಾರಗಳಿಗೆ ಕೇಳಿಸುತ್ತಿಲ್ಲ. ಆರೋಗ್ಯ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಜವಾಬ್ದಾರಿ ಸರ್ಕಾರದ ಮೇಲಿದ್ದು, ನಮ್ ಸೇವೆಯನ್ನೂ ಪರಿಗಣಿಸಬೇಕೆಂದು ಆರೋಗ್ಯ ಇಲಾಖೆಯ ಸಿಬ್ಬಂದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವೇತನ ಹೆಚ್ಚಳಕ್ಕೆ ಆಗ್ರಹ: ಮಾರ್ಚ್ 24 ರಿಂದ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರ ಮುಷ್ಕರ
ಪ್ರತಿಭಟನೆ ಕುಳಿತವರ ಬೇಡಿಕೆಗಳು ಏನು?
ಕಳೆದ 21 ದಿನಗಳಿಂದ ಒಳಗುತ್ತಿಗೆ ಆರೋಗ್ಯ ಸಿಬ್ಬಂದಿ ಆಸ್ಪತ್ರೆಗೆ ಗೈರು ಆಗಿ ಪ್ರತಿಭಟನೆ ಮುಂದುವರೆಸಿದ್ದಾರೆ. ಅವರ ಪ್ರಮುಖ ಬೇಡಿಕೆಗಳು ಹೀಗಿವೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಜಿಲ್ಲೆ ಮತ್ತು ಅಂತರ ಜಿಲ್ಲೆಯ ಸಿಬ್ಬಂದಿಗೆ ವರ್ಗಾವಣೆ ಅವಕಾಶ ನೀಡಬೇಕು. ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸಲು ಸೇವಾ ಭದ್ರತೆ ಎಲ್ಲಾ ಆರೋಗ್ಯ ಸಿಬ್ಬಂದಿಗೆ ವಿಮೆ ಒದಗಿಸಬೇಕು. ಸರ್ಕಾರಿ ನೌಕರರಿಗೆ ಇರುವಂತೆ ವೈದ್ಯಕೀಯ ಚಿಕಿತ್ಸಾ ವೆಚ್ಚ ಮರುಪಾವತಿ ಮಾಡಬೇಕು. ಆರೋಗ್ಯ ಸೇವೆಯ ವೇಳೆ ಮೃತಪಡುವ ನೌಕರರ ಕುಟುಂಬಕ್ಕೆ ಪರಿಹಾರ ಕೊಡಬೇಕು
NHM ಗುತ್ತಿಗೆ ನೌಕರರ ಬಹುದಿನದ ಬೇಡಿಕೆ ಈಡೇರಿಸಿದ ರಾಜ್ಯ ಸರ್ಕಾರ, ಶೇ.15 ರಷ್ಟು ವೇತನ ಹೆಚ್ಚಳ
ಒಟ್ಟಿನಲ್ಲಿ ಆರೋಗ್ಯ ಇಲಾಖೆಯ ಒಳಗುತ್ತಿಗೆ ನೌಕರರ ಪ್ರತಿಭಟನೆ ಹಿನ್ನೆಲೆಯಲ್ಲಿ ಬಡ ರೋಗಿಗಳು ಸ್ಥಳೀಯ ಮಟ್ಟದ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಪರದಾಟ ನಡೆಸಿದ್ದಾರೆ. ಹೀಗಾಗಿ ಸರ್ಕಾರ ಕೂಡಲೇ ಮಧ್ಯೆ ಪ್ರವೇಶ ಮಾಡಿ ಹೋರಾಟ ಕುಳಿತವರ ಸಮಸ್ಯೆಗಳಿಗೆ ಇತ್ಯರ್ಥಗೊಳಿಸಿ ಆರೋಗ್ಯ ಸಿಬ್ಬಂದಿ ಮತ್ತೆ ಸೇವೆಗೆ ತೆರಳುವಂತೆ ಆಗಬೇಕಾಗಿದೆ.
