ಮೇಕೆದಾಟು ಅಣೆಕಟ್ಟು: ಜಂಟಿ ಸಮಿತಿ ರಚಿಸಿದ ಹಸಿರು ನ್ಯಾಯ ಪೀಠ
* ಮೇಕೆದಾಟು ಆಣೆಕಟ್ಟು ನಿರ್ಮಾಣ ವಿಚಾರದಲ್ಲಿ ಕರ್ನಾಟಕದಿಂದ ಪರಿಸರ ನಿಯಮಗಳ ಉಲ್ಲಂಘನೆ ಆರೋಪ
* ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರೀಯ ಹಸಿರು ನ್ಯಾಯಧಿಕರಣದಿಂದ ವಿಚಾರಣೆ
* ಜಂಟಿ ಸಮಿತಿ ರಚಿಸಿದ ನ್ಯಾಯ ಪೀಠ
ಚೆನ್ನೈ, (ಮೇ.25): ಮೇಕೆದಾಟುವಿನಲ್ಲಿ ಅನಧಿಕೃತ ನಿರ್ಮಾಣ ಚಟುವಟಿಕೆಗಳ ಆರೋಪ ಪರಿಶೀಲಿಸಲು ಹಸಿರು ನ್ಯಾಯಾಧೀಕರಣ, ಜಂಟಿ ಸಮಿತಿಯೊಂದನ್ನು ನೇಮಿಸಿದೆ.
ಕರ್ನಾಟಕದಿಂದ ಪರಿಸರ ನಿಯಮಗಳ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಸ್ಥಳದಲ್ಲಿನ ವಾಸ್ತವ ವರದಿ ನೀಡುವಂತೆ ಸೂಚನೆ ಸಮಿತಿಗೆ ಸೂಚಿಸಿದೆ.
ಏಪ್ರಿಲ್ 15 ರಂದು ಪ್ರಕಟಗೊಂಡ ವರದಿ ಆಧಾರದ ಮೇಲೆ ಸ್ವಯಂ ಪ್ರೇರಿತವಾಗಿ ಈ ವಿಚಾರವನ್ನು ಕೈಗೆತ್ತಿಕೊಂಡಿರುವ ನ್ಯಾಯಾಧೀಶ ಕೆ ರಾಮಕೃಷ್ಣನ್ ಹಾಗೂ ತಜ್ಞ ಸದಸ್ಯ ಡಾ ಕೆ ಸತ್ಯಗೋಪಾಲ್, ಜುಲೈ 5ರೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ನಿರ್ದೇಶಿಸಿದೆ.
‘ಮೇಕೆದಾಟು’ : ಕಾವೇರಿಗೆ ಮತ್ತೊಂದು ಅಣೆಕಟ್ಟು ನಿರ್ಮಾಣಕ್ಕೆ ರೆಕ್ಕೆಪುಕ್ಕ
ಮೇಕೆದಾಟುವಿನಲ್ಲಿ ಪರಿಸರದ ಬಗ್ಗೆ ಸಾಕಷ್ಟು ಪ್ರಶ್ನೆಗಳಿದ್ದು, ಅದಕ್ಕಾಗಿ ನ್ಯಾಯಾಧೀಕರಣ ಮಧ್ಯಪ್ರವೇಶಿಸಿದೆ. ಆದ್ದರಿಂದ ಈ ವಿಚಾರವನ್ನು ಕೈಗೆತ್ತಿಕೊಳ್ಳಲಾಗಿದೆ. ಒಂದು ವೇಳೆ ಪರಿಸರ ಪರಿಣಾಮದ ಮೌಲ್ಯಮಾಪನವನ್ನು ನಡೆಸದೆ ಮತ್ತು ಅಗತ್ಯ ಅನುಮತಿ ಪಡೆಯದೆ ಯೋಜನೆಯನ್ನು ಕಾರ್ಯಗತಗೊಳಿಸಿದರೆ, ಏನಾದರೂ ಅಗತ್ಯವಿದ್ದರೆ, ಅನಧಿಕೃತ ಚಟುವಟಿಕೆಯಿಂದ ಪರಿಸರದ ಮೇಲೆ ಪರಿಣಾಮ ಉಂಟಾಗುತ್ತಿದ್ದರೆ, ನಂತರ ಈ ನ್ಯಾಯಮಂಡಳಿಯು ಮಧ್ಯಪ್ರವೇಶಿಸುವ ಅಧಿಕಾರವನ್ನು ಪಡೆಯುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಅನುಮತಿ ಪಡೆಯದೆ ನಿರ್ಮಾಣ ಚಟುವಟಿಕೆಯನ್ನು ಕೈಗೊಳ್ಳಲಾಗಿದೆಯೇ, ಯಾವುದೇ ನಿರ್ಮಾಣವನ್ನು ಮಾಡಿದ್ದರೆ ಮತ್ತು ಪರಿಸರಕ್ಕೆ ಯಾವುದೇ ಹಾನಿ ಸಂಭವಿಸಿದ್ದರೆ ಅದನ್ನು ಪರಿಶೀಲಿಸುವಂತೆ ಸಮಿತಿಗೆ ನ್ಯಾಯಪೀಠ ನಿರ್ದೇಶಿಸಿದೆ. ಸಮಿತಿಗೆ ಸೂಕ್ತ ಲಾಜಿಸ್ಟಿಕ್ ಬೆಂಬಲ ನೀಡುವುದು ಕರ್ನಾಟಕ ಅರಣ್ಯ ಇಲಾಖೆಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಯ ಜವಾಬ್ದಾರಿಯಾಗಿದೆ ಎಂದು ಪೀಠ ಹೇಳಿದೆ.
ಕೇಂದ್ರ ಪರಿಸರ ಸಚಿವಾಲಯ, ಜಲ ಸಂಪನ್ಮೂಲ ಇಲಾಖೆ. ಕೇಂದ್ರ ನೀರು ಆಯೋಗ, ಕರ್ನಾಟಕ, ತಮಿಳುನಾಡು ಮತ್ತಿತರ ಮುಖ್ಯ ಕಾರ್ಯದರ್ಶಿಗಳಿಗೆ ನ್ಯಾಯಪೀಠ ನೋಟಿಸ್ ಕಳುಹಿಸಿದ್ದು, ಇದೇ ಮಾಹಿತಿಯನ್ನು ನೀಡಿದೆ.