ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರ್ನಾಟಕದಲ್ಲಿ ಮುಂದಿನ 3 ದಿನ ಮಳೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮುಂದಿನ ಮೂರು ದಿನ ಮಳೆಯಾಗುವ ಸಾಧ್ಯತೆ

ಬೆಂಗಳೂರು(ನ.27): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮುಂದಿನ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ ಅಂತ ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ ತುಮಕೂರು, ಮಂಡ್ಯ, ಮೈಸೂರು, ರಾಮನಗರ, ಹಾವೇರಿ ಮತ್ತು ವಿಜಯಪುರ ಇತರ ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಅಂತ ಮಾಹಿತಿ ನೀಡಿದೆ.
ಕರ್ನಾಟಕದಲ್ಲಿ ಇನ್ನೂ 4-5 ದಿನ ಮಳೆ..!
ಹಿಂಗಾರು ಮಳೆ: 10 ಲಕ್ಷ ಹೆಕ್ಟೇರ್ ಕಡಿಮೆ ಬಿತ್ತನೆ
ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದಾಗಿ ರಾಜ್ಯದಲ್ಲಿ ಹಿಂಗಾರು ಬಿತ್ತನೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ. ಕೃಷಿ ಇಲಾಖೆಯ ನಿಗದಿತ ಗುರಿಗಿಂತ ಬರೋಬ್ಬರಿ 10 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರಮಾಣದಲ್ಲಿ ಕಡಿಮೆ ಬಿತ್ತನೆಯಾಗಿದೆ. ಇಲಾಖೆ ಅಂಕಿ ಅಂಶಗಳ ಪ್ರಕಾರ ನ.10ರವರೆಗೆ ರಾಜ್ಯಾದ್ಯಂತ ಒಟ್ಟಾರೆ 26.68 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಆಗಬೇಕಿತ್ತಾದರೂ 16.30 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ನೀರಾವರಿ ಪ್ರದೇಶದಲ್ಲಿ 6.42 ಲಕ್ಷ ಹೆಕ್ಟೇರ್ ಗುರಿಗೆ ಬದಲಾಗಿ 2.68 ಲಕ್ಷ ಹೆಕ್ಟೇರ್‌ನಲ್ಲಿ ಹಾಗೂ ಮಳೆಯಾಶ್ರಿತದಲ್ಲಿ 20.26 ಲಕ್ಷ ಹೆಕ್ಟೇರ್ ಗುರಿಗೆ ಬದಲಾಗಿ 13.63 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.
ಏಕದಳ ಧಾನ್ಯ, ದ್ವಿದಳ ಧಾನ್ಯ, ಎಣ್ಣೆ ಕಾಳು, ವಾಣಿಜ್ಯ ಬೆಳೆಗಳು ನೀರಾವರಿ ಮತ್ತು ಮಳೆಯಾಶ್ರಿತ ಪ್ರದೇಶದಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆಯಾಗಿಲ್ಲ. ಹಿಂದಿನ ವರ್ಷ ಸೇರಿದಂತೆ ಕಳೆದ ಕೆಲ ವರ್ಷಗಳ ವಾಡಿಕೆಗಿಂತಲೂ ಕಡಿಮೆ ವಿಸ್ತೀರ್ಣದಲ್ಲಿ ಬೆಳೆಗಳನ್ನು ಬೆಳೆಯಲಾಗಿದೆ. ಭತ್ತ, ಜೋಳ, ರಾಗಿ, ಮೆಕ್ಕೆಜೋಳ ಸೇರಿದಂತೆ ಏಕದಳ ಧಾನ್ಯಗಳಲ್ಲಿ ಶೇ.47ರಷ್ಟುಸಾಧನೆಯಾಗಿದ್ದು,11.15 ಲಕ್ಷ ಹೆಕ್ಟೇರ್‌ಗೆ ಬದಲಾಗಿ 5.22 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ.