Asianet Suvarna News Asianet Suvarna News

ಇನ್ನು 1 ವರ್ಷ ಕನ್ನಡ ಕಾಯಕ ವರ್ಷ: ಭಾಷೆ ರಕ್ಷಣೆಗೆ ರಾಜ್ಯ ಸರ್ಕಾರದಿಂದ ವಿಶೇಷ ಕಾರ್ಯಕ್ರಮ!

ಇನ್ನು 1 ವರ್ಷ ಕನ್ನಡ ಕಾಯಕ ವರ್ಷ| ಕನ್ನಡ ಭಾಷೆಯ ರಕ್ಷಣೆಗೆ ರಾಜ್ಯ ಸರ್ಕಾರದಿಂದ ವಿಶೇಷ ಕಾರ್ಯಕ್ರಮ| ಶೀಘ್ರವೇ ಕಾರ್ಯಕ್ರಮಗಳ ರೂಪರೇಷೆ ಪ್ರಕಟ: ಬಿಎಸ್‌ವೈ ಘೋಷಣೆ

Next one year to be observed as Kannada Action Year Karnataka CM Yediyurappa pod
Author
Bangalore, First Published Nov 2, 2020, 7:48 AM IST

 

 

ಬೆಂಗಳೂರು(ನ.02): ಕನ್ನಡ ಭಾಷೆ, ನಾಡು-ನುಡಿ ಕಾಪಾಡುವ ನಿಟ್ಟಿನಲ್ಲಿ ಒಂದು ವರ್ಷದ ಕಾಲ ‘ಕನ್ನಡ ಕಾಯಕ ವರ್ಷ’ವನ್ನಾಗಿ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಘೋಷಿಸಿದ್ದಾರೆ.

ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ 65ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭುವನೇಶ್ವರಿ ದೇವಿಗೆ ಪುಷ್ಪನಮನ ಹಾಗೂ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕನ್ನಡ ಭಾಷೆಗೆ ಅದರದ್ದೇ ಆದ ಸೌಂದರ್ಯ ಹಾಗೂ ಸತ್ವವಿದೆ. ಅದನ್ನು ಕಾಪಾಡುವ ಹೊಣೆ ನಮ್ಮ ಮೇಲಿರುವುದರಿಂದ ನಡೆ-ನುಡಿ ಉಳಿಸಿ ಬೆಳೆಸುವುದಕ್ಕಾಗಿ ಇಂದಿನಿಂದ 2021ರ ಅಕ್ಟೋಬರ್‌ 31ರ ವರೆಗಿನ ಅವಧಿಯನ್ನು ಕನ್ನಡ ಕಾಯಕ ವರ್ಷವನ್ನಾಗಿ ಆಚರಿಸಲಾಗುವುದು. ಕಾಯಕ ವರ್ಷದ ಅಂಗವಾಗಿ ಹಮ್ಮಿಕೊಳ್ಳಬೇಕಿರುವ ಕಾರ್ಯಕ್ರಮಗಳ ರೂಪರೇಷೆ ಸಿದ್ಧಪಡಿಸಲಾಗುತ್ತಿದ್ದು, ಶೀಘ್ರವೇ ಪ್ರಕಟಿಸಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ಆಡಳಿತದ ಎಲ್ಲ ಹಂತದಲ್ಲೂ ಕನ್ನಡ ಭಾಷೆಯ ಬಳಕೆ ಕಡ್ಡಾಯ ಮಾಡಲಾಗಿದೆ. ಜನತೆ ಸಹ ಕನ್ನಡ ಭಾಷೆ ಉಳಿವಿಗೆ ಕನ್ನಡದಲ್ಲಿಯೇ ಮಾತನಾಡಬೇಕು. ನಿತ್ಯ ಜೀವನದ ವ್ಯವಹಾರಗಳಲ್ಲಿ ಕನ್ನಡ ಬಳಸಿ, ಮನೆಯಲ್ಲಿ ಮಕ್ಕಳ ಜತೆ ಕನ್ನಡದಲ್ಲೇ ಮಾತನಾಡಿ, ಮಕ್ಕಳು ಕನ್ನಡ ಭಾಷೆ ಕಲಿಯುವುದರಿಂದ ಭಾಷೆ ಉಳಿವಿಗೆ ಸಹಕಾರಿಯಾಗುತ್ತದೆ ಎಂದು ಕರೆ ನೀಡಿದರು.

ಕನ್ನಡ ಮಾಧ್ಯಮ ಶಾಲೆಗಳಿಗೆ ಬಲ:

ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ ಮಾತೃಭಾಷೆ, ಪ್ರಾದೇಶಿಕ ಭಾಷೆಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಿರುವುದರಿಂದ ಕನ್ನಡ ಮಾಧ್ಯಮ ಶಾಲೆಗಳಿಗೆ ಮತ್ತಷ್ಟುಬಲ ಬರಲಿದೆ. ಕನ್ನಡ ನಾಡು- ನುಡಿ, ಜಲ ವಿಷಯದಲ್ಲಿ ಭಾವೋದ್ವೇಗ, ಭಾವನಾತ್ಮಕತೆ ಮತ್ತು ತಾಯ್ನಾಡಿನ ಮೇಲಿನ ಅಪರಿಮಿತ ಪ್ರೀತಿ ಎಲ್ಲವೂ ಮುಖ್ಯ. ಆದರೆ, ಇವೆಲ್ಲವೂ ಒಂದು ದಿನದ ಆಚರಣೆಯಲ್ಲಿ ಕೈತೊಳೆದ ನೀರಿನಂತೆ ವ್ಯರ್ಥವಾಗಿ ಹೋಗಬಾರದು. ಕನ್ನಡ ಉಳಿಸಿ, ಬೆಳೆಸುವ ಮತ್ತು ಬದುಕಿನ ಜೀವನಾಡಿಯಾಗಿಸುವ ನಿಟ್ಟಿನಲ್ಲಿ ನವೆಂಬರ್‌ ತಿಂಗಳಿಗೆ ಸೀಮಿತವಾಗದೇ ವರ್ಷ ಪೂರ್ತಿ ಕನ್ನಡದ ಕಾರ್ಯಕ್ರಮ ನಿರಂತರವಾಗಿ ನಡೆಯುವಂತೆ ಕಾರ್ಯಸೂಚಿ ಹೊಂದುವುದು ಅತಿ ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಂತ್ರಜ್ಞಾನದ ಆಧುನಿಕ ಸ್ಪರ್ಶ:

ತಂತ್ರಜ್ಞಾನದ ಈ ಯುಗದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ತಂತ್ರಜ್ಞಾನ ಬದುಕನ್ನು ಆವರಿಸಿಕೊಂಡಿದ್ದು, ಇದು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮೇಲೂ ತನ್ನ ಛಾಪು ಮೂಡಿಸಿದೆ. ಶರವೇಗದಲ್ಲಿ ಬೆಳೆಯುತ್ತಿರುವ ಮಾಹಿತಿ ತಂತ್ರಜ್ಞಾನಕ್ಕೆ ತಕ್ಕಂತೆ ನಾವು ಭಾಷೆಯನ್ನು ಸಜ್ಜುಗೊಳಿಸುವುದು ಅನಿವಾರ್ಯವಾಗಿದೆ. ಹಲವು ಸಂಘ ಸಂಸ್ಥೆಗಳು, ಕನ್ನಡ ಗಣಕ ಪರಿಷತ್ತು ಹಾಗೂ ರಾಜ್ಯದ ವಿಶ್ವವಿದ್ಯಾಲಯಗಳು ಕನ್ನಡ ಭಾಷೆಯಲ್ಲಿ ಕಂಪ್ಯೂಟರೀಕರಣದ ಕೆಲಸವನ್ನು ಮಾಡುತ್ತಿವೆ. ಹೀಗಿದ್ದರೂ ನಾವು ಸಾಗಬೇಕಾದ ದಾರಿ ಸಾಕಷ್ಟಿದೆ ಎಂದು ಹೇಳಿದರು.

ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಜಗತ್ತಿನಲ್ಲಿ ಅತ್ಯುತ್ತಮ ಸಾಹಿತ್ಯ ಸಂಪತ್ತನ್ನು ಹೊಂದಿರುವ ಕೆಲವೇ ಭಾಷೆಗಳಲ್ಲಿ ಕನ್ನಡವೂ ಒಂದಾಗಿದೆ.ಬೇರೆ ಬೇರೆ ಸಂಸ್ಥಾನಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಹಂಚಿಹೋಗಿದ್ದ ಕನ್ನಡ ಪ್ರದೇಶಗಳು ಏಕೀಕರಣಗೊಂಡು ಕರ್ನಾಟಕ ರಾಜ್ಯ ಉದಯವಾದದ್ದು ದೊಡ್ಡ ಹೋರಾಟದ ಪ್ರತಿಫಲವಾಗಿದೆ. ಏಕೀಕರಣಕ್ಕಾಗಿ ಹೋರಾಡಿದ ಮಹನೀಯರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ. ಅಖಂಡ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಕಡೆಗೆ ಕೊಂಡೊಯ್ಯೋಣ ಎಂದು ಕರೆ ನೀಡಿದರು.

ಕೊರೋನಾ ಬಗ್ಗೆ ಆತಂಕ ಪಡಬೇಡಿ:

ಜಗತ್ತು ಕೊರೋನಾ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ರಾಜ್ಯದಲ್ಲಿಯೂ ಸರ್ಕಾರ ಮತ್ತು ಜನತೆ ಜೊತೆಯಾಗಿ ಈ ಸವಾಲನ್ನು ದಿಟ್ಟವಾಗಿ ಮತ್ತು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಿದ್ದು, ಆತಂಕಪಡುವ ಅವಶ್ಯಕತೆ ಇಲ್ಲ. ಮಾಸ್ಕ್‌ ಧಾರಣೆ, ಸಾಮಾಜಿಕ ಅಂತರ, ವೈಯಕ್ತಿಕ ಮತ್ತು ಸಾಮಾಜಿಕ ಸ್ವಚ್ಛತೆಯನ್ನು ಕಾಪಾಡಿದರೆ ಮಹಾಮಾರಿಯನ್ನು ಓಡಿಸಬಹುದಾಗಿದೆ. ಕೊರೋನಾದಿಂದ ಕೈಗಾರಿಕಾ ವಲಯ, ಆರ್ಥಿಕ ವಲಯ, ಶಿಕ್ಷಣ ಮತ್ತು ಶ್ರಮಿಕರು ಸಂಕಷ್ಟಕ್ಕೀಡಾಗಿದ್ದು, ಸಮಸ್ಯೆಯಿಂದ ಹೊರಬರುವ ಎಲ್ಲಾ ಪ್ರಯತ್ನಗಳನ್ನು ಸರ್ಕಾರ ಮಾಡುತ್ತಿದೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರಾದ ರಿಜ್ವಾನ್‌ ಅರ್ಷದ್‌ ಹಾಗೂ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Follow Us:
Download App:
  • android
  • ios