ರಾಜ್ಯದಲ್ಲಿ 3 ದಿನ ಚಂಡಮಾರುತ ಸಹಿತ ಭಾರಿ ಮಳೆ?
‘ಕ್ಯಾರ್’ ಚಂಡಮಾರುತದಿಂದ ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೂ ಎಚ್ಚರಿಕೆ ನಿಡಲಾಗಿದೆ.
ಬೆಂಗಳೂರು (ಅ.25): ಅರಬ್ಬಿ ಸಮುದ್ರದಲ್ಲಿ ರೂಪುಗೊಂಡಿರುವ ‘ಕ್ಯಾರ್’ ಚಂಡಮಾರುತದಿಂದ ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತನೆಗೊಂಡಿದ್ದು, ಗೋವಾ, ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದೆ. ಇದರ ಪ್ರಭಾವದಿಂದ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿಯೂ ಅ.27ರ ವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಜತೆಗೆ ಕಡಲ ತೀರದಲ್ಲಿ 45 ರಿಂದ 60 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಅಲೆಗಳ ಅಬ್ಬರ ಹೆಚ್ಚಾಗಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕರಾವಳಿ ಹೊರತು ಪಡಿಸಿದರೆ, ಘಟ್ಟಪ್ರದೇಶದ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಆದರೆ, ಒಳನಾಡು ಜಿಲ್ಲೆಗಳಲ್ಲಿ ಚಂಡಮಾರುತದ ಪ್ರಭಾವದಿಂದ ಹೆಚ್ಚಿನ ಮಳೆಯಾಗುವ ಸಾಧ್ಯತೆ ಕಡಿಮೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಒಳನಾಡು ಜಿಲ್ಲೆಗಳಲ್ಲಿ ತಗ್ಗಿದ ಮಳೆ:
ಉತ್ತರ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ತಗ್ಗಿದೆ. ಹಾಗಾಗಿ, ಅನೇಕ ಜಿಲ್ಲೆಗಳಿಗೆ ಹವಾಮಾನ ಇಲಾಖೆ ನೀಡಿದ್ದ ‘ಆರೆಂಜ್ ಅಲರ್ಟ್’ ಮತ್ತು ‘ಯೆಲ್ಲೋ ಅಲರ್ಟ್’ ವಾಪಾಸ್ ಪಡೆಯಲಾಗಿದೆ. ಮುಂದಿನ 48 ಗಂಟೆಯಲ್ಲಿ ಮಲೆನಾಡು ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಧಾರವಾಡ, ವಿಜಯಪುರ, ಕಲಬುರಗಿ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಎಚ್ಚರಿಕೆ ಮುಂದುವರೆಸಲಾಗಿದೆ.
2 ದಿನ ‘ಆರೆಂಜ್’, 1ದಿನ ‘ರೆಡ್ ಅಲರ್ಟ್’
ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಅ.25 ಹಾಗೂ 26ರ ಎರಡು ದಿನ 115 ದಿಂದ 205 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಮುಂದಿನ 48 ಗಂಟೆಗೆ ‘ಆರೆಂಜ್ ಅಲರ್ಟ್’ನ ಮುನ್ನೆಚ್ಚರಿಕೆ ನೀಡಿದೆ. ತದನಂತರ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅ.27ಕ್ಕೆ ‘ರೆಡ್ ಅಲರ್ಟ್’ ಎಚ್ಚರಿಕೆ ನೀಡಿದೆ.
ಅಕ್ಟೋಬರ್ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: