2026ರ ಹೊಸ ವರ್ಷಾಚರಣೆಗಾಗಿ ಬೆಂಗಳೂರಿನಲ್ಲಿ, ವಿಶೇಷವಾಗಿ ಎಂಜಿ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ, ಪೊಲೀಸರು ಅಭೂತಪೂರ್ವ ಭದ್ರತಾ ವ್ಯವಸ್ಥೆ ಮಾಡಿದ್ದಾರೆ. 3,400 ಸಿಸಿಟಿವಿಗಳು, ವಾಚ್ ಟವರ್‌ಗಳು ಮತ್ತು ಗಲಭೆ ಪತ್ತೆಹಚ್ಚುವ AI ಆಧಾರಿತ ಕ್ಯಾಮೆರಾಗಳ ಮೂಲಕ ನಗರದ ಮೇಲೆ ಹದ್ದಿನ ಕಣ್ಣಿಡಲಾಗಿದೆ.
ಬೆಂಗಳೂರು (ಡಿ.30): 2026ರ ಹೊಸ ವರ್ಷವನ್ನು ಸ್ವಾಗತಿಸಲು ಬೆಂಗಳೂರು ಸಜ್ಜಾಗುತ್ತಿದ್ದು, ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರದಾದ್ಯಂತ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಪ್ರಮುಖವಾಗಿ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಜನರ ಸುರಕ್ಷತೆಗಾಗಿ ಪೊಲೀಸರು ಸರ್ವ ಸನ್ನದ್ಧರಾಗಿದ್ದಾರೆ.
ಹೋಟೆಲ್, ಲಾಡ್ಜ್‌ಗಳಲ್ಲಿ ಪೊಲೀಸರಿಂದ ತೀವ್ರ ತಪಾಸಣೆ:
ಹೊಸ ವರ್ಷದ ಮುನ್ನಾದಿನ ನಗರದ ಪ್ರಮುಖ ಹೋಟೆಲ್‌ಗಳು, ಲಾಡ್ಜ್‌ಗಳು ಮತ್ತು ದೇವಸ್ಥಾನಗಳಲ್ಲಿ ಪೊಲೀಸರು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ. ಭದ್ರತೆಯ ದೃಷ್ಟಿಯಿಂದ ಬಾಂಬ್ ನಿಷ್ಕ್ರಿಯ ದಳ (BDDS) ಮತ್ತು ಡಾಗ್ ಸ್ಕ್ವಾಡ್ ತಂಡಗಳು ವಿವಿಧೆಡೆ ಕಾರ್ಯಾಚರಣೆ ನಡೆಸಿ, ಯಾವುದೇ ಶಂಕಾಸ್ಪದ ವಸ್ತುಗಳು ಕಂಡುಬರದಂತೆ ಕಟ್ಟೆಚ್ಚರ ವಹಿಸಿವೆ.
ಎಂಜಿ, ಬ್ರಿಗೇಡ್ ರೋಡ್ ಕಟ್ಟೆಚ್ಚರ; ವಾಚ್ ಟವರ್ ಅಳವಡಿಕೆ
ಬೆಂಗಳೂರಿನ ಹಾಟ್‌ಸ್ಪಾಟ್‌ಗಳಾದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಚರ್ಚ್ ಸ್ಟ್ರೀಟ್‌ಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತಿದೆ. ಗುಂಪಿನ ಮೇಲೆ ನಿಗಾ ಇಡಲು ಎತ್ತರದ ವಾಚ್ ಟವರ್‌ಗಳನ್ನು ನಿರ್ಮಿಸಲಾಗಿದ್ದು, ಸಶಸ್ತ್ರ ಪೊಲೀಸರು ಅಲ್ಲಿಂದಲೇ ಜನರ ಚಲನವಲನದ ಮೇಲೆ ಕಣ್ಣಿಡಲಿದ್ದಾರೆ. ಅಹಿತಕರ ಘಟನೆ ತಡೆಯಲು ಬ್ರಿಗೇಡ್ ರಸ್ತೆಯಲ್ಲಿ ಒನ್‌ವೇ ಪಾದಚಾರಿ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
3,400 ಸಿಸಿಟಿವಿಗಳ ಹದ್ದಿನಕಣ್ಣು, ವಿಶೇಷ ಕಂಟ್ರೋಲ್ ರೂಮ್ ಸ್ಥಾಪನೆ
ನಗರದ ಪ್ರಮುಖ ರಸ್ತೆಗಳ ಕಣ್ಗಾವಲಿಗಾಗಿ ವಿಶೇಷ ಸಿಸಿಟಿವಿ ಕಂಟ್ರೋಲ್ ರೂಮ್ ರಚಿಸಲಾಗಿದೆ. ಎಂಜಿ ರಸ್ತೆ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಒಟ್ಟು 3,400 ಸಿಸಿಟಿವಿ ಫೀಡ್‌ಗಳನ್ನು ಏಕಕಾಲಕ್ಕೆ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಪೊಲೀಸ್ ಇಲಾಖೆಯ 400 ಹೈಟೆಕ್ ಕ್ಯಾಮೆರಾಗಳು ಮತ್ತು 3,000 ಸ್ಥಳೀಯ ಖಾಸಗಿ ಕ್ಯಾಮೆರಾಗಳನ್ನು ಒಂದೇ ನೆಟ್‌ವರ್ಕ್‌ಗೆ ಜೋಡಿಸಲಾಗಿದೆ.
ಗಲಭೆಕೋರರಿಗೆ ಎಚ್ಚರಿಕೆ: ಬಂದಿದೆ AI ಆಧಾರಿತ 'ಕ್ರೌಡ್ ಡೆನ್ಸಿಟಿ' ಕ್ಯಾಮೆರಾ!
ಈ ಬಾರಿ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಹೆಚ್ಚು ಜನ ಸೇರುವ ಜಾಗಗಳಲ್ಲಿ AI (Artificial Intelligence) ಆಧಾರಿತ ಕ್ರೌಡ್ ಡೆನ್ಸಿಟಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದು ಗುಂಪಿನಲ್ಲಿ ಯಾವುದೇ ಗಲಭೆ ಅಥವಾ ಅಸಹಜ ಚಲನವಲನ ನಡೆದರೂ ತಕ್ಷಣವೇ ಅಲರ್ಟ್ ನೀಡುತ್ತದೆ. ಪ್ರತಿ 50 ಮೀಟರ್‌ಗೊಮ್ಮೆ ಕ್ಯಾಮೆರಾಗಳಿದ್ದು, ಇಡೀ ಪ್ರದೇಶ ಪಾರದರ್ಶಕವಾಗಿ ಪೊಲೀಸರ ಕಣ್ಣೆದುರಿರಲಿದೆ.
ಕಮಿಷನರ್ ಕಚೇರಿಯಿಂದಲೇ ನೇರ ಮೇಲ್ವಿಚಾರಣೆ;
ಕಂಟ್ರೋಲ್ ರೂಮ್‌ನಲ್ಲಿ ಲಭ್ಯವಿರುವ ದೃಶ್ಯಗಳನ್ನು ನೇರವಾಗಿ ಪೊಲೀಸ್ ಕಮಿಷನರ್ ಕಚೇರಿಗೂ ವರ್ಗಾಯಿಸಲಾಗುತ್ತಿದೆ. ಹಿರಿಯ ಅಧಿಕಾರಿಗಳು ಪ್ರತಿ ಕ್ಷಣದ ಮಾಹಿತಿಯನ್ನು ಪಡೆಯುತ್ತಿದ್ದು, ಈ ಬಾರಿ ಸೈಬರ್ ಮತ್ತು ತಾಂತ್ರಿಕ ಕಣ್ಗಾವಲು ಹಿಂದೆಂದಿಗಿಂತಲೂ ಪ್ರಬಲವಾಗಿದೆ. ಹೊಸ ವರ್ಷವನ್ನು ಶಾಂತಿಯುತವಾಗಿ ಆಚರಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


