ಪಣಜಿ[ಫೆ.23]: ‘ಮಹದಾಯಿ ನ್ಯಾಯಾಧಿಕರಣ ನೀಡಿದ ಅಂತಿಮ ಐತೀರ್ಪಿನ ಅಧಿಸೂಚನೆ ಹೊರಡಿಸಬೇಕು’ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶ ಹೊರಡಿಸಿ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಎರಡೇ ದಿನದಲ್ಲಿ ಕಹಿ ಸಂಗತಿಯೊಂದು ಹೊರಬಿದ್ದಿದೆ. ಜಲ ಹಂಚಿಕೆ ಕುರಿತಂತೆ 2018ರಲ್ಲಿ ನೀಡಿದ ಅಂತಿಮ ಐತೀರ್ಪಿನ ಬಗ್ಗೆ ರಾಜ್ಯಗಳು ಸ್ಪಷ್ಟೀಕರಣ ಕೇಳಿದ್ದಕ್ಕೆ ಉತ್ತರಿಸುವುದು ಬಾಕಿ ಇರುವ ಕಾರಣ ಮಹದಾಯಿ ಜಲ ನ್ಯಾಯಾಧಿಕರಣದ ಅವಧಿಯನ್ನು ಕೇಂದ್ರ ಸರ್ಕಾರ 6 ತಿಂಗಳ ಮಟ್ಟಿಗೆ ವಿಸ್ತರಿಸಿದೆ ಎನ್ನಲಾಗಿದ್ದು, ಇದು ನಿಜವೇ ಆಗಿದ್ದಲ್ಲಿ ಇನ್ನು 6 ತಿಂಗಳುಗಳ ಕಾಲ ಮಹದಾಯಿ ಅಧಿಸೂಚನೆ ಪ್ರಕಟವಾಗುವುದು ಅನುಮಾನ ಎನ್ನಲಾಗುತ್ತಿದೆ.

ಐತೀರ್ಪಿನ ಬಗ್ಗೆ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರಗಳು ಸ್ಪಷ್ಟೀಕರಣ ಕೇಳಿದ್ದ ಹಿನ್ನೆಲೆಯಲ್ಲಿ ನ್ಯಾಯಾಧಿಕರಣದ ಕೋರಿಕೆಯ ಮೇರೆಗೆ ಅದರ ಅವಧಿಯನ್ನು 6 ತಿಂಗಳು, ಅಂದರೆ ಆಗಸ್ಟ್‌ 19ರವರೆಗೆ ಕಳೆದ ಬುಧವಾರವಷ್ಟೇ ಕೇಂದ್ರ ಜಲಸಂಪನ್ಮೂಲ ಸಚಿವಾಲಯ ವಿಸ್ತರಿಸಿದೆ. ಈ ರಾಜ್ಯಗಳಿಗೆ ಸ್ಪಷ್ಟೀಕರಣ ನೀಡದ ಹೊರತು ಅಂತಿಮ ಐತೀರ್ಪನ್ನು ಕೇಂದ್ರ ಸರ್ಕಾರಕ್ಕೆ ನ್ಯಾಯಾಧಿಕರಣ ಸಲ್ಲಿಸುವುದಿಲ್ಲ. ಸ್ಪಷ್ಟೀಕರಣ ನೀಡುವ ವೇಳೆಯೂ ಐತೀರ್ಪಿನಲ್ಲಿ ಬದಲಾವಣೆ ಮಾಡಿಕೊಳ್ಳಲು ಅದಕ್ಕೆ ಅವಕಾಶವಿದೆ. ಹೀಗಾಗಿ ತೀರ್ಪು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾದ ಬಳಿಕವಷ್ಟೇ ಅಧಿಸೂಚನೆ ಹೊರಡಿಸಲು ಸಾಧ್ಯ ಎಂದು ಗೋವಾ ಸರ್ಕಾರಿ ವಕೀಲರನ್ನು ಉಲ್ಲೇಖಿಸಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

‘2018ರ ಆಗಸ್ಟ್‌ 14ರಂದು ಪ್ರಕಟವಾದ ನ್ಯಾಯಾಧಿಕರಣದ ಐತೀರ್ಪಿನ ಬಗ್ಗೆ ಸ್ಪಷ್ಟನೆ ಕೇಳಲಾಗಿತ್ತು. ಸ್ಪಷ್ಟನೆ ನೀಡಲು ನ್ಯಾಯಾಧಿಕರಣಕ್ಕೆ ಹೆಚ್ಚಿನ ಕಾಲಾವಕಾಶ ಸಿಕ್ಕಿರುವ ಕಾರಣ ಅಧಿಸೂಚನೆ ಹೊರಬೀಳಲು ಕನಿಷ್ಠ 6 ತಿಂಗಳು ಹಿಡಿಯಲಿದೆ’ ಎಂದು ಗೋವಾ ಅಡ್ವೋಕೇಟ್‌ ಜನರಲ್‌ ದೇವಿದಾಸ್‌ ಪಂಗಂ ಹೇಳಿರುವುದಾಗಿ ವರದಿಯಾಗಿದೆ.

1 ದಿನ ಮುಂಚೆಯಷ್ಟೇ ವಿಸ್ತರಣೆ!:

ಮಹದಾಯಿ ಐತೀರ್ಪಿನ ಅಧಿಸೂಚನೆ ಹೊರಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಕಳೆದ ಗುರುವಾರ ಮಧ್ಯಂತರ ಆದೇಶ ನೀಡಿತ್ತು ಹಾಗೂ ಆದರೆ ಐತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಜುಲೈ 15ಕ್ಕೆ ಮುಂದೂಡಿತ್ತು. ಕಾಕತಾಳೀಯ ಎಂಬಂತೆ ಈ ಆದೇಶ ಹೊರಬೀಳುವ 1 ದಿನ ಮುಂಚೆಯಷ್ಟೇ (ಬುಧವಾರ) ನ್ಯಾಯಾಧಿಕರಣದ ಅವಧಿಯನ್ನು ಜಲಶಕ್ತಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಟಿ. ರಾಜೇಶ್ವರಿ ಅವರು ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.

ಐತೀರ್ಪು ಬದಲಾವಣೆಗೆ ಅವಕಾಶ:

‘ರಾಜ್ಯಗಳಿಗೆ ಸ್ಪಷ್ಟನೆ ನೀಡುವ ಸಂದರ್ಭದಲ್ಲಿ 2018ರಲ್ಲಿ ಹೊರಡಿಸಲಾಗಿದ್ದ ಅಂತಿಮ ಐತೀರ್ಪಿನಲ್ಲಿ ನ್ಯಾಯಾಧಿಕರಣ ಬದಲಾವಣೆ ಮಾಡಬಹುದಾಗಿದೆ. ಸ್ಪಷ್ಟನೆ ನೀಡಿದ ನಂತರ ಕೇಂದ್ರ ಸರ್ಕಾರಕ್ಕೆ ಅದು ಐತೀರ್ಪು ಹಸ್ತಾಂತರಿಸಲಿದೆ’ ಎಂದು ಅಡ್ವೋಕೇಟ್‌ ಜನರಲ್‌ ಪಂಗಂ ಹೇಳಿದರು.

‘ಮಾನ್ಸೂನ್‌ನ 5 ತಿಂಗಳು ಮಾತ್ರ (ಜೂನ್‌ 1ರಿಂದ ಅಕ್ಟೋಬರ್‌ 31) ಕರ್ನಾಟಕವು ಕಳಸಾ-ಬಂಡೂರಿ ನಾಲೆಗಳ ಮೂಲಕ ಮಹದಾಯಿ ನೀರನ್ನು ತಿರುವು ತೆಗೆದುಕೊಳ್ಳಬಹುದು. ನವೆಂಬರ್‌ 1ರಿಂದ ಮೇ 31ರವರೆಗೆ ನದಿ ತಿರುವು ಮಾಡುವಂತಿಲ್ಲ ಎಂದು ಐತೀರ್ಪು ಹೇಳಿದೆ. ಈ ಕುರಿತಂತೆ ಗೋವಾ ಹಾಗೂ ಕರ್ನಾಟಕವು ನ್ಯಾಯಾಧಿಕರಣದಿಂದ ಸ್ಪಷ್ಟನೆ ಬಯಸಿವೆ’ ಎಂದು ಮೂಲಗಳು ಹೇಳಿವೆ.

ಐತೀರ್ಪು ಹೊರಬಿದ್ದ ನಂತರ ದಾವೇದಾರ ರಾಜ್ಯಗಳಿಗೆ ಸ್ಪಷ್ಟೀಕರಣ ಕೇಳಿ ಅರ್ಜಿ ಸಲ್ಲಿಸಲು 1 ವರ್ಷ ಸಮಯಾವಕಾಶ ಇರುತ್ತದೆ. ಅಷ್ಟರೊಳಗೇ ಮೂರೂ ರಾಜ್ಯಗಳು ಸ್ಪಷ್ಟನೆ ಬಯಸಿದ್ದವು.

ಏನಿದು ಸಮಸ್ಯೆ?

- ಮಹದಾಯಿ ಐತೀರ್ಪು ಕುರಿತ ಅಧಿಸೂಚನೆ ಹೊರಡಿಸಲು ಗುರುವಾರ ಆದೇಶಿಸಿದ್ದ ಸುಪ್ರೀಂಕೋರ್ಟ್‌

- ಆದರೆ, ಅದಕ್ಕೆ 1 ದಿನ ಮುನ್ನ ಮಹದಾಯಿ ನ್ಯಾಯಾಧಿಕರಣದ ಅವಧಿ 6 ತಿಂಗಳು ವಿಸ್ತರಿಸಿದ್ದ ಕೇಂದ್ರ

- ಐತೀರ್ಪಿನ ಬಗ್ಗೆ ರಾಜ್ಯಗಳು ಕೇಳಿದ ಸ್ಪಷ್ಟೀಕರಣಕ್ಕೆ ಉತ್ತರಿಸುವುದು ಬಾಕಿ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆ

- ಸ್ಪಷ್ಟನೆ ನೀಡಿದ ಬಳಿಕವಷ್ಟೇ ಕೇಂದ್ರ ಸರ್ಕಾರಕ್ಕೆ ಅಂತಿಮ ಐತೀರ್ಪಿನ ಪ್ರತಿ ನೀಡಲಿರುವ ನ್ಯಾಯಾಧಿಕರಣ

- ಹೀಗಾಗಿ ಅಲ್ಲಿಯವರೆಗೆ ಅಧಿಸೂಚನೆ ಪ್ರಕಟಣೆ ಸಾಧ್ಯವಿಲ್ಲ: ಗೋವಾ ಅಡ್ವೋಕೇಟ್‌ ಜನರಲ್‌ ಹೇಳಿಕೆ