*  ಕುಡಿಯುವ ನೀರಿಗೆ ಇದೇ ಮೊದಲ ಬಾರಿ ಶುಲ್ಕ ವಿಧಿಸಲು ಸಿದ್ಧತೆ*  ಖಾಲಿ ಜಾಗಕ್ಕೆ ಶುಲ್ಕ, ಪ್ರತಿ ಕುಟುಂಬಕ್ಕೂ ನೈರ್ಮಲ್ಯ ಶುಲ್ಕ ವಿಧಿಸುವ ಸಾಧ್ಯತೆ*  ಗ್ರಾಪಂ ತೆರಿಗೆ, ದರ, ಫೀಜು ನಿಯಮ-2021ಕ್ಕೆ ಕರಡು ಪ್ರಕಟ 

ಬೆಂಗಳೂರು(ಡಿ.30): ನಗರ ಪ್ರದೇಶಗಳ ಮಾದರಿಯಲ್ಲಿ ಇನ್ನು ಮುಂದೆ ಗ್ರಾಮ ಪಂಚಾಯತಿ(Gram Panchayat) ವ್ಯಾಪ್ತಿಯಲ್ಲೂ ಕುಡಿಯುವ ನೀರಿಗೆ ಶುಲ್ಕ ಹಾಗೂ ಖಾಲಿ ಜಾಗಕ್ಕೆ ತೆರಿಗೆ(Tax) ವಿಧಿಸುವುದು ಸೇರಿದಂತೆ ವಿವಿಧ ಬಗೆಯ ಶುಲ್ಕಗಳನ್ನು ವಿಧಿಸಲು ರಾಜ್ಯ ಸರ್ಕಾರ(Government of Karnataka) ಮುಂದಾಗಿದೆ.

ಗ್ರಾಮ ಪಂಚಾಯತಿಗಳು ಆರ್ಥಿಕವಾಗಿ ಸ್ವಾವಲಂಬಿಯಾಗಿ, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ ಸಾಮರ್ಥ್ಯ ಹೊಂದಲು ಸರ್ಕಾರ ‘ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಫೀಜುಗಳು) ನಿಯಮ-2021ರ ಕರಡನ್ನು ಪ್ರಕಟಿಸಿದ್ದು, ಇದರಲ್ಲಿ ಶುಲ್ಕ ವಿಧಿಸುವ ಪ್ರಸ್ತಾಪವಿದೆ. ಈ ಬಗ್ಗೆ ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆಗಳನ್ನು ಆಹ್ವಾನಿಸಿದೆ.

ಓಲಾ, ಉಬರ್‌, ಸ್ವಿಗ್ಗಿ, ಜೊಮ್ಯಾಟೋ ಸೇವೆ ದುಬಾರಿ: ಜ.1ರಿಂದ ಮಹತ್ವದ ಬದಲಾವಣೆ!

ಯಾವುದಕ್ಕೆ ಎಷ್ಟು ದರ:

ಗ್ರಾಮೀಣ ಪ್ರದೇಶಗಳಿಗೆ(Rural Areas) ಪೂರೈಸುವ ಕುಡಿಯುವ ನೀರಿಗೆ ಇದುವರೆಗೂ ಯಾವುದೇ ಶುಲ್ಕವಿರಲಿಲ್ಲ. ಇದೇ ಮೊದಲ ಬಾರಿಗೆ ಶುಲ್ಕ ವಿಧಿಸುವ ಪ್ರಸ್ತಾಪ ಈ ಕರಡಿನಲ್ಲಿದೆ. ಈ ಶುಲ್ಕವನ್ನು ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ನಿಗದಿ ಮಾಡಲಿದೆ. ಇನ್ನು ಕುಡಿಯುವ ನೀರಿನ ಹೊಸ ಸಂಪರ್ಕ ಪಡೆಯಲು ವಸತಿ ಕಟ್ಟಡಗಳಿಗೆ 2 ಸಾವಿರ ರು., ವಾಣಿಜ್ಯ, ವಸತಿಯೇತರ ಮತ್ತು ಇತರ ಕಟ್ಟಡಗಳಿಗೆ 3 ಸಾವಿರ ರು. ಶುಲ್ಕ ಪಾವತಿಸುವ ಪ್ರಸ್ತಾಪ ಮಾಡಲಾಗಿದೆ.

ವಿವಿಧ ಉದ್ದೇಶಗಳಿಗಾಗಿ ಗ್ರಾಮ ಪಂಚಾಯತಿಗಳು ನೀಡುವ ನಿರಾಕ್ಷೇಪಣ ಪತ್ರಗಳಿಗೆ 200 ಶುಲ್ಕ, ಇ-ಸ್ವತ್ತು ಹಾಗೂ ಬಾಪೂಜಿ ಸೇವಾ ಕೇಂದ್ರದ ಮೂಲಕ ನೀಡುವ ಪ್ರತಿ ಸೇವೆಗಳಿಗೆ 50 ರು. ಶುಲ್ಕ, ಗ್ರಾಮ ಪಂಚಾಯತಿಗಳ ಆಸ್ತಿ ವಿವರಗಳ ವಹಿಯಲ್ಲಿ ಮಾಲಿಕನ ಹೆಸರು ಸೇರ್ಪಡೆ, ಬದಲಾವಣೆಗೆ 1000 ರು. ವಿಧಿಸುವ ಪ್ರಸ್ತಾಪ ಮಾಡಲಾಗಿದೆ.

ಕಟ್ಟಡ, ಖಾಲಿ ಜಾಗಕ್ಕೂ ತೆರಿಗೆ:

ವಸತಿ, ವಾಣಿಜ್ಯ ಮತ್ತು ಕೈಗಾರಿಕೆ ಕಟ್ಟಡ ಹಾಗೂ ಖಾಲಿ ಜಾಗ ಅಥವಾ ಅವರೆಡರ ಮೇಲೆ, ವಸತಿಯೇತರ ಕಟ್ಟಡ ಹಾಗೂ ಖಾಲಿ ಜಾಗಗಳ ಮೇಲೆ ಅಥವಾ ಅವರೆಡರ ಮೇಲೆ, ಭೂ ಪರಿವರ್ತಿತ ಖಾಲಿ ಜಮೀನಿನ ಮೇಲೆ ತೆರಿಗೆ ವಿಧಿಸಲು ಉದ್ದೇಶಿಸಲಾಗಿದೆ. ಹಾಗೆಯೇ ಕಾನೂನು ಬಾಹಿರ ಕಟ್ಟಡಗಳ ಮೇಲೆ ತೆರಿಗೆ ವಿಧಿಸಲು ಉದ್ದೇಶಿಸಲಾಗಿದೆ.

Industrial Tax : ಕೈಗಾರಿಕಾ ತೆರಿಗೆ ಇಳಿಕೆಗೆ ಸರ್ಕಾರದ ಸಮ್ಮತಿ

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೈರ್ಮಲ್ಯ, ಶುಚಿತ್ವ ಕಾಪಾಡಲು ಪ್ರತಿ ಕುಟುಂಬಕ್ಕೆ ನೈರ್ಮಲ್ಯ ಶುಲ್ಕ, ಸಂತೆ, ಮಾರುಕಟ್ಟೆ, ಹಾಗೂ ರಸ್ತೆ ಬದಿ ಮಾರಾಟ ಸ್ಥಳಗಳಿಗೆ ಪ್ರತಿ ದಿನಕ್ಕೆ ಶುಲ್ಕ, ಗ್ರಾ.ಪಂ. ವ್ಯಾಪ್ತಿಯಲ್ಲಿ ಪ್ರವಾಸಿ ಸ್ಥಳ, ಪ್ರೇಕ್ಷಣಿಯ ಹಾಗೂ ಯಾತ್ರಾ ಸ್ಥಳಗಳಲ್ಲಿ ಪಂಚಾಯತಿಗಳು ಒದಗಿಸಿದ ವಾಹನ ನಿಲ್ದಾಣಗಳಲ್ಲಿ ಬಸ್‌, ಲಾರಿಗಳಿಗೆ ಪ್ರತಿ ದಿನಕ್ಕೆ ಶುಲ್ಕ, ಫೈಬರ್‌ ಕೇಬಲ್‌, ಗ್ಯಾಸ್‌/ಪೆಟ್ರೋಲಿಯಂ, ಇತರೆ ಪೈಪ್‌ ಲೈನ್‌ ಹಾಕಲು ಶುಲ್ಕ, ಮನೋರಂಜನೆ ಮೇಲೆ ಶುಲ್ಕ ವಿಧಿಸಲು ಸರ್ಕಾರ ಉದ್ದೇಶಿಸಿದೆ.

ತೆರಿಗೆ ವಿನಾಯಿತಿ:

ಜಿ.ಪಂ. ತಾ.ಪಂ. ಹಾಗೂ ಗ್ರಾಮ ಪಂಚಾಯತಿಗಳಿಗೆ ಸೇರಿದ ಕಟ್ಟಡ ಮತ್ತು ಖಾಲಿ ನಿವೇಶನಗಳು, ಸಂಪೂರ್ಣ ಧರ್ಮಾರ್ಥ ಸಂಸ್ಥೆಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಆದರೆ ಸೈನಿಕರು, ಮಾಜಿ ಸೈನಿಕರು, ಸೈನಿಕರ ವಿಧವಾ ಮಹಿಳೆಯರ ಸ್ವಂತ ವಾಸದ ಕಟ್ಟಡ, ವಿಶೇಷ ಚೇತನರು ಮತ್ತು ವಿಧವೆಯರು, ಏಡ್ಸ್‌, ಕುಷ್ಠರೋಗ ಪೀಡಿತ ಮಾಲಿಕರ ವಾಸದ ಮನೆಗಳಿಗೆ, ಸರ್ಕಾರದ ಯೋಜನೆಯಡಿ ನೋಂದಾಯಿಸಲ್ಪಟ್ಟ ಮಹಿಳಾ ಸ್ವಸಹಾಯ ಸಂಘ, ಒಕ್ಟೂಟ, ವಿಶೇಷ ಚೇತನರು ನಡೆಸುವ ಸಣ್ಣ ವಾಣಿಜ್ಯ ಘಟಕಗಳಿಗೆ ಶೇ.50ರಷ್ಟು ತೆರಿಗೆ ವಿನಾಯಿತಿ ನೀಡಲು ಉದ್ದೇಶಿಸಲಾಗಿದೆ.