ಓಲಾ, ಉಬರ್, ಸ್ವಿಗ್ಗಿ, ಜೊಮ್ಯಾಟೋ ಸೇವೆ ದುಬಾರಿ: ಜ.1ರಿಂದ ಮಹತ್ವದ ಬದಲಾವಣೆ!
* ಓಲಾ, ಉಬರ್, ಸ್ವಿಗ್ಗಿ, ಜೊಮ್ಯಾಟೋ ಸೇವೆ ತುಟ್ಟಿ
* ಜ.1ರಿಂದ ಆಟೋ, ಕಾರು, ಆಹಾರ ಸೇವೆ ನೀಡುವ ಆ್ಯಪ್‌ಗಳು ಜಿಎಸ್‌ಟಿ ವ್ಯಾಪ್ತಿಗೆ, ಈ ಸೇವೆಗೆ ಶೇ.5 ತೆರಿಗೆ
* ಪಾದರಕ್ಷೆ, ಬಟ್ಟೆಗೂ ಇನ್ನು ವಿವಿಧ ಜಿಎಸ್‌ಟಿ ಬದಲು ಶೇ.12ರ ಏಕರೂಪದ ತೆರಿಗೆ
ನವದೆಹಲಿ(ಡಿ.27): ಹೊಸ ವರ್ಷದಿಂದ ದಿನಬಳಕೆ ವಸ್ತುಗಳು, ಎಲೆಕ್ಟ್ರಾನಿಕ್, ಆಟೋಮೊಬೈಲ್ ಸರಕುಗಳು ದುಬಾರಿಯಾಗಲಿವೆ ಎಂಬ ಸುದ್ದಿಯ ಬೆನ್ನಲ್ಲೇ ಇನ್ನಷ್ಟುಸೇವೆಗಳು ಹಾಗೂ ಸರಕುಗಳು ದುಬಾರಿಯಾಗಲಿವೆ ಎಂಬ ಸುದ್ದಿ ಬಂದಿದೆ. ಹಲವು ಸೇವೆಗಳ ಮೇಲೆ ಜನವರಿ 1ರಿಂದ ಜಿಎಸ್‌ಟಿ (ಸರಕು-ಸೇವಾ ತೆರಿಗೆ) ಹೆಚ್ಚಲಿದ್ದು, ಇದು ಜನರ ಜೇಬಿಗೆ ಕತ್ತರಿ ಹಾಕುವುದು ನಿಶ್ಚಿತವಾಗಿದೆ.
ಈವರೆಗೆ ವಿಭಿನ್ನ ಜಿಎಸ್‌ಟಿ ದರಗಳನ್ನು ಹೊಂದಿದ್ದ ಪಾದರಕ್ಷೆಗಳಿಗೆ ಇನ್ನು ಮುಂದೆ ಶೇ.12ರಷ್ಟುಏಕರೂಪದ ಜಿಎಸ್‌ಟಿ ಅನ್ವಯವಾಗಲಿದೆ. ಇದೇ ರೀತಿ ಹತ್ತಿಬಟ್ಟೆಹೊರತುಪಡಿಸಿ ಮಿಕ್ಕ ಎಲ್ಲ ಉಡುಪುಗಳಿಗೂ ಶೇ.5ರಷ್ಟಿದ್ದ ಜಿಎಸ್‌ಟಿ ಶೇ.12ಕ್ಕೆ ಹೆಚ್ಚಳವಾಗಲಿದ್ದು ಈ ವಸ್ತುಗಳು ದುಬಾರಿಯಾಗಲಿವೆ.
ಇನ್ನು ಓಲಾ, ಊಬರ್, ರಾರಯಪಿಡೋದಂಥ ಆಟೋರಿಕ್ಷಾ/ಕಾರು/ಬೈಕ್ ಆ್ಯಪ್‌ಗಳ ಮೂಲಕ ಪ್ರಯಾಣಕ್ಕೆ ಬುಕ್ ಮಾಡಿದರೆ ಅದು ಕೂಡ ದುಬಾರಿಯಾಗಲಿದೆ. ಏಕೆಂದರೆ ಇದರ ಮೇಲೆ ಜ.1ರಿಂದ ಶೇ.5ರಷ್ಟುಜಿಎಸ್‌ಟಿ ಹೊರೆ ಬೀಳಲಿದೆ. ಆದರೆ ನೇರವಾಗಿ ಮೀಟರ್ ಆಧರಿತ ರಿಕ್ಷಾ ಪ್ರಯಾಣಕ್ಕೆ ಜಿಎಸ್‌ಟಿ ಅನ್ವಯ ಆಗುವುದಿಲ್ಲ. ಮೀಟರ್ ಎಷ್ಟುದರ ತೋರಿಸುತ್ತದೋ ಅಷ್ಟೇ ಹಣ ಕೊಡಬೇಕು.
ಇನ್ನು ಇ-ಕಾಮರ್ಸ್ ಆಪರೇಟರ್‌ಗಳಾದ ಸ್ವಿಗ್ಗಿ, ಝೊಮ್ಯಾಟೋದಂಥ ತಿಂಡಿ-ತಿನಿಸು ಪೂರೈಕೆ ಸೇವೆಗಳ ಮೇಲೆ ಕೂಡ ಜಿಎಸ್‌ಟಿ ಹಾಕಲಾಗುತ್ತದೆ. ಆದರೆ ಇದು ಗ್ರಾಹಕರಿಗೆ ಹೊರೆ ಆಗುವುದಿಲ್ಲ. ಏಕೆಂದರೆ ತಿಂಡಿ-ತಿನಿಸಿಗೆ ಗ್ರಾಹಕರಿಂದ ಹೋಟೆಲ್‌ಗಳು ಜಿಎಸ್‌ಟಿ ಸಂಗ್ರಹಿಸುತ್ತಿದ್ದವು. ಇದರ ಬದಲು ಇನ್ನು ಸ್ವಿಗ್ವಿ, ಝೊಮ್ಯಾಟೋಗಳು ಸಂಗ್ರಹಿಸಿ ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. ಆದರೆ ಜಿಎಸ್‌ಟಿ ನೆಪದಲ್ಲಿ ಈ ಕಂಪನಿಗಳು ಶುಲ್ಕದ ನೆಪದಲ್ಲಿ ಮತ್ತಷ್ಟುವಸೂಲಿ ಮಾಡಲಿವೆ. ಆಹಾರ ಸರಬರಾಜು ಕಂಪನಿಗಳು ಈವರೆಗೂ ವಹಿವಾಟಿನ ಸುಳ್ಳು ಲೆಕ್ಕ ತೋರಿಸುತ್ತಿದ್ದ ಕಾರಣ 2 ವರ್ಷದಲ್ಲಿ ಸರ್ಕಾರದ ಬೊಕ್ಕಸಕ್ಕೆ 2000 ಕೋಟಿ ರು. ಆದಾಯ ಖೋತಾ ಆಗಿತ್ತು. ಈ ಕಾರಣ ಈ ಕ್ರಮ ಜರುಗಿಸಲಾಗಿದೆ.
ಜಿಎಸ್‌ಟಿ ವಂಚನೆ ತಡೆಗೆ ಆಧಾರ್ ಕಡ್ಡಾಯ
ನವದೆಹಲಿ: ಜಿಎಸ್‌ಟಿ ಪಾವತಿಯಲ್ಲಿ ನಡೆಯುತ್ತಿವೆ ಎನ್ನಲಾದ ವಂಚನೆ ತಡೆಗಟ್ಟಲು ಆಧಾರ್ ಕಡ್ಡಾಯಗೊಳಿಸಲಾಗಿದೆ. ಕಂಪನಿಗಳು ಜಿಎಸ್‌ಟಿಯನ್ನು ಸರ್ಕಾರಕ್ಕೆ ಪಾವತಿಸಿದ ಬಳಿಕ, ಕಟ್ಟಿದ ಹಣದಲ್ಲಿ ಕೆಲ ಭಾಗವನ್ನು ಪುನಃ ರೀಫಂಡ್ ಮಾಡಿಸಿಕೊಳ್ಳಲು ಅವಕಾಶವಿದೆ. ಆದರೆ ಕ್ಲೇಮ್ ಮಾಡಿಕೊಳ್ಳಲು ಕೆಲವು ಅಡ್ಡದಾರಿಯನ್ನು ಅವು ಬಳಸುತ್ತಿದ್ದವು ಎಂಬ ಆರೋಪವಿತ್ತು. ಹೀಗಾಗಿ ಇದನ್ನು ತಡೆಯಲು ಇನ್ನು ಜಿಎಸ್‌ಟಿ ರೀಫಂಡ್ ಕ್ಲೇಮ್‌ಗೆ ಆಧಾರ್ ಕಡ್ಡಾಯವಾಗಲಿದೆ.
ತೆರಿಗೆ ಯಾವುದಕ್ಕೆ ಎಷ್ಟು?
* ಆ್ಯಪ್ ಮೂಲಕ ಆಟೋ ಕಾರು ಬುಕಿಂಗ್ ಶೇ.5
* ಸ್ವಿಗ್ಗಿ, ಜೊಮ್ಯಾಟೋದಲ್ಲಿ ಆಹಾರ ಬುಕಿಂಗ್ ಶೇ.5
* ಎಲ್ಲಾ ಮಾದರಿಯ ಪಾದರಕ್ಷೆಗಳು ಶೇ.12
* ರೆಡಿಮೇಡ್ ಸೇರಿ ಎಲ್ಲಾ ಬಟ್ಟೆಗಳು(ಕಾಟನ್ ಬಟ್ಟೆಬಿಟ್ಟು) ಶೇ.12