ಬೆಂಗಳೂರು [ನ.08] : ರಾಜ್ಯದ 58 ನಗರಸಭೆ, 116 ಪುರಸಭೆ ಹಾಗೂ 92 ಪಟ್ಟಣ ಪಂಚಾಯತಿಗಳು ಸೇರಿದಂತೆ ಒಟ್ಟು 226 ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ 2018 ರ ಸೆ. 3 ರಂದು ಹೊರಡಿಸಿದ್ದ ಮೂಲ ಅಧಿ ಸೂಚನೆಯನ್ನು ಹಿಂಪಡೆದು ಒಂದು ತಿಂಗಳೊಳಗೆ ಹೊಸ ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. 

ಮೀಸಲಾತಿ ಅಧಿಸೂಚನೆ ಸಂಬಂಧ ಹಲವು ಮೇಲ್ಮನವಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯ ಪೀಠಕ್ಕೆ ಸರ್ಕಾರ ಈ ಮಾಹಿತಿ ನೀಡಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ, 2018 ರ ಸೆ. 3ರ ಮೂಲ ಅಧಿಸೂಚನೆಯಲ್ಲಿ ಕೆಲವೊಂದು ಲೋಪಗಳಾಗಿವೆ. ಈ ಹಿನ್ನೆಲೆಯಲ್ಲಿ ಆ ಅಧಿಸೂಚನೆಯನ್ನು ವಾಪಸ್ ಪಡೆಯಲು ಸರ್ಕಾರ ನಿರ್ಧರಿಸಿದೆ. ಮೀಸಲಾತಿಯನ್ನು ಮರು ನಿಗದಿಪಡಿಸಿ ಒಂದು ತಿಂಗಳಲ್ಲಿ ಹೊಸ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದರು.