* ಯಾವ ಯೋಜನೆ ಜತೆಗೂ ಲಸಿಕೆ ಜೋಡಣೆ ಇಲ್ಲ* ಚಾಮರಾಜನಗರ ಡೀಸಿ ಆದೇಶ ಹಿನ್ನೆಲೆಯಲ್ಲಿ ಈ ಕ್ರಮ* ಇಂಥ ಕ್ರಮದ ಬದಲು ಬೇರೆ ಜಾಗೃತಿ ಕಾರ್ಯಕ್ರಮ ರೂಪಿಸಿ 

ಬೆಂಗಳೂರು(ಸೆ.03):  ಸರ್ಕಾರದಿಂದ ಕೊರೋನಾ ಲಸಿಕೆ ಪಡೆಯುವುದನ್ನು ಯಾವುದೇ ಯೋಜನೆಗೆ ಕಡ್ಡಾಯವಾಗಿ ಜೋಡಣೆ ಮಾಡಿಲ್ಲ. ಹೀಗಾಗಿ ಲಸಿಕೆ ಪಡೆಯದವರಿಗೆ ಪಿಂಚಣಿ, ಪಡಿತರ ನಿರಾಕರಿಸುವಂತಿಲ್ಲ ಎಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಅಧಿಕೃತ ಆದೇಶ ನೀಡಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ಲಸಿಕೆ ಪಡೆಯದಿದ್ದರೆ ‘ಪಿಂಚಣಿ, ಪರಿಷತರ ಇರುವುದಿಲ್ಲ’ (ನೋ ಪೆನ್ಷನ್‌, ನೋ ರೇಷನ್‌) ಎಂದು ಜಿಲ್ಲಾಧಿಕಾರಿಗಳು ವಿವಾದಿತ ಆದೇಶ ಹೊರಡಿಸಿದ್ದರು. ಕೆಲವು ತಹಸೀಲ್ದಾರ್‌ಗಳೂ ಸಹ ಇಂತಹ ಆದೇಶ ಮಾಡಿದ್ದರು.

ನೋ ವ್ಯಾಕ್ಸಿನ್, ನೋ ರೇಷನ್; ರೇಷನ್ ಅಂಗಡಿ ಮಾಲಿಕರ ಯಡವಟ್ಟಿಗೆ ಜನ ಕಂಗಾಲು.!

ಶುಕ್ರವಾರ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಪತ್ರ ಬರೆದಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಕೊರೋನಾ ಲಸಿಕೆಯನ್ನು ಯಾವುದೇ ಸರ್ಕಾರದ ಯೋಜನೆಗಳೊಂದಿಗೆ ಜೋಡಿಸಿಲ್ಲ. ಹೀಗಾಗಿ ಇಂತಹ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವಂತಿಲ್ಲ. ಒಂದು ವೇಳೆ ಇಂತಹ ಕ್ರಮಗಳಿಗೆ ಮುಂದಾಗಿದ್ದರೆ ಕೂಡಲೇ ಕೈ ಬಿಡಬೇಕು. ಕೊರೋನಾ ಲಸಿಕೆ ಕುರಿತು ಜಾಗೃತಿ ಮೂಡಿಸಲು ಬೇರೆ ಕ್ರಮಗಳನ್ನು ಅನುಸರಿಸಬೇಕು ಎಂದು ಸೂಚಿಸಿದ್ದಾರೆ.

ಈ ಬಗ್ಗೆ ಬುಧವಾರ ಪ್ರತಿಕ್ರಿಯಿಸಿದ್ದ ಸಚಿವ ಡಾ.ಕೆ. ಸುಧಾಕರ್‌, ಸರ್ಕಾರದ ಹಂತದಲ್ಲಿ ಅಂತಹ ನಿಯಮ ಇಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಸೂಚನೆ ಕೊಡಿಸಿ ಸರ್ಕಾರದಿಂದಲೂ ಸ್ಪಷ್ಟನೆ ಕೊಡಲಾಗುವುದು ಎಂದು ಹೇಳಿದ್ದರು. ಅದರಂತೆ ಶುಕ್ರವಾರ ಮುಖ್ಯ ಕಾರ್ಯದರ್ಶಿಯವರಿಂದಲೇ ಅಧಿಕೃತ ಆದೇಶ ಹೊರಬಿದ್ದಿದೆ.