ಬೆಂಗಳೂರು(ಡಿ.23): ಕೋವಿಡ್‌-19ರ ರೋಗ ಲಕ್ಷಣಗಳಾದ ಜ್ವರ, ಶೀತ, ಕೆಮ್ಮು, ಗಂಟಲು ಕೆರೆತ ಮತ್ತು ಉಸಿರಾಟದ ಸಮಸ್ಯೆಗಳಿರುವ ವ್ಯಕ್ತಿಗಳು ಮಾರುಕಟ್ಟೆ, ಅಂಗಡಿ, ಮಳಿಗೆಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರೋಗ ಲಕ್ಷಣ ರಹಿತರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕೋವಿಡ್‌-19ರ ಎರಡನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಮಾರುಕಟ್ಟೆ ಮತ್ತು ಅಂಗಡಿ ಮಳಿಗೆಗಳ ನಿರ್ವಹಣೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾರ್ಗಸೂಚಿಯೊಂದನ್ನು ಹೊರಡಿಸಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಗರಿಷ್ಠ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ಬ್ರಿಟನ್‌ ವೈರಸ್‌ ಭೀತಿ: ಮತ್ತೆ ಲಾಕ್‌ಡೌನ್‌ ಆಗುತ್ತಾ?

ಅಂಗಡಿ ಮಳಿಗೆಗಳ ಪ್ರವೇಶ ದ್ವಾರದಲ್ಲೇ ಎಲ್ಲ ಉದ್ಯೋಗಿಗಳು ಮತ್ತು ಗ್ರಾಹಕರಿಗೆ ಥರ್ಮಲ್‌ ಸ್ಕ್ಯಾನ್‌ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಮುಖಗವಸು ಅಥವಾ ಫೇಸ್‌ ಕವರ್‌ ಧರಿಸಿರಲೇಬೇಕು. ಆರು ಅಡಿ ಅಂತರದ ಪಾಲನೆ ಆಗುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಆನ್‌ಲೈನ್‌ ವ್ಯವಹಾರಕ್ಕೆ ಉತ್ತೇಜನ ನೀಡಬೇಕು. ಪಾಳಿಯಂತೆ ಅಂಗಡಿ ಮುಂಗಟ್ಟು ತೆರೆಯುವುದು ಮತ್ತು ಅಂಗಡಿಗಳು ತೆರೆಯುವ ಅವಧಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಲೋಚಿಸಬೇಕು. ಅನಧಿಕೃತ ಪಾರ್ಕಿಂಗ್‌ಗೆ ಅವಕಾಶ ನೀಡಬಾರದು. ಜನ ಸಂದಣಿಯಾಗದಂತೆ ನೋಡಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.