ಈಶಾನ್ಯ ಸಾರಿಗೆ ಇನ್ನು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ
- ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಎನ್‌ಇಕೆಆರ್‌ಟಿಸಿ) ಹೆಸರು ಬದಲಾವಣೆ
- ‘ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ’ ಎಂದು ಮರುನಾಮಕರಣ
- ಸಾರಿಗೆ ನಿಗಮಗಳ ಅಧಿನಿಯಮ 1950ರ ಪ್ರಕಾರ ಮರು ನಾಮಕರಣ
ಬೆಂಗಳೂರು (ಜು.08): ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಎನ್‌ಇಕೆಆರ್‌ಟಿಸಿ) ಹೆಸರನ್ನು ‘ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ’ ಎಂದು ರಾಜ್ಯ ಸರ್ಕಾರ ಬುಧವಾರ ಮರುನಾಮಕರಣ ಮಾಡಿ ಆದೇಶಿಸಿದೆ.
ಈ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ, ಸಾರಿಗೆ ನಿಗಮಗಳ ಅಧಿನಿಯಮ 1950ರ ಪ್ರಕಾರ ಮರು ನಾಮಕರಣ ಮಾಡಿದ್ದು, ಇನ್ನು ಮುಂದೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಎಂದು ಜಾರಿಗೆ ಬರಲಿದೆ ಎಂದು ತಿಳಿಸಿದರು.
ಈಶಾನ್ಯ ಸಾರಿಗೆಯಿಂದ ಈಗ 'ಮಹಿಳಾ ಸ್ನೇಹಿ' ಬಸ್!
ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣವಾದ ಬಳಿಕ ಈಶಾನ್ಯ ಸಾರಿಗೆಗೆ ಮರು ನಾಮಕರಣ ಮಾಡಬೇಕು ಎಂದು ಸ್ಥಳೀಯರಿಂದ ಹಲವು ದಿನಗಳಿಂದ ಒತ್ತಡ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಹೆಸರನ್ನು ಮರು ನಾಮಕರಣ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ(ಎನ್‌ಇಕೆಆರ್‌ಟಿಸಿ)ವನ್ನು 2000ರ ಆಗಸ್ಟ್ 15ರಂದು ಸ್ಥಾಪಿಸಲಾಗಿತ್ತು. ಈ ಸಂಸ್ಥೆಯ ವಿಭಾಗದಲ್ಲಿ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ಹೊಸಪೇಟೆ ಜಿಲ್ಲೆಗಳು ಬರುತ್ತವೆ.
ಕೆಎಸ್‌ಆರ್‌ಟಿಸಿಗೆ 4 ಸಾವಿರ ಕೋಟಿ ರು. ನಷ್ಟ
ಸಂಸ್ಥೆಗಳ ವಿಭಜನೆ: ಪ್ರಾರಂಭದಲ್ಲಿ ಕೆಎಸ್‌ಆರ್‌ಟಿಸಿ ಮಾತ್ರ ಇತ್ತು. ಇದನ್ನು ರಾಜ್ಯ ಸರ್ಕಾರ 1997ರ ಆಗಸ್ಟ್ 15ರಂದು ವಿಂಗಡಿಸಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯನ್ನು ಹುಬ್ಬಳ್ಳಿಯಲ್ಲಿ ಪ್ರಾರಂಭಿಸಿತು. ಬಳಿಕ 2000ದ ಆಗಸ್ಟ್ 18ರಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯನ್ನು ಕಲಬುರಗಿಯಲ್ಲಿ ಸ್ಥಾಪಿಸಿ ಆರ್ಥಿಕವಾಗಿ ಸ್ವತಂತ್ರಗೊಳಿಸಲಾಗಿತ್ತು.
ಬಸ್, ಡಿಪೋ ವಾಹನಗಳ ಮಾಹಿತಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಚೇರಿ ಕಲಬುರಗಿಯಲ್ಲಿದೆ. ಒಟ್ಟು 9 ವಿಭಾಗಗಳು, 52 ಡಿಪೋಗಳು, 152 ಬಸ್ ನಿಲ್ದಾಣಗನ್ನು ಹೊಂದಿದೆ. ಅಲ್ಲದೆ, ಯಾದಗಿರಿಯಲ್ಲಿ ಪ್ರಾದೇಶಿಕ ಕಾರ್ಯಾಗಾರ, ಹುಮ್ನಾಬಾದ್‌ನಲ್ಲಿ ತರಬೇತಿ ಕೇಂದ್ರ, ಹಗರಿಬೊಮ್ಮನಹಳ್ಳಿಯಲ್ಲಿ ಚಾಲಕರ ತರಬೇತಿ ಕೇಂದ್ರ, ಕಲಬುರಗಿ ಮತ್ತು ಬಳ್ಳಾರಿಯಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗಗಳನ್ನು ಹೊಂದಿದೆ. ಜೊತೆಗೆ, 9 ವಿಭಾಗೀಯ ಕಾರ್ಯಾಗಾರಗಳನ್ನು ಹೊಂದಿದೆ.
ಈ ಸಂಸ್ಥೆಯಲ್ಲಿ ಪ್ರಸ್ತುತ 4,700 ವಾಹನಗಳು, 19,298 ಉದ್ಯೋಗಿಗಳು ಸೇವೆ ಸಲ್ಲಿಸುತ್ತಿದ್ದಾರೆ. ದಿನಕ್ಕೆ 4,254 ಟ್ರಿಪ್‌ಗಳ ಬಸ್‌ಗಳು ಸಂಚಾರ ನಡೆಸುತ್ತಿದ್ದು ಪ್ರತಿ ದಿನ 14.50 ಪ್ರಯಾಣಿಕರು ಈ ನಿಗಮದ ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ. ಮಹಾರಾಷ್ಟ್ರಕ್ಕೆ, ತೆಲಂಗಾಣಕ್ಕೆ, ಆಂಧ್ರಪ್ರದೇಶ, ತಮಿಳುನಾಡಿಗೆ 2 ಹಾಗೂ ಗೋವಾ ರಾಜ್ಯಕ್ಕೆ ಪ್ರತಿದಿನ ಕಾರ್ಯಚರಣೆ ನಯುತ್ತಿದೆ.