ಸೈಬರ್ ಫ್ರಾಡ್ ದೇಶಾದ್ಯಂತ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಇದೀಗ ಸೈಬರ್ ಫ್ರಾಡ್ ವರದಿ ಬಹಿರಂಗವಾಗಿದೆ. ಐಟಿ ಸಿಟಿ ಹೊಂದಿರುವ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕೋಟಿ ಕೋಟಿ ರೂಪಾಯಿ ಸೈಬರ್ ವಂಚಕರ ಪಾಲಾಗಿದೆ. ಕರ್ನಾಟಕದ ಅಮಾಯಕರು ಸೈಬರ್ ಫ್ರಾಡ್‌ನಿಂದ ಕಳೆದುಕೊಂಡಿದ್ದು ಎಷ್ಟು ಕೊಟಿ ಗೊತ್ತಾ?
ಬೆಂಗಳೂರು (ಜೂ. 29) ನಕಲಿ ಪೊಲೀಸ್ ಆಗಿ, ಉದ್ಯೋಗ ನೆಪ, ಎಐ ಮೂಲಕ ಫ್ರಾಡ್, ದೇಣಿಗೆ, ಬ್ಯಾಂಕ್ ಖಾತೆ, ಮೆಸೇಜ್, ಲಿಂಕ್, ಡಿಜಿಟಲ್ ಅರೆಸ್ಟ್, ಹೀಗೆ ಹೊಸ ಹೊಸ ವಿಧಾನದ ಮೂಲಕ ಸೈಬರ್ ವಂಚಕರು ಪ್ರತಿ ದಿನ ಅಮಾಯಕರನ್ನು ಮೋಸ ಮಾಡುತ್ತಲೇ ಇದ್ದಾರೆ. ಸೈಬರ್ ಕ್ರೈಂ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೇಶಾದ್ಯಂತ ಪ್ರತಿ ದಿನ ಅಮಾಯಕರು ಹಣ ಕಳೆದುಕೊಳ್ಳುತ್ತಿದ್ದಾರೆ. ಈ ಪೈಕಿ ಕರ್ನಾಟಕದ ಅಂಕಿ ಅಂಶ ಬೆಚ್ಚಿ ಬೀಳಿಸುವಂತಿದೆ. ಕಾರಣ 2024ರಲ್ಲಿ ಕರ್ನಾಟಕದಲ್ಲಿ ಸೈಬರ್ ಫ್ರಾಡ್‌ನಿಂದ ಅಮಾಯಕರು ಬರೋಬ್ಬರಿ 2,915 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.
ಕರ್ನಾಟಕದ ಪೈಕಿ ಬೆಂಗಳೂರು ಪಾಲು ಶೇಕಡಾ 43
ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ (NCRP ) ವರದಿ ಪ್ರಕಾರ ಕರ್ನಾಟಕದಲ್ಲಿ ಸೈಬರ್ ಕ್ರೈಂ ಪ್ರಕರಣಗಳಲ್ಲಿ ಬರೋಬ್ಬರಿ 2,915 ಕೋಟಿ ರೂಪಾಯಿ ಹಣವನ್ನು ಅಮಾಯಕರು ಕಳೆದುಕೊಂಡಿದ್ದಾರೆ. ಈ ಪೈಕಿ ಬೆಂಗಳೂರಿನಿಂದ ಶೇಕಡಾ 43 ರಷ್ಟು ಹಣ ಸೈಬರ್ ವಂಚಕರ ಪಾಲಾಗಿದೆ. ಅಂದರೆ 2,915 ಕೋಟಿ ರೂಪಾಯಿಯಲ್ಲಿ ಬೆಂಗಳೂರಿನಿಂದ 664 ಕೋಟಿ ರೂಪಾಯಿ ಹಣ ಸೈಬರ್ ವಂಚಕರ ಪಾಲಾಗಿದೆ.
ಕರ್ನಾಟಕದಲ್ಲಿ 6.11 ಲಕ್ಷ ಸೈಬರ್ ಕ್ರೈಂ ಪ್ರಕರಣ
2024ರಲ್ಲಿ ಕರ್ನಾಟಕದಲ್ಲಿ ದಾಖಲಾದ ಸೈಬರ್ ಕ್ರೈಂ ಪ್ರಕರಣ ಸಂಖ್ಯೆ 6.11 ಲಕ್ಷ. 3.02 ಲಕ್ಷ ಪ್ರಕರಣಗಳು ಖಾಸಗಿ ಬ್ಯಾಂಕ್, 2.55 ಲಕ್ಷ ಪ್ರಕರಣಗಳು ರಾಷ್ಟ್ರೀಕೃತ ಬ್ಯಾಂಕ್ ಖಾತೆಗಳಲ್ಲಿ ನಡೆದಿದೆ. 2023ಕ್ಕೆ ಹೋಲಿಸಿದರೆ 2024ರ ಸಾಲಿನಲ್ಲಿ ಕರ್ನಾಟಕದ ಸೈಬರ್ ಕ್ರೈಂ ಪ್ರಕರಣಗಳು ನಾಲ್ಕು ಪಟ್ಟು ಹೆಚ್ಚಾಗಿದೆ. ಕಾರಣ 2023ರಲ್ಲಿ ಕರ್ನಾಟಕದಲ್ಲಿ 660 ಕೋಟಿ ರೂಪಾಯಿ ಸೈಬರ್ ಕ್ರೈಂ ಮೂಲಕ ಅಮಾಯಕರು ಕಳೆದುಕೊಂಡಿದ್ದರು. ಆದರೆ 2024ಕ್ಕೆ ಈ ಸಂಖ್ಯೆ 2,915 ಕೋಟಿ ರೂಪಾಯಿ ಆಗಿದೆ.
ಎಚ್ಚರಿಕೆ ಅಗತ್ಯ
ಬಹುತೇಕರು ಫೋನ್ ಬಳಕೆ ಮಾಡುತ್ತಾರೆ. ಹೀಗಾಗಿ ಅತೀವ ಎಚ್ಚರಿಕೆ ಅಗತ್ಯ. ನಕಲಿ ಕರೆ, ಮೆಸೇಜ್, ಒಟಿಪಿಗೆ ಬೇಡಿಕೆ, ಹಣಕ್ಕೆ ಬೇಡಿಕೆ ಇಟ್ಟರೆ ತಕ್ಷಣವೇ ಸೈಬರ್ ಅಪರಾಧ ವಿಭಾಗಕ್ಕೆ ದೂರು ನೀಡಿ. ಅನಗತ್ಯವಾಗಿ ಯಾವುದೇ ಲಿಂಕ್ ಕ್ಲಿಕ್ ಮಾಡಬೇಡಿ. ಬ್ಯಾಂಕ್ ಹೆಸರಿನಲ್ಲಿ, ಸಾಲದ ಹೆಸರಿನಲ್ಲಿ ಅಥವಾ ನಿಮ್ಮ ಮೇಲೆ ಪ್ರಕರಣ ದಾಖಲಾಗಿದೆ ಎಂಬ ನೆಪದಲ್ಲಿ ಮಾಹಿತಿ ಪಡೆದು ವಂಚಿಸುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಅನಗತ್ಯ ಕರೆ, ಅನಗತ್ಯ ಲಿಂಕ್ ಕ್ಲಿಕ್ ಮಾಡಿ ಮೋಸ ಹೋಗಬೇಡಿ. ಕರೆಗಳು ಬಂದಾಗ, ನಿಮ್ಮ ನಿಖರ ಮಾಹಿತಿ ನೀಡಿ ಬೆದರಿಸಿದಾಗ, ಅಥವಾ ಇನ್ಯಾವುದೇ ರೂಪದಲ್ಲಿ ಮೋಸ ಹೋಗಬೇಡಿ. ಈ ರೀತಿ ಸಂದರ್ಭ ಎದುರಾದರೆ ವಿಚಲಿತರಾಗಬೇಡಿ, ಸೈಬರ್ ಅಪರಾಧ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ.
